ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿ, ಸಿಎಸ್‌ ನೀವೇನೂ ಮಾಡಿದ್ದೀರಿ?: ಸಚಿವ ಈಶ್ವರ ಖಂಡ್ರೆ ತರಾಟೆ

ಮಾಹಿತಿ ಇಲ್ಲದೆ ಸಭೆಗೆ ಬಂದ ಬ್ರಿಮ್ಸ್‌ ನಿರ್ದೇಶಕ, ಸರ್ಜನ್‌
Published : 30 ಸೆಪ್ಟೆಂಬರ್ 2024, 16:10 IST
Last Updated : 30 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ಬೀದರ್‌: ‘ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್‌) ಎಷ್ಟು ಅನುದಾನ ಬಂದಿದೆ? ಅದಕ್ಕೆ ಎಷ್ಟು ಕ್ರಿಯಾ ಯೋಜನೆ ಮಾಡಿದ್ದೀರಿ? ಯಾವುದೇ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದೀರಿ. ಜಿಲ್ಲಾಧಿಕಾರಿ (ಡಿಸಿ), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಎಸ್‌) ನೀವೇನೂ ಮಾಡಿದ್ದೀರಿ? ಪರಿಶೀಲಿಸಲು ಆಗುವುದಿಲ್ಲವೇ?’

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ತರಾಟೆಗೆ ತೆಗೆದುಕೊಂಡರು.

ಬ್ರಿಮ್ಸ್‌ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ, ಸರ್ಜನ್‌ ಡಾ. ಮಹೇಶ ಬಿರಾದಾರ ಅವರು ಬ್ರಿಮ್ಸ್‌ ಪ್ರಗತಿ ಕುರಿತು ಸಭೆಗೆ ಮಾಹಿತಿ ಕೊಡಲು ಮುಂದಾದರು. ಸಚಿವ ಖಂಡ್ರೆ ಮಧ್ಯ ಪ್ರವೇಶಿಸಿ, ‘ಪ್ರಸಕ್ತ ಸಾಲಿನಲ್ಲಿ ಬ್ರಿಮ್ಸ್‌ಗೆ ಎಷ್ಟು ಅನುದಾನ ಬಂದಿದೆ. ಅದಕ್ಕೆ ಎಷ್ಟು ಕ್ರಿಯಾ ಯೋಜನೆಗಳನ್ನು ಮಾಡಿದ್ದೀರಿ? ಅದರ ಮಾಹಿತಿ ಕೊಡಿ’ ಎಂದು ಕೇಳಿದರು. ಆದರೆ, ಶೆಟಕಾರ, ಬಿರಾದಾರ ಬಳಿ ಮಾಹಿತಿ ಇರಲಿಲ್ಲ. ಸಪ್ಪೆ ಮೊರೆ ಹಾಕಿ ನಿಂತರು.

ಇದರಿಂದ ಮತ್ತಷ್ಟು ಕೆರಳಿದ ಖಂಡ್ರೆ, ‘ನಿಮ್ಮ ಬಳಿ ಎಷ್ಟಾದರೂ ಗಂಭೀರತೆ ಇದೆಯಾ’ ಎಂದು ಪ್ರಶ್ನಿಸಿದರು. ಆನಂತರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಿಇಒ ಡಾ.ಗಿರೀಶ್‌ ಬದೋಲೆ ಅವರನ್ನು ಉಲ್ಲೇಖಿಸಿ, ‘ನೀವಾದರೂ ಪರಿಶೀಲಿಸಬೇಕಿತ್ತು. ನೀವೇನೂ ಮಾಡಿದ್ದೀರಿ? ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಗೆ ಅಧಿಕಾರಿಗಳು ಬಂದು ಮಾಹಿತಿ ಕೊಡುತ್ತಿಲ್ಲವೆಂದರೆ ಏನರ್ಥ’ ಎಂದು ಖಾರವಾಗಿ ಕೇಳಿದರು.

‘ನಿಮ್ಮ ಬಳಿಯಾದರೂ ಬ್ರಿಮ್ಸ್‌ ಮಾಹಿತಿ ಇದೆಯಾ?’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರನ್ನು ಪ್ರಶ್ನಿಸಿದರು. ಆದರೆ, ಅವರಿಂದಲೂ ಉತ್ತರ ಸಿಗಲಿಲ್ಲ. ಕೆಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಡಾ. ಶಿವಕುಮಾರ ಶೆಟಕಾರ, ಇನ್ನೊಬ್ಬ ಅಧಿಕಾರಿಯೊಂದಿಗೆ ಸಭೆಗೆ ಬಂದು, ಸಚಿವರ ಬಳಿ ತೆರಳಿ ಮಾಹಿತಿ ನೀಡಿ ನಿರ್ಗಮಿಸಿದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ. ಕ್ರಿಯಾ ಯೋಜನೆ ಸಿದ್ಧವಾಗಿದೆಯಾ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಅವರನ್ನು ಖಂಡ್ರೆ ಪ್ರಶ್ನಿಸಿದರು.

ಅವರ ಬದಲು ಡಾ.ಉಮೇಶ ಬಿರಾದಾರ ಮಾತನಾಡಿ, ‘2023–24, 2024–25ನೇ ಸಾಲಿನ ಒಟ್ಟು ₹55 ಕೋಟಿ ಅನುದಾನ ಒಟ್ಟಿಗೆ ಬಂದಿದೆ. ಸರ್ಕಾರದ 12 ಕಾರ್ಯಕ್ರಮಗಳು, ವೇತನ ಸೇರಿದಂತೆ ಒಟ್ಟು ₹16 ಕೋಟಿ ಖರ್ಚಾಗಿದೆ’ ಎಂದು ತಿಳಿಸಿದರು.

‘ಕೇಂದ್ರದ ಯೋಜನೆಗಳ ಅನುದಾನಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಬೇಕು. ಆದರೆ, ಹಾಗೆ ಮಾಡುತ್ತಿಲ್ಲ’ ಎಂದು ಖಂಡ್ರೆ ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಸಂಸದ ಸಾಗರ್‌ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಒ ಡಾ.ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಪ್ರದೀಪ್‌ ಗುಂಟಿ, ಡಿಎಫ್‌ಒ ವಾನತಿ ಎಂ.ಎಂ. ಹಾಜರಿದ್ದರು.

ಸಭೆಗೆ ಎಫ್‌ಡಿಎ; ಸಿಎಸ್‌ ವಿರುದ್ಧ ಬೇಸರ

‘ದಿಶಾ ಸಭೆ ಬಹಳ ಮಹತ್ವದ್ದು. ಇದಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳೇ ಬರಬೇಕು. ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಳಂದ ತಾಲ್ಲೂಕಿನ ಮಾಹಿತಿ ಕೊಡಲು ಆ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಯೇ ಸಭೆಗೆ ಬರಬೇಕು. ಆದರೆ ಅವರ ಬದಲಿಗೆ ಎಫ್‌ಡಿಎ ಕಳಿಸಿದ್ದಾರೆ. ಹಾಜರಾತಿ ತೆಗೆದುಕೊಳ್ಳುವಾಗ ನಿಮಗೆ ಗೊತ್ತಾಗಲಿಲ್ಲವೇ? ನೀವೇನೂ ಮಾಡುತ್ತಿದ್ದೀರಿ?’ ಹೀಗೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿ.ಪಂ. ಸಿಇಒ ಡಾ.ಗಿರೀಶ್‌ ಬದೋಲೆ ವಿರುದ್ಧ ಬೇಸರದಿಂದಲೇ ಕೇಳಿದರು. ‘ದಿಶಾ ಸಭೆಗೆ ಯಾರು ಬೇಕಾದರೂ ಬರುವಂತಿಲ್ಲ. ಸಭೆಗೆ ಎಫ್‌ಡಿಎ ಅನ್ನು ಕಳಿಸಿದ ಮೇಲಧಿಕಾರಿ ವಿರುದ್ಧ ಅಮಾನತಿಗೆ ಶಿಫಾರಸು ಮಾಡಿ ಪತ್ರ ಬರೆಯಬೇಕು’ ಎಂದು ಸಿಇಒಗೆ ಖಂಡ್ರೆ ಸೂಚಿಸಿದರು.

‘ಬ್ರಿಮ್ಸ್‌ ದುರಸ್ತಿ ಕೆಲಸ ಬೇಗ ಆಗಲಿ’

‘ಬ್ರಿಮ್ಸ್‌ ಕಟ್ಟಡದ ದುರಸ್ತಿ ಕೆಲಸ ಬೇಗ ಶುರು ಮಾಡಬೇಕು. ಹಿಂದಿನ ಗುತ್ತಿಗೆದಾರನಿಗೆ ನೋಟಿಸ್‌ ಕೊಟ್ಟು ಹಣ ಪಡೆದು ಅದರಿಂದ ಕೆಲಸ ಮಾಡಿಸಬೇಕು. ಮಳೆ ಬಿದ್ದು ಅನಾಹುತ ಆಗಬಹುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅವರು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ಅವರಿಗೆ ಸೂಚಿಸಿದರು. ‘ಬೆಂಗಳೂರಿನ ಐಐಟಿಯವರು ಬ್ರಿಮ್ಸ್‌ಗೆ ಬಂದು ಪರಿಶೀಲಿಸಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಹಲವು ಕಡೆ ಸೋರಿಕೆ ಇರುವುದು ಗುರುತಿಸಿದ್ದಾರೆ. ಆದಷ್ಟು ಶೀಘ್ರ ಕೆಲಸ ಶುರು ಮಾಡಲಾಗುವುದು’ ಎಂದು ಕಾಮಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT