ಬುಧವಾರ, ಸೆಪ್ಟೆಂಬರ್ 22, 2021
21 °C
ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ, ನೆಲಕಚ್ಚಿದ ವ್ಯಾಪಾರ

ಖಟಕಚಿಂಚೋಳಿ: ಮೂರ್ತಿ ತಯಾರಕರ ಸಂಕಷ್ಟ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಬ್ಯಾಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಲ್ಲಿನ ಮೂರ್ತಿ ತಯಾರಕರಾದ ಕಲ್ಲವಡ್ಡರರು ಕೋವಿಡ್ ಹರಡುವಿಕೆಯಿಂದ ವ್ಯಾಪಾರವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲ್ಲಿನ ಮೂರ್ತಿಗಳ ತಯಾರಕರಾದ ಕಲ್ಲವಡ್ಡರರು ತಮ್ಮ ನೈಪುಣ್ಯತೆಯನ್ನು ಬಳಸಿ ಸಾರ್ವಜನಿಕರ ಮನದಲ್ಲಿ ಶ್ರದ್ಧಾ, ಮನೋಭಾವ ಹುಟ್ಟುವಂತೆ ಮಾಡುವ ಕಲೆಗಾರರು. ಪ್ರತಿ ವರ್ಷ ಶ್ರಾವಣದಲ್ಲಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿರುತ್ತಿತ್ತು. ಆದರೆ ಕೋವಿಡ್ ಹರಡುವಿಕೆಯಿಂದ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವುದರಿಂದ ಮೂರ್ತಿಗಳ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ಜೀವನದ ನಿರ್ವಹಣೆಗೆ ಪರದಾಡುವಂತಾಗಿದೆ.

ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಕಲ್ಲವಡ್ಡರರು ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಿಂದ ಕಲ್ಲುಗಳನ್ನು ತಂದು ಅಂದ ಚೆಂದದ ವಿವಿಧ ಬಗೆಯ ಮೂರ್ತಿಗಳು ಸೇರಿದಂತೆ ಉತ್ತಮ ಗೃಹ ಬಳಕೆ ವಸ್ತುಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಪುರುಷರು ಕಲ್ಲು ಕೆತ್ತಿ ಬೀಸುವಕಲ್ಲು, ಒಳಕಲ್ಲು ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು. ನಾವು ವಿವಿಧ ಗ್ರಾಮಗಳಿಗೆ ಸುತ್ತಾಡಿ ಮಾರಾಟ ಮಾಡುತ್ತೇವೆ. ಆದರೆ ಸದ್ಯ ಎಲ್ಲವೂ ಯಾಂತ್ರಿಕವಾಗಿರುವುದರಿಂದ ಇವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೊರೊನಾದಿಂದ ಗ್ರಾಮೀಣ ಪ್ರದೇಶದಲ್ಲಿ ಕಲ್ಲುಗಳ ಮಾರಾಟ ಆಗುತ್ತಿಲ್ಲ. ಹೀಗಾಗಿ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಚಂದ್ರಮ್ಮ ವಡ್ಡರ್ ತಮ್ಮ ಅಳಲನ್ನು ತೋಡಿಕೊಂಡರು.

ಹಿಂದೆ ಮೂರ್ತಿಗಳ ಬೇಡಿಕೆಯು ಹೆಚ್ಚಾಗಿತ್ತು. ಹೀಗಾಗಿ ಪ್ರತಿ ತಿಂಗಳು ಖರ್ಚು ವೆಚ್ಚ ಹೋಗಿ ₹25 ರಿಂದ ₹30 ಸಾವಿರ ಲಾಭ ಆಗುತ್ತಿತ್ತು. ಸದ್ಯ ಕೊರೊನಾದ ಕರಿ ನೆರಳಿಗೆ ಸಿಲುಕಿ ಕಳೆದ ನಾಲ್ಕು ತಿಂಗಳಿಂದ ಯಾವುದೇ ಒಂದು ಮೂರ್ತಿಯೂ ಸಹ ಮಾರಾಟವಾಗಿಲ್ಲ. ಇದರಿಂದ ಬದುಕು ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಸಾಲ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ ಎಂದು ಶಂಕರ ವಡ್ಡರ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು.

ಗುಡಿಸಲಿನಲ್ಲಿ ಸುಮಾರು ವರ್ಷಗಳಿಂದ ವಾಸವಾಗಿರುವ ಗಂಗಾರಾಮ್ ಕಲ್ಲವಡ್ಡರ ಅವರ ಕುಟುಂಬ ಕೊರೊನಾಕ್ಕೆ ಸಿಲುಕಿಕೊಂಡು ಅತಂತ್ರವಾಗಿದೆ. ನಿತ್ಯ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಒಳಕಲ್ಲು, ಕಾರುಕಲ್ಲು, ಬೀಸುಕಲ್ಲುಗಳು ಸೇರಿದಂತೆ ಕಲ್ಲಿನ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ಆದರೆ ಈ ಉದ್ಯೋಗ ಬಿಟ್ಟು ಇವರಿಗೆ ಬೇರಾವುದೇ ಉದ್ಯೋಗ ಗೊತ್ತಿಲ್ಲ. ಹೀಗಾಗಿ ಅವರ ನೆಮ್ಮದಿಯ ಜೀವನಕ್ಕೆ ಕುತ್ತು ಬಂದಿದೆ ಎನ್ನುತ್ತಾರೆ ಶಿವಪುತ್ರ ಸ್ವಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.