ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ ಟ್ಯಾಗ್: ಶುಲ್ಕ ಪಾವತಿ ಕಾರ್ಯಾರಂಭ

ಮಂಗಲಗಿ ಟೋಲ್ ಪ್ಲಾಜಾ ಬಳಿ ನಿತ್ಯ ಜಾಗೃತಿ
Last Updated 30 ನವೆಂಬರ್ 2019, 13:43 IST
ಅಕ್ಷರ ಗಾತ್ರ

ಬೀದರ್‌: ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 65)ಯಲ್ಲಿ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ನಿರ್ಮಿಸಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾ ಬಳಿ ಫಾಸ್ಟ್‌ಟ್ಯಾಗ್‌ ಮೂಲಕ ಶುಲ್ಕ ಆಕರಣೆ ಕಾರ್ಯ ಆರಂಭವಾಗಿದೆ.

ಟೋಲ್‌ ಪ್ಲಾಜಾದ 8 ಲೈನ್‌ಗಳ ಪೈಕಿ 7 ಲೈನ್‌ಗಳಿಗೆ ಫಾಸ್ಟ್ ಟ್ಯಾಗ್ ಸೌಲಭ್ಯ ಒದಗಿಸಲಾಗಿದೆ. ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ ಕರಪತ್ರಗಳನ್ನು ಕೊಟ್ಟು ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ವಿತರಿಸಲಾಗುತ್ತಿದೆ.

‘ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಂಡ ಶೇಕಡ 25 ರಷ್ಟು ವಾಹನಗಳು ಮಾತ್ರ ಬರುತ್ತಿವೆ. ಶೇಕಡ 75ರಷ್ಟು ವಾಹನಗಳ ಮಾಲೀಕರು ನಗದು ಪಾವತಿ ಮಾಡುತ್ತಿದ್ದಾರೆ. ಮಂಗಲಗಿ ಟೋಲ್‌ ಪ್ಲಾಜಾದಲ್ಲಿ 15 ದಿನ ಪ್ರಾಯೋಗಿಕ ಶುಲ್ಕ ಆಕರಣೆ ನಡೆಯಲಿದೆ. ಡಿಸೆಂಬರ್ 15 ರಿಂದ ಕಡ್ಡಾಯವಾಗಲಿದೆ’ ಎಂದು ಮಂಗಲಗಿ ಟೋಲ್ ಪ್ಲಾಜಾ ವ್ಯವಸ್ಥಾಪಕ ಅರುಣಕುಮಾರ ವಿ. ತಿಳಿಸಿದ್ದಾರೆ.

ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್ ಹಾಗೂ ಪೇಟಿಯಂ ಕಂಪೆನಿ ಸಿಬ್ಬಂದಿ ಟೋಲ್‌ ಪ್ಲಾಜಾದಲ್ಲಿ ವಾಹನ ಮಾಲೀಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಇಲ್ಲಿ ನಿತ್ಯ 100 ರಿಂದ 150 ಟ್ಯಾಗ್‌ ಮಾರಾಟವಾಗುತ್ತಿವೆ.

‘ಟೋಲ್‌ಪ್ಲಾಜಾದಲ್ಲಿ ಕನ್ನಡ, ಹಿಂದಿ, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ದಿನಗ 24 ಗಂಟೆಯೂ ಧ್ವನಿಮುದ್ರಿತ ಸಂದೇಶದ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ.

ಡಿಸೆಂಬರ್‌ 15ರ ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಲಿದೆ’ ಎಂದು ಪ್ಲಾಜಾ ಮ್ಯಾನೇಜರ್‌ ಅರುಣಕುಮಾರ ವಿ. ಹೇಳುತ್ತಾರೆ.

ವಾಹನ ಮಾರಾಟ ಮಾಡಿದ ವ್ಯಕ್ತಿ ತನ್ನ ಟ್ಯಾಗ್‌ ತೆಗೆದು ಮಾರಾಟ ಮಾಡಬೇಕು ಅಥವಾ ಟೋಲ್‌ಗಳಲ್ಲಿ ಅದನ್ನು ಬ್ಲಾಕ್‌ ಮಾಡಿಸಬೇಕು. ವಾಹನ ಖರೀದಿಸಿದ ತಕ್ಷಣಕ್ಕೆ ತಮ್ಮ ಹೆಸರಿನ ಟ್ಯಾಗ್‌ ಅಂಟಿಸಬೇಕು. ಕಾರಣ ಟೋಲ್‌ ಮೂಲಕ ವಾಹನ ಹಾಯ್ದು ಹೋದರೆ ಶುಲ್ಕ ಕಡಿತಗೊಳ್ಳಲಿದೆ.

ಐದು ವರ್ಷ ಬಳಕೆಗೆ ಅವಕಾಶ

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲಿ ಕರೆನ್ಸಿ ಹಾಕಿಸಿಕೊಳ್ಳಬಹುದು. ಈ ಮೂಲಕ ಟೋಲ್ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ನೋಂದಣಿ ಮಾಡಿಕೊಂಡಲ್ಲಿ ಐದು ವರ್ಷಗಳ ಕಾಲ ಸೇವೆಯ ಬಳಕೆ ಪಡೆಯಬಹುದು. ಟೋಲ್ ಪ್ಲಾಜಾಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಉಚಿತ ಟ್ಯಾಗ್‌ ಕೊಡಲಾಗುತ್ತಿದೆ. ವಾಹನ ಮಾಲೀಕರು ನಂತರ ರಿಚಾರ್ಜ್‌ ಮಾಡಿಕೊಳ್ಳಬಹುದು. ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿಸಬಹುದಾಗಿದೆ.

ಕೇಂದ್ರ ಸರ್ಕಾರದ ‘ಒಂದು ಟ್ಯಾಗ್ ಒಂದು ರಾಷ್ಟ್ರ’ ಯೋಜನೆ ಅಡಿಯಲ್ಲಿ ಆರಂಭಿಸಲಾಗಿರುವ ಫಾಸ್ಟ್ ಟ್ಯಾಗ್ ಕಾರ್ಡ್ ವಿತರಣೆ ಕಾರ್ಯ ನಿರಂತವಾಗಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಫಾಸ್ಟ್ ಟ್ಯಾಗ್ ಕಾರ್ಡ್‌ಗಳು ಲಭ್ಯ ಇವೆ.ವಾಹನಗಳ ಮುಂಭಾಗದಲ್ಲಿ ಗಾಜಿನ ಮೇಲೆ ಟ್ಯಾಗ್ ಅಂಟಿಸಲಾಗುತ್ತದೆ. ಪ್ಲಾಜಾ ಮಾರ್ಗವಾಗಿ ವಾಹನ ಸಂಚರಿಸಿದರೆ ವಾಹನ ಮಾಲೀಕನ ಬ್ಯಾಂಕ್‌ ಖಾತೆಯಿಂದ ಶುಲ್ಕ ಕಡಿತವಾಗುತ್ತದೆ. ಇದರಿಂದ ಸಮಯ, ಇಂಧನ ಉಳಿಯಲಿದೆ. ಅಷ್ಟೇ ಅಲ್ಲ, ತಡೆ ರಹಿತ ಸಂಚಾರಕ್ಕೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT