ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫಸಲ್‌ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಭಗವಂತ ಖೂಬಾ ದೂರು

ಕೇಂದ್ರ ಕೃಷಿ ಸಚಿವರಿಗೆ ಮಾಜಿ ಸಚಿವ ಭಗವಂತ ಖೂಬಾ ದೂರು
Published 13 ಜೂನ್ 2024, 14:22 IST
Last Updated 13 ಜೂನ್ 2024, 14:22 IST
ಅಕ್ಷರ ಗಾತ್ರ

ಬೀದರ್‌: ‘ಪ್ರಧಾನ ಮಂತ್ರಿ ಫಸಲ್‌ ವಿಮೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಸಿಂಗ್‌ ಅವರನ್ನು ಭೇಟಿ ಮಾಡಿ, ಶುಭ ಕೋರಿದ ಅವರು, ಈ ಸಲ ರಾಜ್ಯದಲ್ಲಿ ಬರಗಾಲವಿತ್ತು. ರೈತರು ಸಾಕಷ್ಟು ಪ್ರಮಾಣದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದರು. ಆದರೆ, ರಾಜ್ಯ ಸರ್ಕಾರವು ಅಧಿಕಾರಿಗಳಿಂದ ಸರಿಯಾಗಿ ಬೆಳೆ ಸಮೀಕ್ಷೆ ಮಾಡಿಸಿಲ್ಲ. ರೈತರಿಗೆ ಸ್ಪಂದಿಸಿಲ್ಲ. ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹಾಕಿ ನಿರ್ಲಕ್ಷ್ಯ  ಮಾಡಲು ಕುಮ್ಮಕ್ಕು ನೀಡಿದೆ. ಸರ್ಕಾರ ವಿಮಾ ಕಂಪನಿಯ ವಿರುದ್ದ ಮಾತನಾಡುವುದು, ಆರೋಪ ಹೊರಿಸುವುದು ಮಾಡಿದೆ. ಇದರಿಂದ ರೈತರಿಗೆ ಸರಿಯಾಗಿ ಬೆಳೆ ವಿಮೆ ಬಂದಿಲ್ಲ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ. 

ಯೋಜನೆ ಪ್ರಾರಂಭವಾದ ದಿನದಿಂದಲೂ ಬೀದರ್‌ ಜಿಲ್ಲೆ ನೋಂದಣಿ ಹಾಗೂ ಪರಿಹಾರ ಪಡೆಯುವುದರಲ್ಲಿ ಮುಂಚೂಣಿಯಲ್ಲಿದೆ. ಪ್ರಧಾನಿಯವರು ಖುದ್ದಾಗಿ ನಮ್ಮ ರೈತರನ್ನು ಶ್ಲಾಘಿಸಿದ್ದಾರೆ. ಇದರ ಹಿಂದೆ ನನ್ನ ಶ್ರಮವೂ ಸಾಕಷ್ಟಿದೆ. ನನ್ನೊಂದಿಗೆ ಯಾವಾಗಲೂ ಡಿಸಿಸಿ, ಪಿಕೆಪಿಎಸ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಿಎಸ್‌ಸಿ ಕೇಂದ್ರದವರ ಶ್ರಮವು ಇತ್ತು. ಆದರೆ, ಕಳೆದ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಯೋಜನೆಯ ಕುರಿತು ಅಪಪ್ರಚಾರ ನಡೆಯುತ್ತಿದೆ. ಯೋಜನೆಯ ಲಾಭ ರೈತರಿಗೆ ಸರಿಯಾಗಿ ಸಿಗದಂತೆ ಮಾಡುವ ಹುನ್ನಾರ ನಡೆಯುತ್ತಿದೆ. ರೈತರು ಫಸಲ್ ವಿಮೆಯಿಂದ ದೂರ ಉಳಿಯುವ ಹಾಗೆ ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದ್ದಾರೆ.

ವಿಮೆ ಕಂಪನಿಯಿಂದ ಸರಿಯಾಗಿ ಕೆಲಸ ತೆಗೆಸಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ವಿಮೆ ಕಂಪನಿ ತಪ್ಪು ಮಾಡುತ್ತಿದ್ದರೆ ಅದರ ವರದಿಯನ್ನು ರಾಜ್ಯ ಸರ್ಕಾರ ಕಳುಹಿಸಬಹುದು. ಆದರೆ, ರಾಜ್ಯ ಸರ್ಕಾರ ಇದ್ಯಾವುದು ಮಾಡದೆ, ತನ್ನ ಅಧಿಕಾರಿಗಳಿಗೂ ಸರಿಯಾಗಿ ಸೂಚನೆ ನೀಡದೆ, ಉತ್ತಮ ಪರಿಹಾರ ಬರುವುದನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT