ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ

ಭಾಲ್ಕಿಯಲ್ಲಿ 9 ಹುದ್ದೆಗಳು ಖಾಲಿ, ಅವಿಭಜಿತ ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದೇ ಠಾಣೆ: ಜಾಗ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ
Last Updated 9 ಮೇ 2022, 3:14 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಒಂದು ತಿಂಗಳಿಂದ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬಯಲು ಪ್ರದೇಶದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಅಲ್ಲಲ್ಲಿ ಅಗ್ನಿ ಅವಘಡ ಸಂಭವಿಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರೂ ಕೆಲ ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಗಂಭೀರವಾಗಿದ್ದರೂ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ.

ಜಿಲ್ಲೆಯ ಎಂಟು ತಾಲ್ಲೂಕುಗಳ ಪೈಕಿ ಹೊಸ ಎರಡು ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಯೇ ಇಲ್ಲ. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಅಧಿಕಾರಿಗಳು ಜಾಗ ಕೊಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಆದರೆ, ಜಿಲ್ಲಾಡಳಿತ ಮೂರು ವರ್ಷಗಳಿಂದ ಕಚೇರಿಗೆ ಜಾಗ ಹುಡುಕುವುದರಲ್ಲೇ ಇದೆ.

ಚಿಟಗುಪ್ಪದಲ್ಲಿ ಈಗಾಗಲೇ ಒಂದು ಅಗ್ನಿಶಾಮಕ ಠಾಣೆ ಇದೆ. ತಾಲ್ಲೂಕಿನ ವ್ಯಾಪ್ತಿ ಹಾಗೂ ಅವಘಡಗಳ ಅಂಕಿ ಅಂಶಗಳ ಆಧಾರದ ಮೇಲೆ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜಾಗ ಕೇಳಲಾಗಿದೆ.

‘ಸಾಮಾನ್ಯವಾಗಿ ಕೃಷಿ ಚಟುವಟಿಕೆ ಪೂರ್ಣಗೊಂಡ ನಂತರ ರೈತರು ಹೊಲಗಳಲ್ಲಿನ ಕಸಕ್ಕೆ ಬೆಂಕಿ ಇಡುತ್ತಾರೆ. ಇದರ ಒಂದು ಕಿಡಿ ಹಾರಿ ಬೇರೆ ಕಡೆಗೆ ಹೋದರೂ ಬೆಂಕಿ ಹೊತ್ತಿಕೊಳ್ಳುತ್ತದೆ. ಮನ್ನಾಎಖ್ಖೆಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಗದ್ದೆಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚು. ಬೀದರ್‌ ಇಲ್ಲವೆ ಹುಮನಾಬಾದ್‌ನಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಕಬ್ಬಿನ ಹೊಲವೇ ಬೆಂಕಿಗೆ ಆಹುತಿಯಾಗುತ್ತಿದೆ. ಮನ್ನಾಎಖ್ಖೆಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ’ ಎಂದು ಬಾವಗಿಯ ಸಿದ್ಧಾರೂಢ ಭಾಲ್ಕೆ ಹೇಳುತ್ತಾರೆ.

ಅವಿಭಜಿತ ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದೇ ಅಗ್ನಿಶಾಮಕ ಠಾಣೆ ಇದೆ. ಬಸವಕಲ್ಯಾಣ ನಗರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ 20 ಜನ ಸಿಬ್ಬಂದಿ ಹಾಗೂ ಎರಡು ವಾಹನಗಳಿವೆ. ಕೊಳವೆಬಾವಿಯ ನೀರನ್ನು ವಾಹನಗಳಿಗೆ ತುಂಬಿಸಲಾಗುತ್ತದೆ. ಬೇಸಿಗೆಯಲ್ಲಿ ಆಗಾಗ ಕೊಳವೆ ಬಾವಿ ಕೈಕೊಟ್ಟು ನೀರಿನ ಸಮಸ್ಯೆ ಆಗುತ್ತದೆ.

ಭಾಲ್ಕಿ ತಾಲ್ಲೂಕಿನಲ್ಲಿ 2022ರ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 74 ಅಗ್ನಿ ಅವಘಡ ಸಂಭವಿಸಿವೆ. ಭಾಲ್ಕಿ ಅಗ್ನಿಶಾಮಕ ಠಾಣೆಯಲ್ಲಿ 27 ಸಿಬ್ಬಂದಿ ಬೇಕಿದ್ದರೂ 9 ಹುದ್ದೆಗಳು ಖಾಲಿ ಇವೆ. ಕೆಲಸದ ಒತ್ತಡ ಹೆಚ್ಚಿರುವ ಕಾರಣ ನಾಲ್ವರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘2021ರಲ್ಲಿ ಆಗ್ನಿಶಾಮಕ ಠಾಣೆಗೆ ಒಟ್ಟು 803 ಕರೆಗಳು ಬಂದಿದ್ದರೆ, 2022ರ ಮೇ ವರೆಗೆ 418 ಕರೆಗಳು ಬಂದಿವೆ. ಕಳೆದ ವರ್ಷ 22 ಹಾಗೂ ಈ ವರ್ಷ 14 ಜನರ ಜೀವ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ ₹ 8,22,88,000 ಮೌಲ್ಯದ ಆಸ್ತಿ ರಕ್ಷಣೆ ಮಾಡಿದರೆ, ಪ್ರಸಕ್ತ ₹ 34,03,95,000 ಮೌಲ್ಯದ ಆಸ್ತಿ ರಕ್ಷಣೆ ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ 74 ಜಾಗೃತಿ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಅಗ್ನಿ ಅನಾಹುತಗಳ ತಿಳಿವಳಿಕೆ ನೀಡಲು ಪ್ರಯತ್ನಿಸಲಾಗಿದೆ’ ಎಂದು ಜಿಲ್ಲಾ ಅಗ್ನಿ ಶಾಮಕ ಆಧಿಕಾರಿ ಮುಜಮಿಲ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT