ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮೊಳಗಿದ ಬಣ್ಣದ ಸಂಭ್ರಮ

ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದ ಯುವಪಡೆ
Last Updated 10 ಮಾರ್ಚ್ 2020, 12:16 IST
ಅಕ್ಷರ ಗಾತ್ರ

ಬೀದರ್: ಒಂದೆಡೆ ಪರೀಕ್ಷೆಯ ಭಯ, ಇನ್ನೊಂದೆಡೆ ಕೋವಿಡ್‌–19 ಸೋಂಕಿನ ಆತಂಕದ ಮಧ್ಯೆಯೇ ಯುವಕರು ಹಾಗೂ ಮಕ್ಕಳು ನಗರದಲ್ಲಿ ಮಂಗಳವಾರ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಬಣ್ಣದಲ್ಲಿ ಮಿಂದೆದ್ದರು.

ಯುವಕರ ತಂಡವೊಂದು ಶಿವಾಜಿ ವೃತ್ತದ ಬಳಿ ಡಿಜೆ ಅಳವಡಿಸಿ ಸಂಗೀತ ನೃತ್ಯಕ್ಕೆ ವ್ಯವಸ್ಥೆ ಮಾಡಿತ್ತು. ರಸ್ತೆಯ ಒಂದು ಬದಿಯಲ್ಲಿ ಗ್ರಿಲ್‌ನಿಂದ ಕಮಾನು ನಿರ್ಮಿಸಿ ಮಳೆಯ ಹನಿಗಳಂತೆ ನೀರು ಹರಿಯ ಬಿಡಲಾಗಿತ್ತು. ಅದರ ಅಡಿಯಲ್ಲಿ ನಿಂತು ನೂರಾರು ಯುವಕರು ಕುಣಿದು ಕುಪ್ಪಳಿಸಿದರು.

ರೋಟರಿ ವೃತ್ತ ಸಮೀಪದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ಯುವಕರು ಹೋಳಿ ಹಬ್ಬದ ಆಚರಣೆಗಾಗಿಯೇ ‘ರಂಗೋತ್ಸವ’ ಕಾರ್ಯಕ್ರಮ ಆಯೋಜಿಸಿದ್ದರು. ಮೈದಾನದಲ್ಲಿ ನೀರಿನ ಪೈಪ್‌ಲೈನ್‌ ಅಳವಡಿಸಿ ನೀರು ಚಿಮ್ಮುವಂತೆ ಮಾಡಿದ್ದರು. ನೂರಾರು ಸಂಖ್ಯೆಯಲ್ಲಿದ್ದ ಯುವಕರು ಹಾಗೂ ಯುವತಿಯರು ಚಿಮ್ಮುತ್ತಿದ್ದ ನೀರಿನ ಕೆಳಗೆ ಹಿಂದಿ, ಕನ್ನಡ, ಮರಾಠಿ, ತೆಲುಗು ಚಲನಚಿತ್ರಗಳ ಹಾಡಿಗೆ ಹಜ್ಜೆ ಹಾಕಿದರು.

ಯುವತಿಯರು ರಂಗೋತ್ಸವದಲ್ಲಿ ಪಾಲ್ಗೊಂಡಿದ್ದರಿಂದ ಸುತ್ತಲು ಬ್ಯಾರಿಕೇಡ್‌ನಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶದ್ವಾರದಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಲಾಗಿತ್ತು. ಪೊಲೀಸರು ಸಹ ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು.

ಬಡಾವಣೆಗಳ ಓಣಿಗಳಲ್ಲಿ ಮಕ್ಕಳು ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿ ಪರಸ್ಪರ ಬಣ್ಣ ಎರಚಿದರು. ಯುವಕರು, ಯುವತಿಯರು ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿ ಹಬ್ಬದ ಶುಭಾಶಯ ಹೇಳಿದರು. ಪಿಚಕಾರಿಗಳ ಮೂಲಕ ಬಣ್ಣ ಚಿಮ್ಮಿಸಿದರು. ಬಣ್ಣದ ಪುಡಿಯನ್ನು ಗಾಳಿಯಲ್ಲಿ ತೂರಿ ಸಂಭ್ರಮಿಸಿದರು.

ಮಕ್ಕಳು ಬಣ್ಣದಾಟಕ್ಕೆ ಹಠ ಮಾಡುತ್ತಿದ್ದರಿಂದ ಪಾಲಕರು ತಮ್ಮ ಮನೆಗಳ ಮಂದೆ ಬಕೆಟ್‌ಗಳಲ್ಲಿ ತಿಳಿ ಬಣ್ಣದ ನೀರು ತುಂಬಿಟ್ಟಿದ್ದರು. ಮಕ್ಕಳು ಬಕೆಟ್‌ನಲ್ಲಿ ಪಿಚಕಾರಿಗಳನ್ನು ಮುಳುಗಿಸಿ ನೀರು ಹೀರಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದವರ ಮೇಲೆ ಚಿಮ್ಮಿಸಿದರು. ಹ್ಯಾಪಿ ಹೋಲಿ ಎಂದು ಅಬ್ಬರಿಸುತ್ತ ಗೆಳೆಯರತ್ತ ಧಾವಿಸಿ ಬಣ್ಣ ಸುರಿದು ಖುಷಿಪಟ್ಟರು.

ಅನೇಕ ಯುವಕರು ಹಾಗೂ ಹಿರಿಯರು ತೋಟದಲ್ಲಿ ಹಬ್ಬದ ಆಚರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ತೋಟದಲ್ಲಿನ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಹಲಿಗೆ ಬಾರಿಸುತ್ತ, ಕುಣಿಯುತ್ತ ಬರ ಮಾಡಿಕೊಂಡರು. ಸಂಗೀತಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ನಂತರ ಒಂದಿಷ್ಟು ಮದ್ಯ ಸೇವಿಸಿ ಹೋಟೆಲ್‌ನಿಂದ ತರಿಸಿದ್ದ ಊಟ ಮಾಡಿ ಮನೆಗಳಿಗೆ ತೆರಳಿದರು.

ಕೆಲ ಯುವಕರು ದ್ವಿಚಕ್ರ ವಾಹನದ ಸೈಲನ್ಸರ್‌ಗಳನ್ನು ತೆಗೆದು ಎಕ್ಸಿಲೇಟರ್ ಹೆಚ್ಚಿಸುತ್ತ ಒಂದೇ ವಾಹನದಲ್ಲಿ ಎರಡು ಮೂರು ಜನ ಕುಳಿತು ನಗರದ ತುಂಬ ಓಡಾಡಿದರು. ಬೊಬ್ಬೆ ಹಾಕುತ್ತ ಎಲ್ಲರಿಗೂ ‘ಹೋಳಿ ಹಬ್ಬದ ಶುಭಾಶಯ’ ಎಂದು ಜೋರಾಗಿ ಕೂಗಿದರು.

ಸೋಮವಾರ ರಾತ್ರಿ ಜ್ಯೋತಿ ಕಾಲೊನಿ, ಶಿವನಗರ, ಪ್ರತಾಪನಗರ, ಮೈಲೂರ ಕ್ರಾಸ್, ಕ್ರಾಂತಿಗಣೇಶ, ಗುಂಪಾ, ಮೋಹನ್‌ ಮಾರ್ಕೆಟ್‌, ನಾವದಗೇರಿಯಲ್ಲಿ ಕುಳ್ಳು, ಕಟ್ಟಿಗೆ ಸೇರಿಸಿ ಅದಕ್ಕೆ ಕಾಮಣ್ಣನ ಮುಖವಾಡ ಇಟ್ಟು ಕಾಮದಹನ ಮಾಡಲಾಯಿತು.
ಮಹಿಳೆಯರು ಕಾಮಣ್ಣನಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ನಂತರ ಬೆಂಕಿಯಲ್ಲಿ ಕಡಲೆ, ಶೇಂಗಾ ಹಾಗೂ ಕೊಬ್ಬರಿಯನ್ನು ಸುಟ್ಟು ತಿಂದರು. ಕೆಲವು ಕಡೆ ರಾತ್ರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

***

ವಿಭೂತಿ ಹಚ್ಚಿ ಹೋಳಿ ಆಚರಣೆ

ಕೋವಿಡ್‌–19 ಭೀತಿಯಿಂದ ಅನೇಕರು ಮನೆಯಿಂದ ಹೊರಗೆ ಬಂದಿರಲಿಲ್ಲ. ಕೆಲವರು ಮನೆಯಲ್ಲಿ ಕುಟುಂಬದ ಸದಸ್ಯರಿಗೆ ಬಣ್ಣ ಸವರಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿದರು.

ಜೀಜಾಮಾತಾ ಗರ್ಲ್ಸ್ ಹೈಸ್ಕೂಲ್‌ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಅವರು ಕುಟುಂಬದ ಸದಸ್ಯರಿಗೆ ವಿಭೂತಿ, ಅರಶಿಣ, ಕುಂಕುಮ ಹಾಗೂ ಗಂಧ ಹಚ್ಚಿ ಹೋಳಿ ತಮ್ಮ ಮನೆಯ ಆವರಣದಲ್ಲೇ ಹೋಳಿ ಹಬ್ಬ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT