ಶುಕ್ರವಾರ, ಮೇ 20, 2022
23 °C
ಧೂಪತಮಹಾಗಾಂವ್ ಪಂಚಾಯಿತಿಗೆ ಅವಿರೋಧ ಆಯ್ಕೆ

ಔರಾದ್: ಪದವೀಧರ ಶ್ರೀನಿವಾಸಗೆ ಅಧ್ಯಕ್ಷ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಧೂಪತಮಹಾ ಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಡಬಲ್ ಡಿಗ್ರಿ ಪಡೆದ ಸದಸ್ಯರೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಚುನಾವಣೆಯಲ್ಲಿ ಶ್ರೀನಿವಾಸ ಗಣಪತರಾವ ಚೊನ್ನೆಕೇರೆ ಅಧ್ಯಕ್ಷರಾಗಿ ಹಾಗೂ ವಿದ್ಯಾವತಿ ಗಣಪತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ ಅವರು ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಿಂದ ಎಂಬಿಎ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಕ್ಷಮ ಕಂಪನಿಯಲ್ಲಿ 10 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜನ ಸೇವೆಯಲ್ಲಿ ತೊಡಗಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

‘ನಾನು ನಗರ ಪ್ರದೇಶದಲ್ಲಿ ಓದು ಹಾಗೂ ಕೆಲಸ ಮಾಡಿದರೂ ಸಹ ಗ್ರಾಮದ ಜತೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಊರಿಗೆ ಬರುವುದು ಮರೆತಿರಲಿಲ್ಲ. ನನ್ನ ಊರು ಹಾಗೂ ನನ್ನ ಜನ ಬೆಳೆಯಬೇಕು ಎಂಬುದು ನನ್ನ ಬಯಕೆ. ಈ ಕಾರಣ ತಿಂಗಳಿಗೆ ₹60 ಸಾವಿರ ವೇತನ ಇದ್ದರೂ ಅದನ್ನು ಬಿಟ್ಟು ಈಗ ಊರಿಗೆ ಬಂದಿದ್ದೇನೆ. ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಜನರಿಗೆ ಮೂಲ ಸೌಲಭ್ಯ ದಕ್ಕಬೇಕು. ಯುವಕರು ಸ್ವಾವಲಂಬಿಯಾಗಬೇಕು ಎಂಬುದು ನನ್ನ ಉದ್ದೇಶ. ಜನರು ಹಾಗೂ ಅಧಿಕಾರಿಗಳು ಸಹಕಾರ ನೀಡಿದರೆ ನಮ್ಮ ಪಂಚಾಯಿತಿ ರಾಜ್ಯದಲ್ಲೇ ಮಾದರಿಯಾಗಿ ಮಾಡುವುದಾಗಿ’ ನೂತನ ಅಧ್ಯಕ್ಷ ಶ್ರೀನಿವಾಸ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಎರಡೆರಡು ಪದವಿ ಪಡೆದ ಯುವ ಉತ್ಸಾಹಿ ಈ ಗ್ರಾಮ ಪಂಚಾತಿ ಅಧ್ಯಕ್ಷರಾಗಿರುವುದು ಗ್ರಾಮದ ಸೌಭಾಗ್ಯ. ಇದರಿಂದ ಅಧಿಕಾರಿಗಳಿಗೂ ಹೆಚ್ಚು ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ’ ಎಂದು ಪಿಡಿಒ ಶಿವಾನಂದ ಔರಾದೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು