ಭಾನುವಾರ, ಜೂನ್ 13, 2021
21 °C
ಶಂಕಿತರ ನೆರವಿಗೆ ಸಮಗ್ರ ಮಾಹಿತಿಯ ವೆಬ್‍ಸೈಟ್ ಆರಂಭ

ಬೀದರ್ | ಶಾಹೀನ್‍ನಿಂದ ಉಚಿತ ಕೋವಿಡ್ ಫೀವರ್ ಕ್ಲಿನಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಕೋವಿಡ್ ಶಂಕಿತರ ನೆರವಿಗಾಗಿ ಎರಡು 'ಉಚಿತ ಕೋವಿಡ್ ಫೀವರ್ ಕ್ಲಿನಿಕ್'ಗಳನ್ನು ಆರಂಭಿಸಿದೆ. ಕುಳಿತಲ್ಲೇ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ www.bidarcovidhelpline.com ವೆಬ್‍ಸೈಟ್ ಅನ್ನೂ ಶುರು ಮಾಡಿದೆ.

ನಗರದ ಗವಾನ್ ಚೌಕ್ ಬಳಿ ಹಾಗೂ ಅಬುಲ್ ಫೈಜ್ ದರ್ಗಾದಲ್ಲಿ ತಲಾ ಒಬ್ಬರು ವೈದ್ಯರು, ಶುಶ್ರೂಷಕ ಹಾಗೂ ವೈದ್ಯಕೀಯ ಸಲಕರಣೆ ಒಳಗೊಂಡ ಫೀವರ್ ಕ್ಲಿನಿಕ್ ಪ್ರಾರಂಭಿಸಿದೆ. ಗವಾನ್ ಚೌಕ್ ಕ್ಲಿನಿಕ್ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ ಅಬುಲ್ ಫೈಜ್ ದರ್ಗಾ ಕ್ಲಿನಿಕ್ ಸಂಜೆ 4 ರಿಂದ 7 ರ ವರೆಗೆ ತೆರೆದಿರಲಿದೆ. ಇಲ್ಲಿ ಸಾರ್ವಜನಿಕರಿಗೆ ತಪಾಸಣೆಯಷ್ಟೇ ಅಲ್ಲ; ಔಷಧಿಯೂ ಉಚಿತವಾಗಿ ದೊರೆಯಲಿದೆ.

ಗವಾನ್ ಚೌಕ್ ಬಳಿಯ ಉಚಿತ ಕೋವಿಡ್ ಫೀವರ್ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಕೋವಿಡ್ ಶಂಕಿತರು ಫೀವರ್ ಕ್ಲಿನಿಕ್‍ಗಳ ಪ್ರಯೋಜನ ಪಡೆಯಬೇಕು. ಉಚಿತ ಸೇವೆಗಾಗಿ ಡಾ. ಜಮಿಲ್ (ಮೊ. ಸಂಖ್ಯೆ: 6360218307) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ನಗರದಲ್ಲಿ ಇನ್ನೂ ಐದು ಫೀವರ್ ಕ್ಲಿನಿಕ್‍ಗಳನ್ನು ತೆರೆಯುವ ಉದ್ದೇಶ ಇದೆ. ಆಸಕ್ತ ವೈದ್ಯರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಂಸ್ಥೆ ಆರಂಭಿಸಿರುವ ವೆಬ್‍ಸೈಟ್‍ನಲ್ಲಿ ಪ್ಲಾಸ್ಮಾ, ಆಂಬುಲನ್ಸ್, ಕೋವಿಡ್ ಫಸ್ಟ್ ಏಡ್, ವೈದ್ಯರ ಉಚಿತ ಸಲಹೆ, ಕೋವಿಡ್ ಆಸ್ಪತ್ರೆಗಳ ಮಾಹಿತಿ, ಆಕ್ಸಿಜನ್ ಸೌಲಭ್ಯ, ಕೌನ್ಸೆಲಿಂಗ್, ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳು ಲಭ್ಯ ಇವೆ ಎಂದು ಹೇಳಿದರು.

ವೆಬ್‍ಸೈಟ್‍ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸ ಬಯಸುವವರು ಮೊಬೈಲ್ ಸಂಖ್ಯೆ 8970973758 ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಸಂಸ್ಥೆಯು ಆರಂಭದಿಂದಲೂ ಕೋವಿಡ್ ತಡೆಗಾಗಿ ಜಿಲ್ಲಾ ಆಡಳಿತದ ಕಾರ್ಯಗಳಿಗೆ ಕೈಜೋಡಿಸುತ್ತ ಬಂದಿದೆ. ಕೋವಿಡ್ ಜಾಗೃತಿ, ಕ್ವಾರಂಟೈನ್ ಕೇಂದ್ರ ಹಾಗೂ ಕೋವಿಡ್ ಕೇರ್ ಸೆಂಟರ್ ತೆರೆದು ಜನರಿಗೆ ನೆರವಾಗಿದೆ. ಲಾಕ್‍ಡೌನ್ ವೇಳೆ ಮಾನವೀಯ ನೆಲೆಯಲ್ಲಿ ಕಾರ್ಮಿಕರಿಗೆ ಅವರವರ ಊರುಗಳಿಗೆ ಮರಳಲು ಉಚಿತ ಬಸ್, ರೋಗಿಗಳಿಗೆ ಉಚಿತ ಔಷಧಿ, ಬಡವರು, ಅಸಹಾಯಕರಿಗೆ ಉಚಿತ ಆಹಾರಧಾನ್ಯ ಕಿಟ್ ವಿತರಿಸಿದೆ ಎಂದು ತಿಳಿಸಿದರು.

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸುರಕ್ಷತಾ ನಿಯಮಗಳನ್ನು ಪಾಲಿಸಿದಾಗ ಮಾತ್ರ ಸರ್ಕಾರದ ಪ್ರಯತ್ನಗಳು ಫಲ ನೀಡಲಿವೆ. ಕೋವಿಡ್ ತಡೆಯಲು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು.

ಡಾ. ಮಕ್ಸೂದ್ ಚಂದಾ, ಅಬ್ದುಲ್ ಮನ್ನಾನ್ ಸೇಠ್, ಟೀಮ್ ಯುವಾದ ವಿನಯ ಮಾಳಗೆ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು