ಉತ್ತಮ ಮಾವು ಫಸಲು ನಿರೀಕ್ಷೆಯಲ್ಲಿ ಬೆಳೆಗಾರರು

ಬೀದರ್: ಎರಡು ವರ್ಷ ಕೋವಿಡ್‌ನಿಂದ ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರಿಗೆ ಈ ಬಾರಿ ಬಹುಮಟ್ಟಿಗೆ ಹವಾಮಾನ ಸಾಥ್ ನೀಡಿದೆ. ಮಾವಿನ ಮರಗಳು ಯಥೇಚ್ಛ ಹೂವು ಬಿಟ್ಟಿರುವುದರಿಂದ ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲಡೆ ತೋಟಗಳಲ್ಲಿ ಮಾವಿನ ಮರಗಳು ಹೂಗಳಿಂದ ಕಂಗೊಳಿಸುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 2,151 ಹೇಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಇದರಲ್ಲಿ ದಶಹರಿ, ಕೇಸರ್, ಬೇನಿಶಾನ್ ಮತ್ತು ಮಲ್ಲಿಕಾ ತಳಿ ಪ್ರಮುಖವಾಗಿವೆ. ಹೂವು ಉದುರದೇ ಹೋದಲ್ಲಿ ಜಿಲ್ಲೆಯಲ್ಲಿ 21,510 ಟನ್ ಮಾವು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.
‘ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಒಟ್ಟು 61 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ತಾಲ್ಲೂಕುಗಳಲ್ಲಿ ವಾರ್ಷಿಕ 440 ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತದೆ. ಮಾವಿನ ಮರಗಳು ಹೂ ಬಿಡುತ್ತಿವೆ. ಶೀತದಿಂದ ಸ್ವಲ್ಪ ಮಟ್ಟಿಗೆ ರಸ ಹೀರುವ ಕೀಟ ಹಾಗೂ ಬೂದು ರೋಗದ ಆತಂಕವಿದ್ದರೂ ಮಧ್ಯಾಹ್ನ ಬಿಸಿಲು ಇರುತ್ತಿರುವುದರಿಂದ ಅಂತಹ ಸಮಸ್ಯೆ ಆಗದು’ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟ ಹೇಳುತ್ತಾರೆ.
ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಟ್ಟು 500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹಳ್ಳಿ ಗ್ರಾಮದ ಪಾಟೀಲ ಪರಿವಾರದವರೇ 100ಎಕರೆ, ಮಂಠಾಳದ ಕಲ್ಲಯ್ಯ ಸ್ವಾಮಿ ಕುಟುಂಬದವರು 50 ಎಕರೆ ಹಾಗೂ ಗೋಕುಳದ ದಿಲೀಪ ಗಿರಿ ಅವರು 30 ಎಕರೆಯಲ್ಲಿ ಮಾವಿನ ಗಿಡಗಳನ್ನು ಬೆಳೆದಿದ್ದಾರೆ.
ಕೇಸರ್, ದಶಹರಿ, ಕಲಮಿ, ಹಿಮಾಯತ್, ಮಲ್ಲಿಕಾ, ಬೇನಿಶಾನ್ ಹಾಗೂ ಸ್ಥಳೀಯ ತಳಿಯ ಮಾವುಗಳ ಗಿಡಗಳಿವೆ. ಮುಂಬೈ ಹಾಗೂ ಹೈದರಾಬಾದ್‌ಗೆ ಮಾವು ಕಳಿಸಿಕೊಡಲಾಗುತ್ತದೆ. ಈ ಬಾರಿ ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ತಾಂಡೂರ ತಿಳಿಸುತ್ತಾರೆ.
ಚಿಟಗುಪ್ಪ ತಾಲ್ಲೂಕಿನಲ್ಲಿ 333 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಕೇಸರ್, ದಶಹರಿ, ತೋತಾಪುರಿ, ಮಲ್ಲಿಕಾ ತಳಿಯ ಮಾವಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಚಿಟಗುಪ್ಪದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರಸಿಂಗ್ ಠಾಕೂರ್ ಹೇಳುತ್ತಾರೆ.
‘ನಮ್ಮ ತೋಟದಲ್ಲಿ 569 ಮಾವಿನ ಮರಗಳು ಇವೆ. ಹತ್ತು ವರ್ಷಗಳಿಂದ ಹಣ್ಣು ಕೊಡುತ್ತಿವೆ. ಆಗೊಮ್ಮೆ ಈಗೊಮ್ಮೆ ಹವಾಮಾನದ ವೈಪರೀತ್ಯದಿಂದಾಗಿ ಹಣ್ಣುಗಳು ಹಾಳಾಗುತ್ತವೆ. ಈ ವರ್ಷ ಫಸಲು ಚೆನ್ನಾಗಿದೆ. ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಇದ್ದೇವೆ’ ಎಂದುಚಿಟಗುಪ್ಪ ತಾಲ್ಲೂಕಿನ ಮುತ್ತಂಗಿಯ ರೈತ ಮಲ್ಲಯ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಹುಮನಾಬಾದ್ ತಾಲ್ಲೂಕಿನಲ್ಲಿ 122 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಮಲ್ಲಿಕಾ ಹಾಗೂ ದಶಹರಿ ತಳಿಯ ಮರಗಳು ಟೊಂಗೆ ತುಂಬ ಹೂವು ಬಿಟ್ಟಿವೆ. ಪ್ರಸಕ್ತ ವರ್ಷ ಎಕರೆಗೆ 8 ರಿಂದ 9 ಟನ್ ಮಾವು ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಗ್ರಾಮದ ರೈತ ರಾಜಶೇಖರ ಹೇಳುತ್ತಾರೆ.
ಪ್ರಸ್ತುತ ಹವಾಮಾನ ಚೆನ್ನಾಗಿರುವ ಕಾರಣ ಈಗಿರುವ ಹೂವಿನ ಪ್ರಮಾಣದಷ್ಟೇ ಕಾಯಿ ಬಿಡಲಿದೆ ಎಂದು ತೋಟಗಾರಿಕೆ ತಜ್ಞರು ಅಂದಾಜಿಸಿದ್ದಾರೆ. ಮರಗಳಲ್ಲಿ ಉತ್ತಮ ಕಾಯಿಗಳು ಬಿಡುವಂತಾಗಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ರೈತರ ತೋಟಗಳಿಗೆ ಭೇಟಿ ಕೊಟ್ಟು ಬೆಳೆ ವೀಕ್ಷಣೆ ಮಾಡುತ್ತಿದ್ದಾರೆ. ರೈತರಿಗೆ ಅಗತ್ಯ ಸಲಹೆಗಳನ್ನೂ ಕೊಡುತ್ತಿದ್ದಾರೆ.
ರೈತರು ಕೈಗೊಳ್ಳಬೇಕಿರುವ ಪೂರಕ ಕ್ರಮಗಳು
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ದಿಢೀರ್ ತಾಪಮಾನ ಕುಸಿದಿರುವುದರಿಂದ ಮಾವು ಬೆಳೆಯ ಹೂಗಳು ಶೀತಗಾಯ, ಉಪದ್ರವ ಕೀಟ ಮತ್ತು ರೋಗಗಳಿಂದ ಉದುರುವುದು ಅಲ್ಲಲ್ಲಿ ಕಂಡುಬಂದಿದೆ. ಶೇಕಡ 50ಕ್ಕಿಂತ ಜಾಸ್ತಿ ಹೂ ಬಂದಿರುವ ತೋಟದಲ್ಲಿ ಸೌಮ್ಯವಾಗಿ ನೀರು ಹರಡಿಸುವುದರಿಂದ ಶೀತ ಗಾಯದ ಪರಿಣಾಮ ಕಡಿಮೆಯಾಗಲಿದೆ. ಬಾಕಿ ಇರುವ ಹೂಗಳನ್ನು ಉಳಿಸಬಹುದಾಗಿದೆ.
ಮಾವಿನಲ್ಲಿ ಹೂ ಬಿಡುವ ಪ್ರಕ್ರಿಯೆ ಡಿಸೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರುವರಿ ಎರಡನೇ ವಾರದ ವರೆಗೆ ನಡೆಯುತ್ತದೆ. ಹೂ ಬಿಡುವ ಅವಧಿಯಲ್ಲಿ ಉಪದ್ರವ ಕೀಟಗಳಾದ ಜಿಗಿಹುಳು, ಹೂತೆನೆ/ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಓಟೆ ಕೊರಕ ಹಾಗೂ ರೋಗಗಳಾದ ಹೂ ತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ, ಎಲೆಚುಬ್ಬು ರೋಗಗಳು ಮತ್ತು ಅತಿ ಕಡಿಮೆ ತಾಪಮಾನ ಹೆಚ್ಚಿನ ಹಾನಿ ಉಂಟು ಮಾಡುತ್ತವೆ.
ಕೀಟ ಮತ್ತು ರೋಗಗಳ ಹತೋಟಿಗಾಗಿ ಥೈಯೋಮೆಥೋಕ್ಸಾಮ್ 25% WG-0.25 ಗ್ರಾಂ ಪ್ರತಿ ಲೀಟರಿಗೆ ಮತ್ತು ಡೈಫೆಂಕೊನಜಾಲ್ 25 ಇಅ 1.0 ಮಿ.ಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಿದರೆ ಕೀಟ ಮತ್ತು ರೋಗಗಳು ಹತೋಟಿಗೆ ಬರಲಿವೆ.
ಎಚ್ಚರಿಕೆ ಅಗತ್ಯ
ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಷ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ ಗಂಧಕವು ಪರಾಗ ಸ್ಪರ್ಷ ಕೀಟಗಳಿಗೆ ಹಾನಿ ಉಂಟು ಮಾಡುತ್ತದೆ. ಪರಾಗ ಸ್ಪರ್ಷ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು. ಪರಾಗ ಸ್ಪರ್ಷ ಪೂರ್ಣಗೊಂಡ ನಂತರ ಕಾಯಿಯು ಬಟಾಣೆಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬೇಕು.
ಪೋಟ್ಯಾಸಿಯಂ ನೈಟ್ರೇಟ್ 13-0-45 ನೀರಿನಲ್ಲಿ ಕರಗುವ ಗೊಬ್ಬರವು 20 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಮೊಗ್ಗು ಅರಳಲು ಹಾಗೂ ಏಕರೂಪದ ಹೂ ಬಿಡಲು ಸಹಕಾರಿಯಾಗಲಿದೆ. ಕಾಯಿಗಳು ಉದುರದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆಗೆ ಪೂರಕ NAA (Planofix) 50ppm 0.5 ml /ltr ಸಿಂಪರಿಸಬೇಕು.
ಚಿಕ್ಕ ಕಾಯಿಗಳು ಬೆಳೆಯುವ ಹಂತದಲ್ಲಿ ಬೆಂಗಳೂರಿನ ಐಐಎಚ್‌ಆರ್ ಹೊರ ತಂದಿರುವ ಮ್ಯಾಂಗೊ ಸ್ಪೆಶಲ್ ಅನ್ನು ಪ್ರತಿ 10 ಲೀಟರ್‌ನಲ್ಲಿ 50 ಗ್ರಾಂ ಪ್ರಮಾಣ ಕರಗಿಸಿ ಸೋಪು ದ್ರಾವಣದೊಂದಿಗೆ ಮತ್ತು ಅರ್ಧ ಹೋಳು ಲಿಂಬೆ ರಸ ಬೆರೆಸಿ ಸಿಂಪಡಿಸಿದರೆ ಸೂಕ್ಷ್ಮ ಪೋಷಕಾಂಶ ಕೊರತೆ ನೀಗಿಸಬಹುದು.
ಯಾವುದೇ ಸಿಂಥೈಟಿಕ್ ಪೈರೆಥ್ರಾಯಿಡ್ ಕೀಟ ನಾಶಕಗಳನ್ನು ಬಳಸಬಾರದು. ಕೈಗೆಟಕುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿಸಿದ್ದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದಾಗಿದೆ. ನೇರ ಮಾರುಕಟ್ಟೆ ಸಂಪರ್ಕ ಹೊಂದಿದ ಬೆಳೆಗಾರರಿಗೆ ಇದು ಉತ್ತಮ ಕ್ರಮವಾಗಲಿದೆ. ಎಲ್ಲ ಕಾಯಿಗಳಿಗೆ ಕವರ್ ಅಳವಡಿಕೆ ಮಾಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಉಪ ನಿರ್ದೇಶಕ ವಿಶ್ವನಾಥ ಜಿಳ್ಳೆ ತಿಳಿಸಿದ್ದಾರೆ.
ಸಹಕಾರ:
ಮನ್ಮಥ ಸ್ವಾಮಿ, ಗುಂಡು ಅತಿವಾಳ, ವೀರೇಶ ಚಿಟಗುಪ್ಪ, ಬಸವರಾಜ ಪ್ರಭಾ, ನಾಗೇಶ ಪ್ರಭಾ, ಗಿರಿರಾಜ ವಾಲೆ, ಮಾಣಿಕ ಭೂರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.