ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ | ಬಿಜೆಪಿಯಲ್ಲಿ ಗರಿಗೆದರಿದ ಉತ್ಸಾಹ

ಎಕ್ಸಿಟ್‌ ಪೋಲ್‌ನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮನೆಮಾಡಿದ ಸಂಭ್ರಮ
Published 3 ಜೂನ್ 2024, 6:22 IST
Last Updated 3 ಜೂನ್ 2024, 6:22 IST
ಅಕ್ಷರ ಗಾತ್ರ

ಬೀದರ್‌: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ಬೆನ್ನಲ್ಲೇ ಹೊರಬಿದ್ದ ‘ಎಕ್ಸಿಟ್‌ ಪೋಲ್‌’ನಿಂದ ಬಿಜೆಪಿಯಲ್ಲಿ ಸಂಭ್ರಮ ಇಮ್ಮಡಿಸಿದೆ.

ಈ ಸಲದ ಚುನಾವಣಾ ಫಲಿತಾಂಶ ಏನಾಗಬಹುದೋ? ಬಿಜೆಪಿ ಹಾಗೂ ಎನ್‌ಡಿಎಗೆ ಪೂರ್ಣ ಬಹುಮತ ಬರಬಹುದೋ ಅಥವಾ ಇಲ್ಲವೋ ಎಂಬ ಚರ್ಚೆಗಳು ನಡೆದಿದ್ದವು. ಶನಿವಾರ ಕೊನೆಯ ಹಂತದ ಮತದಾನ ಪೂರ್ಣಗೊಂಡ ನಂತರ ವಿವಿಧ ಸಂಸ್ಥೆಗಳ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗುವುದು ಖಚಿತ ಎಂದು ತಿಳಿಸಿವೆ. ಇದರಿಂದ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿದೆ. ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಹೆಚ್ಚಾಗಿದೆ.

ಇನ್ನು, ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ‘ಎಕ್ಸಿಟ್‌ ಪೋಲ್‌’ಗಳ ಸಮೀಕ್ಷೆಯಿಂದ ಗೊತ್ತಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷ 3ರಿಂದ 5 ಅಥವಾ 5ರಿಂದ 8 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿವೆ. ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ನಡುವೆಯೂ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಸಹಜವಾಗಿಯೇ ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಲ್ಲೂ ಆಶಾಭಾವನೆ ಹೆಚ್ಚಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆ ಈ ಸಲ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು. ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಮಗ ಸಾಗರ್‌ ಖಂಡ್ರೆಯವರು ಪ್ರಮುಖ ಎದುರಾಳಿಯಾಗಿದ್ದಾರೆ. ಮಗನನ್ನು ಕಣಕ್ಕಿಳಿಸಿದ ಈಶ್ವರ ಖಂಡ್ರೆ ತಮ್ಮ ಸಂಪೂರ್ಣ ಶಕ್ತಿಯನ್ನು ಚುನಾವಣೆಯಲ್ಲಿ ವಿನಿಯೋಗಿಸಿದ್ದರು. ಖೂಬಾ ಹಾಗೂ ಖಂಡ್ರೆ ಇಬ್ಬರೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಚುನಾವಣೆಯುದ್ದಕ್ಕೂ ವೈಯಕ್ತಿಕ ಟೀಕೆ, ಟಿಪ್ಪಣಿಗಳಿಗೆ ಇಳಿದಿದ್ದರು.

ಟಿಕೆಟ್‌ ಘೋಷಣೆ, ಆನಂತರವೂ ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಒಗ್ಗಟ್ಟು ಕಂಡು ಬರಲಿಲ್ಲ. ಜೆ.ಪಿ. ನಡ್ಡಾ ಹೊರತುಪಡಿಸಿದರೆ ವರ್ಚಸ್ಸು ಹೊಂದಿದ ತಾರಾ ಪ್ರಚಾರಕರು ಸುಳಿದಿರಲಿಲ್ಲ. ಬಿಜೆಪಿ ಅಭ್ಯರ್ಥಿ ಹಾಗೂ ಮುಖಂಡರು, ಕಾರ್ಯಕರ್ತರ ನಡುವೆ ಸಮನ್ವಯದ ಕೊರತೆ ಎದ್ದು ಕಂಡಿತು. ಆದರೆ, ಕಾಂಗ್ರೆಸ್‌ನಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇತ್ತು. ಆ ಪಕ್ಷದಲ್ಲಿ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರು. ಸಚಿವ ಈಶ್ವರ ಖಂಡ್ರೆಯವರಂತೂ ಮಗನ ಗೆಲುವಿಗೆ ಸಾಕಷ್ಟು ಬೆವರು ಹರಿಸಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಕೈಗೊಂಡಿದ್ದರು.

ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಸುಲಭವಾಗಿ ಗೆಲುವಿನ ದಡ ಸೇರಿದ್ದ ಭಗವಂತ ಖೂಬಾ ಅವರಿಗೆ ಈ ಸಲ ಜಯ ಅಷ್ಟು ಸುಲಭವಲ್ಲ. ಗೆದ್ದರೂ ಬಹಳ ಕಡಿಮೆ ಅಂತರದಿಂದ ಗೆಲ್ಲಬಹುದು ಎಂಬ ಮಾತುಗಳು ಸ್ವತಃ ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬಂದವು. ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರು ಗೆದ್ದರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದರು. ಆದರೆ, ‘ಎಕ್ಸಿಟ್‌ ಪೋಲ್‌’ ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರ ವರಸೆ ಬದಲಾಗಿದೆ.

‘ಇಡೀ ದೇಶದಲ್ಲಿ ಜನ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ ನೋಡಿ ಮತ ಹಾಕಿದ್ದಾರೆ. ಇದು ರಾಷ್ಟ್ರದ ಚುನಾವಣೆ ಎಂಬ ದೃಷ್ಟಿಕೋನ, ವಿವೇಚನೆಯಿಂದ ಜನ ವೋಟ್‌ ಮಾಡಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಮೋದಿಯವರಂತೆ ಖೂಬಾ ಕೂಡ ‘ಹ್ಯಾಟ್ರಿಕ್‌’ ಜಯ ಸಾಧಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಇದಕ್ಕೆ ಕಾಂಗ್ರೆಸ್‌ ಮುಖಂಡರ ಸಹಮತವಿಲ್ಲ. ‘ಈ ಹಿಂದೆ ಅನೇಕ ಎಕ್ಸಿಟ್‌ ಪೋಲ್‌ಗಳು ಸುಳ್ಳಾಗಿವೆ. ಜೂ. 4ರಂದು ನಿಖರ ಫಲಿತಾಂಶ ಗೊತ್ತಾಗಲಿದ್ದು, ಪಕ್ಷ ಉತ್ತಮ ಸಾಧನೆ ಮಾಡಲಿದೆ. ಬೀದರ್‌ನಲ್ಲೂ ಜಯ ಸಾಧಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಸವರಾಜ ಜಾಬಶೆಟ್ಟಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಬಸವರಾಜ ಜಾಬಶೆಟ್ಟಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಒಂದೆರೆಡು ‘ಎಕ್ಸಿಟ್‌ ಪೋಲ್‌’ಗಳಲ್ಲಿ ಬೀದರ್‌ನಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ತಿಳಿಸಿವೆ. ಆದರೆ ಇಡೀ ದೇಶದಂತೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುವುದು ಶತಃಸಿದ್ಧ
ಸೋಮನಾಥ ಪಾಟೀಲ ಜಿಲ್ಲಾಧ್ಯಕ್ಷ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT