ಶನಿವಾರ, ಆಗಸ್ಟ್ 20, 2022
22 °C
65 ಕಾರ್ಮಿಕರಿಂದ 80 ದಿನಗಳ ಕಾಲ ಮನರೇಗಾ ಕೆಲಸ

ಗೊಗ್ಗವ್ವೆ ಕೆರೆಗೆ ‘ಜೀವ’ಕಳೆ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಬಳಸಿಕೊಂಡು ತಾಲ್ಲೂಕಿನ ಧೂಪತಮಹಾಗಾಂವ್ ಗೊಗ್ಗವ್ವೆ ಕೆರೆಗೆ ಕಾಯಕಲ್ಪ ನೀಡಲಾಗಿದೆ.

12ನೇ ಶತಮಾನದ ಶರಣರಲ್ಲಿ ಒಬ್ಬರಾದ ಗೊಗ್ಗವ್ವೆ ತಾಲ್ಲೂಕಿನ ಧೂಪತಮಹಗಾಂವ್ ಗ್ರಾಮದಲ್ಲಿ ಧೂಪದ ಕಾಯಕ ಮಾಡುತ್ತಿದ್ದರು. ಈಗಲೂ ಇಲ್ಲಿ ಗೊಗ್ಗವ್ವೆ ಹೆಸರಿನಲ್ಲಿ ದೇವಸ್ಥಾನ ಹಾಗೂ ಕೆರೆ ಇದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಕೆರೆ ಹೂಳು ತುಂಬಿಕೊಂಡಿತ್ತು.

ಗೊಗ್ಗವ್ವೆ ಶರಣೆ ಬಗ್ಗೆ ಗ್ರಾಮಸ್ಥರ ಭಕ್ತಿ ಹಾಗೂ ಅಧಿಕಾರಿಗಳ ಕಾಳಜಿಯಿಂದಾಗಿ ಲಾಕ್‌ಡೌನ್‌ ಅವಧಿ ಬಳಸಿಕೊಂಡು ಮನರೇಗಾ ಯೋಜನೆಯಡಿ ಅದ್ಭುತ ಕೆರೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ₹10 ಲಕ್ಷ ವೆಚ್ಚವಾಗಿದ್ದು, 65 ಜನ ಕಾರ್ಮಿಕರು 80 ದಿನಗಳ ಕಾಲ ಕೆಲಸ ಮಾಡಿ ಜಿಲ್ಲೆಯಲ್ಲಿಯೇ ಅತ್ಯಂತ ಮಾದರಿ ಕೆರೆ ನಿರ್ಮಿಸಿದ್ದಾರೆ.

ಗೊಗ್ಗವ್ವೆ ಶರಣೆ ಬಗ್ಗೆ ಗ್ರಾಮಸ್ಥರಲ್ಲಿ ತುಂಬಾ ಭಕ್ತಿ ಇದೆ. ಊರಲ್ಲಿ ಯಾವುದೇ ಶುಭ ಕಾರ್ಯ ನಡೆಯುವಾಗ ಕಡ್ಡಾಯವಾಗಿ ಮೊದಲು ಗೊಗ್ಗವ್ವೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ದೇವಸ್ಥಾನ ಮತ್ತು ಎದುರಿನ ಕೆರೆ ಜೀರ್ಣೋದ್ಧಾರ ಆಗಬೇಕು ಎಂಬ ದಶಕದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿತ್ತು.

‘ಲಾಕ್‌ಡೌನ್‌ ವೇಳೆ ಊರಿನ ಕಾರ್ಮಿಕರಿಂದ ಏನಾದರೂ ಕೆಲಸ ಮಾಡಬೇಕು ಎಂಬ ಪ್ರಸ್ತಾವ ಬಂದಾಗ ಎಲ್ಲರೂ ಗೊಗ್ಗವ್ವೆ ಕೆರೆ ನಿರ್ಮಾಣ ಮಾಡಲು ಒಮ್ಮತ ಸೂಚಿಸಿದರು. ಅಧಿಕಾರಿಗಳು ಕೂಡ ಅದಕ್ಕೆ ಸ್ಪಂದಿಸಿದ ಕಾರಣ ಈಗ ಗ್ರಾಮದಲ್ಲಿ ಉತ್ತಮ ಕರೆ ನಿರ್ಮಾಣ ಆಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನೆಹರು ಬಿರಾದಾರ ತಿಳಿಸಿದ್ದಾರೆ.

‘ಮನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನೇಂದ್ರಕುಮಾರ ಗಂಗ್ವಾರ್ ಅವರು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಶ್ವತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ಮುಂದಾಲೋಚನೆ ಫಲವಾಗಿ ಇಂದು ಧೂಪತಮಹಗಾಂವ್‌ನಲ್ಲಿ ಎರಡು ಎಕರೆ ಪ್ರದೇಶದಲ್ಲಿ ಉತ್ತಮ ಕೆರೆ ನಿರ್ಮಾಣವಾಗಿದೆ. ಈ ಕರೆ ನಿರ್ಮಾಣದಿಂದ ಗೊಗ್ಗವ್ವೆ ದೇವಸ್ಥಾನದ ಸೌಂದರ್ಯ ವೃದ್ಧಿಸಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ಹೇಳುತ್ತಾರೆ.

‘ಗೊಗ್ಗವ್ವೆ ದೇವಸ್ಥಾನ ಅಭಿವೃದ್ಧಿಪಡಿಸಿ ಧೂಪತಮಹಾಗಾಂವ್ ಒಂದು ಐತಿಹಾಸಿಕ ಹಾಗೂ ಶರಣರ ತಾಣವಾಗಿ ಮಾಡುವಂತೆ ಗ್ರಾಮ ಪಂಚಾಯಿತಿಯಿಂದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೂ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು