ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | 'ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಉಚಿತ ತರಬೇತಿ'

ರೋಟರಿ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿಕೆ
Published 17 ಫೆಬ್ರುವರಿ 2024, 6:08 IST
Last Updated 17 ಫೆಬ್ರುವರಿ 2024, 6:08 IST
ಅಕ್ಷರ ಗಾತ್ರ

ಬೀದರ್: ‘ರೋಟರಿ ಕ್ಲಬ್ ಸಂಸ್ಥೆ ವತಿಯಿಂದ ಮಾರ್ಚ್ 1 ರಿಂದ ಶಾಲೆಯಿಂದ ಹೊರಗುಳಿದ 13ರಿಂದ18 ವರ್ಷದೊಳಗಿನ ಬಾಲಕರಿಗೆ ಮೂರು ತಿಂಗಳ ವಿಶೇಷ ತರಬೇತಿ ಶಿಬಿರ ಪ್ರಾರಂಭಿಸಲಾಗುತ್ತಿದೆ’ ಎಂದು ರೋಟರಿ ಕ್ಲಬ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.

ಈಗಾಗಲೇ ರೋಟರಿ ಸಂಸ್ಥೆ ಪೋಲಿಯೊ ಮಹಾಮಾರಿ ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸಿದೆ. ಅಲ್ಲದೇ ಅನೇಕ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವುದು, ಬೆಂಚ್, ಬೈಸಿಕಲ್ ವಿತರಣೆ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸಿದೆ. ಇದೇ ಮಾದರಿಯಲ್ಲಿ ಇದೀಗ ಜಿಲ್ಲೆಯಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಅಕ್ಷರಸ್ಥರನ್ನಾಗಿ ಮಾಡುವ ಸಂಕಲ್ಪ ರೋಟರಿ ಸಂಸ್ಥೆ ಹೊಂದಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಈ ತರಬೇತಿಯಲ್ಲಿ ಒಟ್ಟು 50 ಬಾಲಕರಿಗೆ ಪ್ರವೇಶ ಕಲ್ಪಿಸಲಾಗುವುದು. ಅವರಿಗೆ ಊಟ, ವಸತಿ, ಎಲ್ಲವೂ ಉಚಿತವಾಗಿ ನೀಡಲಾಗುವುದು. ಮುಂದಿನ ಜೂನ್ 1ರಂದು ಆ ವಿದ್ಯಾರ್ಥಿಯ ವಯಸ್ಸಿಗೆ ಅನುಗುಣವಾಗಿ ಸರ್ಕಾರಿ ಶಾಲೆಯಲ್ಲಿ ದಾಖಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ತರಬೇತಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಬಳಿಕ ಕಲ್ಯಾಣ ಕರ್ನಾಟಕದ ಇನ್ನಿತರ ಜಿಲ್ಲೆಗಳ ಮಕ್ಕಳಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.

ತರಬೇತಿಯಲ್ಲಿ ಭಾಗವಹಿಸುವ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಪ್ರತ್ಯೇಕ ಪಠ್ಯ ಪುಸ್ತಕ ಸಿದ್ಧಪಡಿಸಲಾಗಿದೆ. ಅಲ್ಲದೇ ಅವರಿಗೆ ಬೋಧಿಸಲು ಶಾಹೀನ್ ಶಿಕ್ಷಣ ಸಂಸ್ಥೆ ನುರಿತ ಶಿಕ್ಷಕರಿಗೆ ವ್ಯವಸ್ಥೆ ಮಾಡಿದೆ ಎಂದರು.

ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿಇದೇ ಮಾದರಿಯಲ್ಲಿ ತರಬೇತಿ ಕಳೆದ ಹದಿನೈದು ವರ್ಷಗಳಿಂದ ನಡೆಸುತ್ತಿದ್ದೇವೆ. ಜಿಲ್ಲೆ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳ ವಿದ್ಯಾರ್ಥಿಗಳು ತರಬೇತಿ ಪಡೆದು ಅಕ್ಷರಸ್ಥರಾಗುತ್ತಿದ್ದಾರೆ. ಇದೀಗ ರೋಟರಿ ಸಂಸ್ಥೆ ತರಬೇತಿ ನಡೆಸಲು ಮುಂದಾಗಿದೆ. ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಾವಶೆಟ್ಟಿ ಪಾಟೀಲ (9448125349), ಡಾ. ಉಲ್ಲಾಸ ಕಟ್ಟಿಮನಿ (9916524728), ನಿತಿನ್‌ ಕರ್ಪೂರ್ (9845621852), ಚಂದ್ರಕಾಂತ ಕಾಡಾದಿ (9448114647) ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪ್ರಮುಖರಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಗುಂಡಪ್ಪ ಗೋಧೆ, ಜಹೀರ್ ಅನ್ವರ್, ಸಂಗಮೇಶ ಆಣದೂರೆ, ಚಂದ್ರಕಾಂತ ಕಾಡಾದಿ ಹಾಜರಿದ್ದರು.

ತರಬೇತಿಯಲ್ಲಿ 50 ಬಾಲಕರಿಗೆ ಅವಕಾಶ ರೋಟರಿ ಸಂಸ್ಥೆಯಿಂದ ಊಟ, ವಸತಿ ಗ್ರಾಮೀಣರಿಗೆ ಮೊದಲ ಆದ್ಯತೆ

ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಜಿಲ್ಲೆಯಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಂಖ್ಯೆ ಶೂನ್ಯಕ್ಕೆ ತರುವುದು. - ಬಸವರಾಜ ಧನ್ನೂರ ರೋಟರಿ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT