ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ |ವಿಷಯುಕ್ತ ಗ್ಯಾಸ್ ಸೋರಿಕೆ; ಇಬ್ಬರ ದಾರುಣ ಸಾವು

Published 23 ಜನವರಿ 2024, 6:12 IST
Last Updated 23 ಜನವರಿ 2024, 6:12 IST
ಅಕ್ಷರ ಗಾತ್ರ

ಹುಮನಾಬಾದ್‌/ಬೀದರ್: ಹುಮನಾಬಾದ್‌ ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಗ್ಯಾಸ್ ಸೋರಿಕೆಯಿಂದ ಇಬ್ಬರು ಯುವಕರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪ್ರಸನ್ನ ಪ್ರೀ ಪ್ರೊಸೆಸಿಂಗ್‌ ಲಿಮಿಟೆಡ್‌ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ. ಹುಮನಾಬಾದ್‌ ತಾಲ್ಲೂಕಿನ ವಡ್ಡನಕೇರಾ ಗ್ರಾಮದ ಮೊಹಮ್ಮದ್ ಶಾಬಾದ್ (21) ಹಾಗೂ ಮಧ್ಯಪ್ರದೇಶದ ಇಂದ್ರಜೀತ್ (23) ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸರ್ಕಾರಿ ಆಸ್ಪತ್ರೆ ಹತ್ತಿರ ನೂರಾರು ಜನರು ಜಮಾವಣೆಗೊಂಡಿದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. , ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ್, ಸಿಪಿಐ ಗುರು ಪಾಟೀಲ ಭೇಟಿ ನೀಡಿ ಘಟಕದ ಕಾರ್ಯ ಸ್ಥಗಿತಗೊಳಿಸಿ ಸಂಬಂಧಿಸಿದವರನ್ನು ವಿಚಾರಿಸಿದರು.‌ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.


ತನಿಖೆ ನಂತರ ವಾಸ್ತವ:

‘ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಕಂಪನಿಯಲ್ಲಿ ಬಳಕೆಗೆ ಬಾರದ ಕೈಗಾರಿಕೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ. ಕಾರ್ಖಾನೆಯ ಗೋದಾಮಿನಲ್ಲಿ ಟ್ಯಾಂಕರ್‌ಗೆ ಕೈಗಾರಿಕೆಗಳ ವಿಷಯುಕ್ತ ರಾಸಾಯನಿಕ ತ್ಯಾಜ್ಯವನ್ನು ತುಂಬುವಾಗ ಘಟನೆ ನಡೆದಿದೆ. ಮೇಲ್ನೋಟಕ್ಕೆ ವಿಷಯುಕ್ತ ರಾಸಾಯನಿಕ‌ ಗ್ಯಾಸ್‌ ಸೋರಿಕೆಯಿಂದ ಯುವಕರಿಬ್ಬರೂ ಮೃತಪಟ್ಟಿರುವುದು ಗೊತ್ತಾಗಿದೆ. ರಾತ್ರಿ 9ರ ಸುಮಾರಿಗೆ ಈ ಘಟನೆ ನಡೆದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಅವರು ವರದಿ ಸಲ್ಲಿಸಿದ ನಂತರ ಘಟನೆಯ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೋಮವಾರ ತಿಳಿಸಿದ್ದಾರೆ.

ವಿಷಯುಕ್ತ ರಾಸಾಯನಿಕ ಗ್ಯಾಸ್‌ ಪರಿಸರದಲ್ಲಿ ಹರಡಿಲ್ಲ. ಕೈಗಾರಿಕೆಗಷ್ಟೇ ಸೀಮಿತವಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
–ಗೋವಿಂದ ರೆಡ್ಡಿ ಜಿಲ್ಲಾಧಿಕಾರಿ
ಜಿಲ್ಲೆಯ ಕೈಗಾರಿಕಾ ಘಟಕಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಬೇಕು. ಇಂತಹ ಘಟನೆ ಮರುಕಳಿಸದಂತೆ ಸೂಚನೆ ನೀಡಲಾಗಿದೆ.
–ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಐದು ಜನರ ವಿರುದ್ಧ ದೂರು

ವಿಷಯುಕ್ತ ಗ್ಯಾಸ್‌ ಸೋರಿಕೆಯಿಂದ ಮಗನನ್ನು ಕಳೆದುಕೊಂಡಿರುವ ವಡ್ಡನಕೇರಾದ ಮೊಹಮ್ಮದ್‌ ಕುತುಬೋದ್ದಿನ್‌ ಅವರು ಐದು ಜನರ ವಿರುದ್ಧ ಹುಮನಾಬಾದ್‌ ಪೊಲೀಸ್‌ ಠಾಣೆಗೆ ಸೋಮವಾರ (ಜ.22) ದೂರು ಕೊಟ್ಟಿದ್ದಾರೆ.

ಪ್ರಸನ್ನ ಪ್ರೀ ಪ್ರೊಸೆಸಿಂಗ್ ಕೈಗಾರಿಕೆ ಮಾಲೀಕ ಪಾಂಡುರಂಗ ರೆಡ್ಡಿ ನಿರ್ದೇಶಕ ಪಿ. ಕೊಂಡಾರೆಡ್ಡಿ ವ್ಯವಸ್ಥಾಪಕ ಜ್ಯೋತಿಪ್ರಕಾಶ ಪಟನಾಯಕ ಕೈಗಾರಿಕೆ ಅಧಿಕಾರಿ ಪರಿಸರ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದ್ದಾರೆ. ‘ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕೈಗಾರಿಕೆ ನಡೆಸಲಾಗುತ್ತಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸದೆ ಕೈಗಾರಿಕೆ ನಡೆಸಲು ಅನುಮತಿ ಕೊಟ್ಟಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT