ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಖಾಲಿ ಇರುವ 4 ಸಾವಿರ ಹುದ್ದೆಗಳ ಭರ್ತಿ: ಖಂಡ್ರೆ ಭರವಸೆ

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ; ಬೀದರ್‌ ಸಮಗ್ರ ಅಭಿವೃದ್ಧಿಯೊಂದೆ ನನ್ನ ಕನಸು–ಸಚಿವ ಈಶ್ವರ ಖಂಡ್ರೆ
Published 15 ಆಗಸ್ಟ್ 2023, 13:57 IST
Last Updated 15 ಆಗಸ್ಟ್ 2023, 13:57 IST
ಅಕ್ಷರ ಗಾತ್ರ

ಬೀದರ್‌: ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಮಹಿಳಾ ಪೊಲೀಸರಿಂದ ಕರಾಟೆ ಪ್ರದರ್ಶನ, ‘ಅಕ್ಕ’ ಪಡೆಯಿಂದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ, ಶ್ವಾನ ದಳದಿಂದ ಮಾದಕ ವಸ್ತುಗಳ ಪತ್ತೆ ಕಾರ್ಯಾಚರಣೆ ಅಣಕು ಪ್ರದರ್ಶನ, ವಿವಿಧ ಶಾಲಾ, ಕಾಲೇಜಿನ ಮಕ್ಕಳಿಂದ ನಡೆದ ಸಮೂಹ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಳಿಸಿದವು.

ಇದಕ್ಕೂ ಮುನ್ನ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ‘ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಿಸುಮಾರು 4 ಸಾವಿರ ಹುದ್ದೆಗಳು ಖಾಲಿ ಇವೆ. ಮೂರು ಸಾವಿರ ನಿರುದ್ಯೋಗಿ ಯುವಕರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಎಲ್ಲಾ ಹುದ್ದೆಗಳು ತುಂಬಿದರೆ ಆಡಳಿತ ವ್ಯವಸ್ಥೆ ಸುಧಾರಣೆಯಾಗುತ್ತದೆ. ನಿರುದ್ಯೋಗವು ತಗ್ಗುತ್ತದೆ’ ಎಂದರು.

‘ಆಗಸ್ಟ್‌ 21ರಂದು ಭಾಲ್ಕಿಯ ಬಿಕೆಐಟಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಂಗಳೂರಿನ ಸುಮಾರು 18ಕ್ಕೂ ಹೆಚ್ಚು ಕಂಪನಿಗಳಲ್ಲಿ 2 ಸಾವಿರ ಜನ ಕೆಲಸಕ್ಕೆ ಬೇಕಾಗಿದ್ದಾರೆ. ಅವರು ಸ್ಥಳದಲ್ಲೇ ಪರೀಕ್ಷೆ, ಸಂದರ್ಶನ ನಡೆಸಿ ನೇಮಕಾತಿ ಪ್ರಕ್ರಿಯೆ ನಡೆಸುವರು. ಜಿಲ್ಲೆಯ ಯುವಕರು ಅದರ ಪ್ರಯೋಜನ ಪಡೆಯಬೇಕು’ ಎಂದು ಕೋರಿದರು.

‘ಜಿಲ್ಲೆಯಲ್ಲಿ ಖಾಲಿಯಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಅಲ್ಲಿಯವರೆಗೆ ಅತಿಥಿ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 78ರಷ್ಟಿದೆ. ಅದು ಶೇ 90ರಷ್ಟಾಗಬೇಕು. ಅದಕ್ಕಾಗಿ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಜಿಲ್ಲೆಯ 200 ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗುವುದು. ಬೀದರ್‌ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ ಕಲ್ಪಿಸಿ ಅದನ್ನು ಬಲಪಡಿಸಲಾಗುವುದು’ ಎಂದು ಹೇಳಿದರು.

‘ಬೀದರ್ ಜಿಲ್ಲೆ ಕೈಗಾರಿಕೆಗಳಲ್ಲಿ ಹಿಂದುಳಿದಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಯೋಜನೆ ಇದೆ. ಅದಕ್ಕಾಗಿ ಸುಮಾರು 500 ಎಕರೆ ಜಾಗ ಗುರುತಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಬಂಡವಾಳ ಹೂಡಿಕೆದಾರರ ಸಮಾವೇಶ ಏರ್ಪಡಿಸಿ, ಹೊಸ ಕೈಗಾರಿಕೆಗಳ ಆರಂಭಕ್ಕೆ ಉತ್ತೇಜನ ನೀಡಲಾಗುವುದು. ವಿಷಕಾರಕ ಮಾಲಿನ್ಯ ಹೊರಸೂಸುತ್ತಿದ್ದ ಕೆಲವು ಕೈಗಾರಿಕೆಗಳನ್ನು ಈಗಾಗಲೇ ಬಂದ್‌ ಮಾಡಲಾಗಿದೆ. ಹಾಗಂತ ನಾವು ಕೈಗಾರಿಕೆಗಳ ವಿರುದ್ಧ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸಿದರೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹೊಸ ಕೈಗಾರಿಕೆಗಳ ಸ್ಥಾಪನೆಗೂ ಪ್ರೋತ್ಸಾಹ ಕೊಡಲಾಗುವುದು’ ಎಂದರು.

‘ಬೀದರ್‌ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಒಟ್ಟು 15 ಲಕ್ಷ ಸಸಿಗಳನ್ನು ನೆಟ್ಟು, ಪೋಷಿಸುವ ಗುರಿ ಹೊಂದಲಾಗಿದೆ. ಈಗಾಗಲೇ 11.35 ಲಕ್ಷ ಸಾವಿರ ಸಸಿಗಳನ್ನು ಜಿಲ್ಲೆಯ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲಿ ನೆಡಲಾಗಿದೆ. ಇನ್ನುಳಿದ ಸಸಿಗಳನ್ನು ಈ ತಿಂಗಳ ಅಂತ್ಯದವರೆಗೆ ನೆಡಲಾಗುವುದು. ಪ್ರಸ್ತುತ ಸಾಲಿನಲ್ಲಿ 20 ಲಕ್ಷ ಸಸಿಗಳನ್ನು ಬೆಳೆಸಲಾಗುವುದು. ಈ ಸಸಿಗಳನ್ನು 2024ನೇ ಸಾಲಿನ ಮಳೆಗಾಲದಲ್ಲಿ ನೆಡುತೋಪು ಮಾಡಲಾಗುವುದು. ಸರ್ಕಾರವು ತಾಲ್ಲೂಕಿಗೊಂದು ಟ್ರೀ ಪಾರ್ಕ್‌ ನಿರ್ಮಿಸುವ ಗುರಿ ಹೊಂದಿದೆ. ಸಾಲು ಮರದ ತಿಮ್ಮಕ್ಕ ಹೆಸರಲ್ಲಿ ಟ್ರೀ ಪಾರ್ಕ್‌ ನಿರ್ಮಿಸಲಾಗುವುದು’ ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದೀನ್‌ ಕಚೇರಿವಾಲೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌., ಉಪವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ಹಾಜರಿದ್ದರು. ನಗರದ ಶಿವನಗರದಲ್ಲಿ ‘ಪಿಂಕ್‌ ಜಿಮ್‌’ ಕಾಮಗಾರಿಗೆ ಸಚಿವ ಖಂಡ್ರೆ ಚಾಲನೆ ನೀಡಿದರು.

ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು 100 ಅಡಿ ಧ್ವಜ ಸ್ತಂಭದ ಅಡಿಯಲ್ಲಿ ಚಿತ್ತಾಕರ್ಷಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು 100 ಅಡಿ ಧ್ವಜ ಸ್ತಂಭದ ಅಡಿಯಲ್ಲಿ ಚಿತ್ತಾಕರ್ಷಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ಪೊಲೀಸ್‌ ಶ್ವಾನ ದಳದವರು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಅವರ ಕೌಶಲ ಪ್ರದರ್ಶಿಸಿದರು
ಪೊಲೀಸ್‌ ಶ್ವಾನ ದಳದವರು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಅವರ ಕೌಶಲ ಪ್ರದರ್ಶಿಸಿದರು
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳೊಂದಿಗೆ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಕಂಡಿದ್ದು
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳೊಂದಿಗೆ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಕಂಡಿದ್ದು
ಪೊಲೀಸ್‌ ಹಾಗೂ ಕೆಎಸ್‌ಆರ್‌ಪಿ ತುಕಡಿಗಳಿಂದ ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಆಕರ್ಷಕ ಪಥ ಸಂಚಲನ ನಡೆಯಿತು
ಪೊಲೀಸ್‌ ಹಾಗೂ ಕೆಎಸ್‌ಆರ್‌ಪಿ ತುಕಡಿಗಳಿಂದ ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಆಕರ್ಷಕ ಪಥ ಸಂಚಲನ ನಡೆಯಿತು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಅಲಂಕರಿಸಿದ ತೆರೆದ ವಾಹನದಲ್ಲಿ ತೆರಳಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಅಲಂಕರಿಸಿದ ತೆರೆದ ವಾಹನದಲ್ಲಿ ತೆರಳಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು
ಶಾಲಾ ಮಕ್ಕಳು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಸಮೂಹ ನೃತ್ಯ ಪ್ರಸ್ತುತಪಡಿಸಿದರು
ಪ್ರಜಾವಾಣಿ ಚಿತ್ರಗಳು: ಗುರುಪಾದಪ್ಪ ಸಿರ್ಸಿ
ಶಾಲಾ ಮಕ್ಕಳು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಸಮೂಹ ನೃತ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರಗಳು: ಗುರುಪಾದಪ್ಪ ಸಿರ್ಸಿ
ವಿದ್ಯಾರ್ಥಿನಿಯರು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿ ಗಮನ ಸೆಳೆದರು
ವಿದ್ಯಾರ್ಥಿನಿಯರು ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿ ಗಮನ ಸೆಳೆದರು

‘ಅಕ್ಕ’ ಪಡೆ ಆರಂಭ ‘ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಬೀದರ್‌ ಜಿಲ್ಲೆಯಲ್ಲಿ ಮಹಿಳಾ ಪೊಲೀಸರನ್ನು ಒಳಗೊಂಡ ‘ಅಕ್ಕ’ ಪಡೆ ಆರಂಭಿಸಲಾಗುವುದು. ಮಹಿಳೆಯರ ಹಕ್ಕು ಮತ್ತು ಸ್ವಾಭಿಮಾನದ ಸಂಕೇತವಾಗಿರುವ ಹನ್ನೆರಡನೇ ಶತಮಾನದ ಅಕ್ಕಮಹಾದೇವಿ ಹೆಸರಲ್ಲಿ ಈ ಪಡೆ ರಚಿಸಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಈ ಪಡೆ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಶಿಬಿರ ಆಯೋಜಿಸಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸಲಿದೆ. ಪೋಕ್ಸೋ ಕಾಯ್ದೆ ಬಗ್ಗೆಯೂ ಅರಿವು ಮೂಡಿಸಲಿದೆ. ಬೆಳಗಾವಿಯಲ್ಲಿ ಚನ್ನಮ್ಮ ಪಡೆ ಚಿತ್ರದುರ್ಗದಲ್ಲಿ ಓಬವ್ವ ಪಡೆ ಸ್ಥಾಪಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 15 ಜನ ಪೊಲೀಸರನ್ನು ಒಳಗೊಂಡ ವಿಶೇಷ ಪೊಲೀಸ್‌ ಪಡೆಗೆ (ಡಿಎಸ್‌ಡಬ್ಲ್ಯೂಟಿಟಿ) ಬಲಪಡಿಸಲಾಗುವುದು. ಅತ್ಯಾಧುನಿಕ ಶಸ್ತ್ರಾಸ್ತ್ರ ಡ್ರೋನ್‌ ಮಾದಕದ್ರವ್ಯ ಪತ್ತೆ ಮಾಡುವ ವಿಶೇಷ ಸಾಧನಗಳನ್ನು ಒದಗಿಸಲಾಗುವುದು ಎಂದರು.

‘ಬೆಳೆಹಾನಿ ತಡೆಗೆ ಸೌರ ತಂತಿ ಬೇಲಿ’ ‘ಕಾಡಂಚಿನ ಪ್ರದೇಶದ ರೈತರ ಜಮೀನಿಗೆ ಕಾಡುಹಂದಿ ಕೃಷ್ಣಮೃಗಗಳು ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಇದನ್ನು ತಡೆಯಲು ಸುಮಾರು 175 ಕಿ.ಮೀ ಸೌರ ತಂತಿ ಬೇಲಿ ನಿರ್ಮಿಸಲಾಗುವುದು.ಇದಕ್ಕಾಗಿ ₹2 ಕೋಟಿ ಅನುದಾನ ನೀಡಲಾಗುವುದು. ನೌಬಾದ್‌ ಅರಣ್ಯ ತರಬೇತಿ ಕೇಂದ್ರದ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ ₹5 ಕೋಟಿ ನೀಡಲಾಗುವುದು. ನಟೆ ರೋಗದಿಂದ ಬೆಳೆ ಹಾನಿಯಾದ ರೈತರಿಗೆ ಎರಡು ವಾರಗಳಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಸಚಿವ ಖಂಡ್ರೆ ಭರವಸೆ ನೀಡಿದರು.

ಬೃಂದಾವನ ಮಾದರಿಯಲ್ಲಿ ಕಾರಂಜಾ ‘ಮಂಡ್ಯ ಜಿಲ್ಲೆಯ ಬೃಂದಾವನ ವಿಜಯಪುರದ ಆಲಮಟ್ಟಿ ಜಲಾಶಯದ ಪರಿಸರದಲ್ಲಿ ನಿರ್ಮಿಸಿರುವ ಉದ್ಯಾನದ ಮಾದರಿಯಲ್ಲಿ ಕಾರಂಜಾ ಜಲಾಶಯದ ಎದುರು ನಿರ್ಮಿಸಲಾಗುವುದು. ಈಗಾಗಲೇ ಈ ಸಂಬಂಧ ವಿಸ್ತೃತ ಯೋಜನಾ ವರದಿ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ. ಅತ್ಯುತ್ತಮ ಸೌಕರ್ಯವುಳ್ಳ ಸುಂದರ ಉದ್ಯಾನ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಅತಿವಾಳ ಬಳಿ ನಿರ್ಮಿಸುವ ಚಿಂತನೆ ಇದೆ. ಎಲ್ಲ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಖಂಡ್ರೆ ತಿಳಿಸಿದರು.

‘ಕರೇಜ್‌ ಭೇಟಿ ಜನಸಂಪರ್ಕ ಸಭೆ’ ‘ಬೀದರ್‌ನಲ್ಲಿ ಕರೇಜ್‌ ವ್ಯವಸ್ಥೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪುನಃ ಆರಂಭಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. ಅದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಬೆಳೆಸಲಾಗುವುದು. ಶೀಘ್ರದಲ್ಲೇ ನಾನು ಕೂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುವೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘ಜಿಲ್ಲೆಯಲ್ಲಿ ಒಟ್ಟು 18 ಟಿಎಂಸಿ ಅಡಿ ನೀರಿಗೆ ಯೋಜನೆ ರೂಪಿಸಲಾಗಿದೆ. 5 ಟಿಎಂಸಿ ಅಡಿ ನೀರಿಗಾಗಿ ಹೊಸದಾಗಿ ಯೋಜನೆ ರೂಪಿಸಬೇಕಿದೆ. ಬರುವ ದಿನಗಳಲ್ಲಿ ತಾಲ್ಲೂಕು ಜಿಲ್ಲಾಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಅಧಿಕಾರಿಗಳನ್ನು ಕೂರಿಸಿಕೊಂಡು ಸ್ಥಳದಲ್ಲೇ ಜನರ ಸಮಸ್ಯೆ ಬಗೆಹರಿಸಲಾಗುವುದು. ಜನಸ್ನೇಹಿ ಜನಪರ ಸರ್ಕಾರ ನಮ್ಮ ಗುರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT