ಬೀದರ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಹರ್ ಘರ್ ತಿರಂಗಾ’ ಯಾತ್ರೆಯಿಂದ ನಗರ ಕಳೆಗಟ್ಟಿತು. ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ಅದರ ಸಂಭ್ರಮ ಹೆಚ್ಚಿಸಿತು.
ಸೂರ್ಯೋದಯಕ್ಕೂ ಮುನ್ನ ನೂರಾರು ಜನ ನಗರದ ಬಹಮನಿ ಕೋಟೆಯಲ್ಲಿ ಸೇರಿದ್ದರು. 7 ಗಂಟೆ ಸುಮಾರಿಗೆ ಹರ್ ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು. ಕಾಲೇಜು ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಉಡುಪು ಧರಿಸಿ ಸಾಲುಗಟ್ಟಿ ಹೆಜ್ಜೆ ಹಾಕಿ ಗಮನ ಸೆಳೆದರು. ಇನ್ನೊಂದು ವಿದ್ಯಾರ್ಥಿಗಳ ತಂಡ ವಿಶಾಲವಾದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನಡೆದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಹಿಂದೆ ಬೀಳಲಿಲ್ಲ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಡಿಸಿಎಫ್ ವಾನತಿ ಎಂ.ಎಂ., ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಕೂಡ ಧ್ವಜ ಹಿಡಿದುಕೊಂಡು ಉತ್ಸಾಹದಿಂದ ನಡೆದರು.
ನಗರದ ಬಹಮನಿ ಕೋಟೆಯೊಳಗಿನಿಂದ ಆರಂಭಗೊಂಡ ಯಾತ್ರೆ ಮಹಮೂದ್ ಗಾವಾನ್ ಮದರಸಾ, ಹಳೆ ತರಕಾರಿ ಮಾರುಕಟ್ಟೆ, ಶಹಾಗಂಜ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಹಾದು ನೆಹರೂ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.
ತಿರಂಗಾ ಯಾತ್ರೆಯುದ್ದಕ್ಕೂ ‘ಭಾರತ್ ಮಾತಾ ಕೀ ಜೈ’, ‘ಜೈ ಹಿಂದ್’ ಘೋಷಣೆಗಳು ಮೊಳಗಿದವು. ರಾಷ್ಟ್ರಭಕ್ತಿ ಗೀತೆ ಹಾಡುಗಳನ್ನು ಹಾಕಲಾಗಿತ್ತು. ಯಾತ್ರೆ ಹಾದು ಹೋಗುವ ಮಾರ್ಗದುದ್ದಕ್ಕೂ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು. ಕೆಲವರು ಅಭಿಮಾನದಿಂದ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು. ಮತ್ತೆ ಕೆಲವರು ಹುರಿದುಂಬಿಸಿದರು. ಛಾಯಾಚಿತ್ರಗಳನ್ನು ತೆಗೆದುಕೊಂಡರು.
ಇದಾದ ನಂತರ ತಿರಂಗಾ ಬೈಕ್ ರ್‍ಯಾಲಿ ಹಾಗೂ ತಿರಂಗಾ ಓಟ ನಡೆಯಿತು. ನಗರದ ಸಿದ್ದಾರೂಢ ಮಠದಿಂದ ಜಿಲ್ಲಾ ನೆಹರೂ ಕ್ರೀಡಾಂಗಣದವರೆಗೆ ನಡೆದ ಬೈಕ್ ರ‍್ಯಾಲಿಯಲ್ಲಿ ಹಲವರು ಪಾಲ್ಗೊಂಡಿದ್ದರು. ಡಿಸಿಎಫ್ ವಾನತಿ ಎಂ.ಎಂ. ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕ್ ಓಡಿಸಿ ಗಮನ ಸೆಳೆದರು.
ಇದೇ ಸಮಯಕ್ಕೆ ನಗರದ ಬರೀದ್ ಶಾಹಿ ಉದ್ಯಾನ ವನದಿಂದ ನೆಹರೂ ಕ್ರೀಡಾಂಗಣದವರೆಗೆ ತಿರಂಗಾ ಓಟ ಜರುಗಿತು. ಇದರಲ್ಲಿ ಯುವಕ/ಯುವತಿಯರು, ನಾಗರಿಕರು ಪಾಲ್ಗೊಂಡಿದ್ದರು. ಬೈಕ್ ರ್‍ಯಾಲಿ ಹಾಗೂ ಓಟ ನೆಹರೂ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.
ಇದಕ್ಕೂ ಮುನ್ನ ತಿರಂಗಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಮ್ಮ-ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ದೇಶ ಪ್ರೇಮವನ್ನು ವ್ಯಕ್ತಪಡಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದರು.
ಬೀದರ್ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸುರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ್ ಅರಳಿ, ವಿರೂಪಾಕ್ಷ ಗಾದಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಸೆಲ್ಫಿ ಪಾಯಿಂಟ್
ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಸೆಲ್ಫಿ ಪಾಯಿಂಟ್ ಮತ್ತು ತಿರಂಗಾ ಮೇಳದಲ್ಲಿ ಭಾಗವಹಿಸಿ ಜನ ಸಂಭ್ರಮಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪುಸ್ತಕ ಮಳಿಗೆ ಸಂಜೀವಿನಿ ಜೀವನೋಪಾಯ ಯೋಜನೆ ಅಡಿ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳ ಮಳಿಗೆ ಆಣದೂರು ಹಾಗೂ ಕಮಠಾಣ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರು ತಯಾರಿಸಿದ ಬೆಲ್ಲದ ಚಕ್ಕಿ ಖಾರ ಹಾಗೂ ಸಮೋಸಾ ಮಳಿಗೆಗಳನ್ನು ತೆರೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.