ಬುಧವಾರ, ಏಪ್ರಿಲ್ 21, 2021
32 °C
ಮಹಾರಾಷ್ಟ್ರದ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ

ಮತ್ತೆ ಲಾಕ್‌ಡೌನ್‌ ಭಯ: ವಲಸೆ ಕಾರ್ಮಿಕರಲ್ಲಿ ತಳಮಳ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳ ಮೂಲಕ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿರುವ ವ್ಯಕ್ತಿಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಕೋವಿಡ್‌ ನೆಗೆಟಿವ್‌ ವರದಿ ಇಲ್ಲದೇ ಬಂದವರನ್ನು ಯಾವುದೇ ಮುಲಾಜಿಲ್ಲದೇ ಮರಳಿ ಕಳಿಸಲಾಗುತ್ತಿದೆ.

ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಲಾತೂರ್ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ ಲಾತೂರ್‌ ಜಿಲ್ಲಾಡಳಿತದಿಂದ ಮಾಹಿತಿ ಕೇಳಿದೆ. ಫೆಬ್ರುವರಿ 28ರಿಂದ ಲಾತೂರ್‌ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾದರೆ ಅಚ್ಚರಿ ಇಲ್ಲ ಎಂದು ಉದಗಿರ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ, ಪುಣೆ, ಸೋಲಾಪುರ ಹಾಗೂ ಲಾತೂರ್‌ ಮಹಾನಗರಗಳಿಗೆ ವಲಸೆ ಹೋಗಿರುವ ಕಾರ್ಮಿಕರಲ್ಲಿ ಮತ್ತೆ ಸುದೀರ್ಘ ಲಾಕ್‌ಡೌನ್‌ ಶುರುವಾಗಲಿದೆ ಎನ್ನುವ ತಳಮಳ ಶುರುವಾಗಿದೆ. ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡು ಅಲ್ಲಿ ಉಳಿಯಲಾಗದೆ, ಇಲ್ಲಿಯೂ ಬರಲಾಗದೆ ಸಂಕಷ್ಟ ಅನುಭವಿಸಿದ್ದರು. ಮತ್ತೆ ಎದ್ದಿರುವ ಕೋವಿಡ್‌ ಅಲೆ ಆತಂಕ ಸೃಷ್ಟಿಸಿದೆ.

ಮಹಾರಾಷ್ಟ್ರದಲ್ಲಿ ಜಾತ್ರೆ, ಸಮಾವೇಶಗಳನ್ನು ನಿಷೇಧಿಸಲಾಗಿದೆ. ಮದುವೆ ಮುಂಚಿವೆಗಳಿಗೂ ಕೆಲವೊಂದು ನಿರ್ಬಂಧ ಹೇರಲಾಗಿದೆ. ಗಡಿಯಾಚೆ ಕೌಟುಂಬಿಕ ಸಂಬಂಧಗಳನ್ನು ಹೊಂದಿರುವ ಜನರು ಗಡಿಯಾಚೆಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.

‘ಸಂಬಂಧಿಗಳ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದಲ್ಲಿರುವ ಹಳ್ಳಿಗೆ ಹೋದರೂ ಮರಳಿ ಬರುವಾಗ ದಾಖಲೆಗಳನ್ನು ತೋರಿಸಬೇಕಾಗಿದೆ. ಹೀಗಾಗಿ ಮಹಾರಾಷ್ಟ್ರಕ್ಕೆ ಹೋಗಲು ಸಹ ಜನ ಹಿಂಜರಿಯುತ್ತಿದ್ದಾರೆ. ಆದರೆ ಕೂಲಿ ಕಾರ್ಮಿಕರು ಮರಳಿ ಮನೆಗೆ ಬರುವಂಥ ಸನ್ನಿವೇಶ ಸೃಷ್ಟಿಯಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ತಿಳಿಸಿದ್ದಾರೆ.

‘ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ 1,800 ಜನರ ತಪಾಸಣೆ ನಡೆಸಿ ಕೋವಿಡ್‌ ನೆಗೆಟಿವ್‌ ವರದಿ ಇಲ್ಲದ 100 ಜನರನ್ನು ಮರಳಿ ಕಳಿಸಲಾಗಿದೆ. ಬುಧವಾರ ಸಂಜೆ ವರೆಗೆ 1,500 ಜನರ ತಪಾಸಣೆ ನಡೆಸಲಾಗಿದೆ. ಕೆಲವರನ್ನು ವಾಪಸ್‌ ಕಳಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

‘ಅಗತ್ಯ ಸಂದರ್ಭದಲ್ಲಿ ಮಾತ್ರ ಗಡಿಯಾಚೆಗೆ ಹೋಗಬೇಕು. ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯ ದೃಷ್ಟಿಯಿಂದ ಮನೆಯಲ್ಲೇ ಇರುವುದು ಹೆಚ್ಚು ಸುರಕ್ಷಿತ’ ಎಂದು ಹೇಳಿದ್ದಾರೆ.

ತೆಲಂಗಾಣ ಗಡಿಯಲ್ಲಿ ಇಲ್ಲ ನಿರ್ಬಂಧ

ತೆಲಂಗಾಣ ಗಡಿಯಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ಸ್ಥಾಪಿಸಿಲ್ಲ. ತೆಲಂಗಾಣಕ್ಕೆ ಹೋಗಿ ಬರುವವರ ಮೇಲೆ ಯಾವುದೇ ರೀತಿಯ ನಿರ್ಬಂಧವನ್ನೂ ಹೇರಿಲ್ಲ. ಸರ್ಕಾರದ ಆದೇಶ ಬಂದರೆ ಮಾತ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ತಿಳಿಸಿದ್ದಾರೆ.

ಬೀದರ್‌ ತಾಲ್ಲೂಕಿನ ಭಂಗೂರ್‌ ಹಾಗೂ ಶಹಾಪುರ ಗೇಟ್‌ ಬಳಿ ಕರ್ನಾಟಕ ಹಾಗೂ ತೆಲಂಗಾಣದ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಸಾರಿಗೆ ಸಂಚಾರವೂ ಸುಗಮವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ..........

ಮಹಾರಾಷ್ಟ್ರ ಬಸ್‌ ವಾಪಸ್

ಬೀದರ್‌: ಲಾತೂರ್ ಜಿಲ್ಲೆಯ ಹಣೆಗಾಂವ್‍ನಿಂದ ಔರಾದ್‍ಗೆ ಬಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಅನ್ನು ವಾಪಸ್‌ ಕಳಿಸಲಾಗಿದೆ.

ಬಸ್‌ ಚಾಲಕ ಹಾಗೂ ನಿರ್ವಾಹಕರ ಬಳಿ ಕೋವಿಡ್‌ ನೆಗೆಟಿವ್‌ ವರದಿ ಇಲ್ಲದ ಕಾರಣ ಬಸ್‌ ವಾಪಸ್‌ ಕಳಿಸಲಾಗಿದೆ. ಪ್ರಸ್ತುತ ಗಡಿಯಲ್ಲಿ ರಾಜ್ಯದ ಬಸ್‌ಗಳು ಹೆಚ್ಚು ಸಂಚರಿಸುತ್ತಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.