ಬುಧವಾರ, ಆಗಸ್ಟ್ 17, 2022
23 °C
₹1,400 ಸಾವಿರ ಮಾಸಾಶನ, ಅಂತ್ಯೋದಯ ಚೀಟಿ ನೀಡಲು ಒಪ್ಪಿಗೆ

ಪ್ರಜಾವಾಣಿ ಫಲಶೃತಿ: ಅನಾಥ ವೃದ್ಧೆಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಕಪ್ಪೆಕೇರಿ ಗ್ರಾಮದ ವೃದ್ಧೆ ಜ್ಞಾನಾಬಾಯಿ ಅವರ ಮನೆಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸೂಚನೆ ಮೇರೆಗೆ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ನೆರವು ನೀಡಿದ್ದಾರೆ.

₹ 600 ಮಾಸಾಶನ ಜೊತೆಗೆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಅಂಗವಿಕಲ ಪ್ರಮಾಣಪತ್ರ ಕೊಡಿಸಿ ತಿಂಗಳಿಗೆ ₹ 1,400 ಮಾಸಾಶನ ಬರುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ರದ್ದಾಗಿರುವ ಅವರ ಅಂತ್ಯೋದಯ ಪಡಿತರ ಚೀಟಿ ನಾಳೆಯೇ ಸಿಗುವಂತೆ ವ್ಯವಸ್ಥೆ ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಸಮ್ಮತಿಸಿದ್ದಾರೆ.

ವೃದ್ಧೆ ವಾಸಿಸುವ ಕೊಠಡಿ ಸೋರುತ್ತಿದೆ. ಹೀಗಾಗಿ ಅದನ್ನು ದುರಸ್ತಿ ಮಾಡುವ ತನಕ ಗ್ರಾಮದ ಶಾಲೆಯ ಕೊಠಡಿಯೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಸದ್ಯಕ್ಕೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಯವರು ವಹಿಸಿಕೊಂಡಿದ್ದಾರೆ.

ಬೂಡಾ ಆಯುಕ್ತ ಅಭಯ ಕುಮಾರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಆಹಾರ ಇಲಾಖೆ ಸಿರಸ್ತೆದಾರ ರವಿ ಸೂರ್ಯವಂಶಿ, ಗ್ರಾಮ ಸಹಾಯಕ ಪ್ರಜ್ವಲಕುಮಾರ ಮತ್ತಿತರರು ವೃದ್ಧೆ ತಾಯಿಯನ್ನು ಭೇಟಿ ಮಾಡಿ ಸಮಾಧಾನ ಹೇಳಿದರು. ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರದ ಕಿಟ್ ವಿತರಿಸಿದರು.

‘ವೃದ್ಧೆ ಬಹಳ ವರ್ಷಗಳಿಂದ ಸಂಕಟ ದ ಸ್ಥಿತಿಯಲ್ಲಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ನೆರವು ನೀಡಿರುವುದು ಸಂತಸ ತಂದಿದೆ. ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಸಮಸ್ಯೆಗೆ ತಕ್ಷಣಕ್ಕೆ ಸ್ಪಂದಿಸಿದ್ದು ಜನಪರ ಕಾಳಜಿಗೆ ಸಾಕ್ಷಿ’ ಎಂದು ರೇವಣಪ್ಪ ಕಪ್ಪೆಕೇರಿ ಹೇಳಿದರು.

ಜ್ಞಾನಾಬಾಯಿ ಅವರು ಎದುರಿಸುತ್ತಿರುವ ಸಮಸ್ಯೆ ಕುರಿತು ‘ಪ್ರಜಾವಾಣಿ’ಯು ಗುರುವಾರ ‘ತುತ್ತು ಅನ್ನಕ್ಕಾಗಿ ವೃದ್ಧೆಯ ನಿತ್ಯ ಪರದಾಟ’ ಶಿರ್ಷೀಕೆಯಡಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಆಡಳಿತ ವರ್ಗ ವೃದ್ಧೆಗೆ ಸ್ಪಂದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.