ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನಿತ್ಯ ನಾಲ್ಕು ತಾಸು ವಿದ್ಯುತ್‌ ಕಡಿತ, ಶಾಶ್ವತ ಪರಿಹಾರಕ್ಕೆ ಒತ್ತಾಯ

ಗ್ರಾಹಕರ ಮನವಿಗೆ ಸ್ಪಂದಿಸದ ಜೆಸ್ಕಾಂ
Last Updated 15 ಜುಲೈ 2020, 15:02 IST
ಅಕ್ಷರ ಗಾತ್ರ

ಬೀದರ್: ನಗರದ ಹೃದಯ ಭಾಗದಲ್ಲಿ 20 ದಿನಗಳಿಂದ ನಿತ್ಯ ಎರಡರಿಂದ ನಾಲ್ಕು ತಾಸು ಅನಿಯಮಿತವಾಗಿ ವಿದ್ಯುತ್‌ ಕಡಿತಗೊಳ್ಳುತ್ತಿರುವ ಕಾರಣ ಜೆಸ್ಕಾಂ ಗ್ರಾಹಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ವ್ಯಾಪಾರಸ್ಥರು, ಆಸ್ಪತ್ರೆಗಳ ಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಗರದಲ್ಲಿ ಅನೇಕ ಬಾರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಪರೀಕ್ಷೆ ಅವಧಿಯಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಪರೀಕ್ಷೆ ಮುಗಿದ ನಂತರ ಜೆಸ್ಕಾಂ ಲೋಪ ಸರಿಪಡಿಸುವಲ್ಲಿ ವಿಫಲವಾಗಿದೆ.

ಹಿಂದಿನ ವಾರ ಸಂಜೆ 4 ಗಂಟೆಗೆ ಹೋಗುತ್ತಿದ್ದ ಕರೆಂಟ್‌ ರಾತ್ರಿ 10 ಗಂಟೆಯಾದರೂ ಬರುತ್ತಿರಲಿಲ್ಲ. ಇದೀಗ ಕತ್ತಲಾಗುತ್ತಲೇ ಕರೆಂಟ್‌ ಕೈಕೊಡುತ್ತಿದೆ. ವಿದ್ಯುತ್‌ ನಿತ್ಯ ಕೈಕೊಡುತ್ತಿರುವ ಕಾರಣ ವ್ಯಾಪಾರ ವಹಿವಾಟಿನ ಮೇಲೆಯೂ ದುಷ್ಪರಿಣಾಮ ಬೀರಿದೆ.

ಜೂನ್‌ 22 ರಿಂದ ನಿತ್ಯ ಎರಡರಿಂದ ನಾಲ್ಕು ತಾಸು ವಿದ್ಯುತ್‌ ಕೈಕೊಡುತ್ತಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್‌ಗೆ ನಿತ್ಯ ವಾಟ್ಸ್‌ಆ್ಯಪ್ ಮೊಬೈಲ್‌ ಸಂದೇಶ ಕಳಿಸಿ ಫೋನ್‌ ಮಾಡಿ ಹೇಳಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧರಿಲ್ಲ ಎಂದು ಗ್ರಾಹಕರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿದ್ಯುತ್‌ ತಂತಿಗಳಿಗೆ ತಗುಲಿದ್ದ ಮರದ ಟೊಂಗೆಗಳನ್ನು ತೆರವುಗೊಳಿಸುವ ಬದಲು ಜೆಸ್ಕಾಂ ಸಿಬ್ಬಂದಿ ನಗರದಲ್ಲಿ ಅನೇಕ ಮರಗಳನ್ನೇ ನೆಲಕ್ಕೆ ಉರುಳಿಸಿದ್ದಾರೆ. ಮನೆಗಳ ಮಾಲೀಕರಿಂದಲೇ ಹಣ ಪಡೆದು ಮರಗಳನ್ನು ಕೆಡವಿ ಹಾಕಿದ್ದಾರೆ. ಇಷ್ಟಾದರೂ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ ಎಂದು ದೂರುತ್ತಾರೆ.

‘ಬೇಸಿಗೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ತಾಂತ್ರಿಕ ಕಾರಣಗಳಿಂದ 15 ದಿನಗಳಿಂದ ಸಮಸ್ಯೆಯಾಗುತ್ತಿರುವುದು ನಿಜ. ತುರ್ತು ದುರಸ್ತಿ ಕಾರ್ಯವನ್ನು ಪ್ರತಿ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಾಡಿಕೊಳ್ಳಬೇಕು. ವಿದ್ಯುತ್ ಕಡಿತಗೊಳಿಸುವ ಮೊದಲು ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಮುನ್ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಖಯಾಲೆ ಹೇಳುತ್ತಾರೆ.

‘ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಹಿಂದೆ ಲಾಕ್‌ಡೌನ್‌ ಅವಧಿಯಲ್ಲೇ ದುರಸ್ತಿ ಕೆಲಸ ಮಾಡಬಹುದಿತ್ತು. ಪದೇ ಪದೇ ವಿದ್ಯುತ್‌ ಕಡಿತದಿಂದ ವ್ಯಾಪಾರಸ್ಥರು, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ದುರಸ್ತಿ ಕೆಲಸ ಮಾಡುವವರು, ಬ್ಯಾಂಕ್‌, ಆಸ್ಪತ್ರೆಗಳು ತೊಂದರೆ ಅನುಭವಿಸುತ್ತಿವೆ. ಟ್ರಾನ್ಸ್‌ಫಾರ್ಮರ್‌ಗಳಿಗೆ ಸರಿಯಾಗಿ ಆಯಿಲ್‌ ಹಾಕುತ್ತಿಲ್ಲ. ನಿರ್ವಹಣೆಯನ್ನೂ ಮಾಡುತ್ತಿಲ್ಲ. ಕೆಟ್ಟ ಮೇಲೆ ದುರಸ್ತಿ ಮಾಡಲು ಹೋಗುತ್ತಿದ್ದಾರೆ. ಜೆಸ್ಕಾಂ ಸಿಬ್ಬಂದಿಯನ್ನು ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಗೆ ವಿದ್ಯುತ್‌ ಕೊರತೆ ಇಲ್ಲ. ಜೆಸ್ಕಾಂ ಸಿಬ್ಬಂದಿ ನಿರ್ವಹಣೆ ಸಮಸ್ಯೆಯಿಂದ ಜಿಲ್ಲೆಯ ಜನ ತೊಂದರೆ ಅನುಭವಿಸಬೇಕಾಗಿದೆ. ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರೊಂದಿಗೆ ಮಾತನಾಡಿದ್ದೇನೆ. ಜನ ಮೊದಲೇ ಲಾಕ್‌ಡೌನ್‌ನಿಂದಾಗಿ ಸಮಸ್ಯೆಯಲ್ಲಿದ್ದಾರೆ. ಮನೆಯಲ್ಲಿ ಕುಳಿತು ಕೆಲಸ ಮಾಡಬೇಕೆಂದರೂ ವಿದ್ಯುತ್‌ ಇಲ್ಲದ ಕಾರಣ ಜನ ತೊಂದರೆ ಅನುಭವಿಸಬೇಕಾಗಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪ ಮಾಡಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.

‘ರೋಟರಿ ವೃತ್ತ, ಸ್ಟೇಡಿಯಂ ರಸ್ತೆ, ಗಣೇಶ ಮೈದಾನ, ಮೋಹನ್‌ ಮಾರ್ಕೆಟ್, ಕೆಇಬಿ ರಸ್ತೆ, ಮಡಿವಾಳ ವೃತ್ತ, ಉದಗಿರ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ತಿಂಗಳಿಂದ ವಿದ್ಯುತ್‌ ಸಮಸ್ಯೆ ಇದೆ. ಸಂಜೆಯೇ ವಿದ್ಯುತ್‌ ಕಡಿತಗೊಳಿಸುತ್ತಿರುವ ಕಾರಣ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ’ ಎಂದು ಝೆರಾಕ್ಸ್‌ ಅಂಗಡಿ ಮಾಲೀಕ ಶಿವಕುಮಾರ ಪಟಪಳ್ಳಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT