ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ನೆಟೆ ರೋಗ ಕಾಟ: ರೈತರ ತೊಳಲಾಟ

Last Updated 27 ನವೆಂಬರ್ 2022, 22:15 IST
ಅಕ್ಷರ ಗಾತ್ರ

ಬೀದರ್‌: ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಯಲ್ಲಿ 10 ವರ್ಷಗಳ ಬಳಿಕ ಮತ್ತೆ ನೆಟೆ ರೋಗ ಕಾಣಿಸಿಕೊಂಡಿದೆ. ತಂಪಿಗೆ ಮಣ್ಣಿನಲ್ಲಿರುವ ಹುಳುಗಳು ಕ್ರಿಯಾಶೀಲಗೊಂಡು ತೊಗರಿ ಬೆಳೆಗೆ ಹಾನಿ ಮಾಡುತ್ತಿವೆ. ಮಣ್ಣಿನಲ್ಲಿರುವ ಹುಳುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಮುಂಗಾರಿನ ಆರಂಭದಲ್ಲಿ ಜಿಲ್ಲೆಯಲ್ಲಿ ಬೆಳೆ ಹುಲುಸಾಗಿ ಬೆಳೆದಿದೆ. ಆದರೆ, ಎರಡು ವಾರಗಳಿಂದ ನೆಟೆ ರೋಗದಿಂದ ಬೆಳೆ ಒಣಗಲು ಆರಂಭಿಸಿದೆ. ಬೆಳೆಯಿಂದ ಕೈಗೆ ಬರುವ ಆದಾಯಕ್ಕಿಂತ ಕ್ರಿಮಿನಾಶಕ ಸಿಂಪಡಣೆಗೆ ಹೆಚ್ಚಿನ ಖರ್ಚು ಆಗುತ್ತಿದೆ. ಇದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಣಭೂಮಿಯಲ್ಲಿರುವ ಕ್ರಿಮಿಗಳು ಗಿಡದ ಅನ್ನನಾಳವನ್ನೇ ಕತ್ತರಿಸುತ್ತಿವೆ. ಹಸಿ ಭೂಮಿಯಲ್ಲಿ ಇನ್ನೂ ವ್ಯಾಪಕವಾಗಿ ಹರಡುತ್ತಿವೆ. ಇದು ಹೊಸ ರೋಗವಲ್ಲ. ಆದರೆ, ಹಲವು ವರ್ಷಗಳ ನಂತರ ಹಳೆಯ ರೋಗ ಮರುಕಳಿಸಿದೆ. ಮುನ್ನೆಚ್ಚರಿಕೆ ಕ್ರಮವೇ ಇದಕ್ಕಿರುವ ಏಕೈಕ ಪರಹಾರ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ಹೇಳುತ್ತಾರೆ.

‘ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಆಳೆತ್ತರಕ್ಕೆ ಬೆಳೆದು ನಿಂತ ತೊಗರಿ ಎಲೆಗಳು ಒಣಗುತ್ತಿವೆ. ಗಿಡಗಳಲ್ಲಿ ಕಾಯಿ ತುಂಬಿಕೊಂಡಿಲ್ಲ. ಪ್ರತಿ ಎಕರೆಗೆ ₹ 20ರಿಂದ 30 ಸಾವಿರ ಖರ್ಚು ಮಾಡಿರುವ ರೈತರು ನಷ್ಟ ಅನುಭವಿಸಬೇಕಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ಕಳವಳ ವ್ಯಕ್ತಪಡಿಸುತ್ತಾರೆ.

ಒಂದೇ ಬೆಳೆಯಿಂದಾಗಿ ರೋಗಾಣುಗಳು ಹೆಚ್ಚಳ :ಬಸವಕಲ್ಯಾಣ: ತಾಲ್ಲೂಕಿನ ಹಲವಾರು ಕಡೆ ತೊಗರಿ ಹಾಗೂ ಕಡಲೆಯಲ್ಲಿ ನೆಟೆ ರೋಗ ಕಾಣಿಸಿಕೊಂಡಿದೆ. ಅನೇಕ ವರ್ಷಗಳಿಂದ ಬೆಳೆ ಬದಲಾಯಿಸದೆ ಒಂದೇ ಬೆಳೆ ಬೆಳೆಯುತ್ತಿರುವ ಕಾರಣವೂ ರೋಗಾಣು ಹೆಚ್ಚಾಗಲು ಕಾರಣ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗುತ್ತಿ, ಗೌರ, ಖಂಡಾಳ, ಮಂಠಾಳ, ಕೊಹಿನೂರ, ಮುಡಬಿ, ನಾರಾಯಣಪುರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಇತರೆಡೆ ಈ ಸಲ ತೊಗರಿ ಕ್ಷೇತ್ರ ಹೆಚ್ಚಾಗಿದೆ. ಅಲ್ಲದೆ ಸೋಯಾಬಿನ್ ಸರಿಯಾಗಿ ಬಾರದ ಕಾರಣ ಜಮೀನನ್ನು ಹದಗೊಳಿಸಿ ರೈತರು ಕಡಲೆ ಬಿತ್ತನೆ ಮಾಡುತ್ತಿದ್ದಾರೆ. ಇದರಿಂದ ಕಡಲೆ ಕ್ಷೇತ್ರವೂ ಈ ಸಲ ಹೆಚ್ಚಿದೆ. ಆದರೆ, ರೋಗ ಬಾಧಿಸಿರುವುದು ಕಂಡು ಬಂದಿದ್ದು ಇಳುವರಿಯ ಮೇಲೆ ಪರಿಣಾಮ ಬೀರಲಿದೆ.

ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ ಬಸವಕಲ್ಯಾಣ ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತಿ ಲೀಟರ್ ನೀರಿಗೆ ಕಾರ್ಬನಡೈಜೀಮ್ 2 ಗ್ರಾಂ, ಸಂಯುಕ್ತ ಶಿಲೀಂಧ್ರ ನಾಶಕಗಳಾದ ಕಾರ್ಬನಡೈಜೀಮ್+ ಮ್ಯಾಕ್ರೋಜಾಬ್ 2 ಗ್ರಾಂ ಬೆರೆಸಿ ರೋಗ ಪೀಡಿತ ಗಿಡದ ಸುತ್ತ ಸಿಂಪಡಣೆ ಮಾಡಬೇಕು. ಇದರಿಂದ ರೋಗ ಹರಡುವಿಕೆ ಕಡಿಮೆ ಆಗುತ್ತದೆ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಾರೆ.

ಹಸಿಗೆ ಹೆಚ್ಚಿದ ರೋಗ: ಹುಮನಾಬಾದ್: ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಕಾರಣ ಎರೆ ಭೂಮಿಯಲ್ಲಿನ ಜವಳು ಕಡಿಮೆಯಾಗಿಲ್ಲ. ಹಳ್ಳಿಖೇಡ (ಬಿ), ದುಬಲಗುಂಡಿ, ಜಲಸಂಗಿ, ಘೋಡವಾಡಿ, ಹುಡಗಿ, ಮದರಗಾಂವ್ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ತೊಗರಿ ಬೆಳೆ ಒಣಗುತ್ತಿದೆ.

‘ಎಕರೆಗೆ ₹ 30 ಸಾವಿರ ಖರ್ಚು ಮಾಡಿದ್ದೇವೆ. ತಿಂಗಳ ಹಿಂದೆ ಬೆಳೆ ಚೆನ್ನಾಗಿತ್ತು. ಆದರೆ, ಈಗ ಒಣಗಲು ಆರಂಭಿಸಿರುವುದು ಆತಂಕ ಮೂಡಿಸಿದೆ’ ಎಂದು ದುಬಲಗುಂಡಿಯ ರೈತ ಪ್ರಭು ಪೂಜಾರಿ ಹೇಳುತ್ತಾರೆ.

ತಾಲ್ಲೂಕಿನಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿದೆ. ಕಡಲೆ, ಜೋಳ ಬೆಳೆಗಳಿಗೆ ತಾಲ್ಲೂಕಿನಲ್ಲಿ ಯಾವುದೇ ರೋಗ ಕಂಡು ಬಂದಿಲ್ಲ ಎಂದು ಸಹಾಯಕ ನಿರ್ದೇಶಕ ಗೌತಮ ತಿಳಿಸುತ್ತಾರೆ.

‘ಹುಲಸೂರ ತಾಲ್ಲೂಕಿನ ಬಹುತೇಕ ರೈತರು ಪ್ರತಿ ವರ್ಷ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿ ರೋಗಾಣುಗಳು ಹೆಚ್ಚಾಗಲು ಕಾರಣವಾಗಿದೆ. ಅಕ್ಕಪಕ್ಕದ ರೈತರೂ ಅದೇ ಬೆಳೆ ಬೆಳೆದಿರುವ ಕಾರಣಕ್ಕೆ ರೋಗ ಹರಡುತ್ತಿದೆ. ಒಂದು ವರ್ಷ ದ್ವಿದಳ ಧಾನ್ಯ, ಮೂರು ವರ್ಷ ಏಕದಳ ಧಾನ್ಯ, ಎಣ್ಣೆ ಕಾಳು ಬೆಳೆ ಬೆಳೆಯಬೇಕು. ಅಂದಾಗ ಮಾತ್ರ ರೋಗ ನಿಯಂತ್ರಿಸಲು ಸಾಧ್ಯ’ ಎಂದು ಹೇಳುತ್ತಾರೆ.

ಪೂರಕ ಮಾಹಿತಿ: ಮಾಣಿಕ ಭೂರೆ, ಮನ್ಮಥ ಸ್ವಾಮಿ, ಗುಂಡು ಅತಿವಾಳ, ಬಸವರಾಜ ಪ್ರಭಾ, ವೀರೇಶ ಮಠಪತಿ, ಬಸವಕುಮಾರ ಕವಟೆ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT