ಶನಿವಾರ, ಆಗಸ್ಟ್ 13, 2022
24 °C
ಧಾರಾಕಾರ ಮಳೆಗೆ ನೆಲಕ್ಕುರುಳಿದ 200 ವಿದ್ಯುತ್ ಕಂಬಗಳು

ಭಾಲ್ಕಿ: ಜೀವ ರಕ್ಷಣೆಗೆ 5 ಗಂಟೆ ಮನೆ ಮೇಲೆ ಕುಳಿತ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಮಳೆ ನೀರಿನಿಂದ ಮನೆ ಜಲಾವೃತಗೊಂಡಾಗ ಜೀವ ರಕ್ಷಿಸಿಕೊಳ್ಳಲು ರಾಚಪ್ಪಾ ಗೌಡಗಾಂವ ಗ್ರಾಮದ ಇಬ್ಬರು ಮಹಿಳೆಯರು 5 ಗಂಟೆಗಳ ಕಾಲ ಮನೆಯ ಮೇಲ್ಛಾವಣಿ ಮೇಲೆ ಕುಳಿತಿದ್ದರು.

ಗುರಮ್ಮಾ ಪಾರಣ್ಣ ಅವರ ಮನೆ ಹೊಲದಲ್ಲಿದೆ. ಹೊಲದ ಪಕ್ಕದ ಹಳ್ಳಕ್ಕೆ ಹೆಚ್ಚಿನ ನೀರು ಬಂದು ನಿಧಾನವಾಗಿ ಮನೆಯನ್ನು ಆವರಿಸಿಕೊಂಡಿದೆ. ಜೀವ ಉಳಿಸಿಕೊಳ್ಳಬೇಕು ಎಂದು ತಾಯಿ, ಮಗಳು ಮನೆಯ ಚಾವಣಿ ಮೇಲೆ ಹತ್ತಿ ಕುಳಿತಿದ್ದರು. ಗ್ರಾಮಸ್ಥರಿಗೆ ಬೆಳಿಗ್ಗೆಯೇ ಈ ವಿಷಯ ಗೊತ್ತಾದರೂ ಹೊಲದ ತುಂಬೆಲ್ಲಾ ನೀರು ಇದ್ದಿದ್ದರಿಂದ ಅಸಹಾಯಕರಾಗಿದ್ದರು. ಹಳ್ಳದ ನೀರಿನ ಪ್ರಮಾಣ ಇಳಿಮುಖವಾದ ನಂತರ ಸಾರ್ವಜನಿಕರು, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸಿ ಗ್ರಾಮಕ್ಕೆ ಕರೆ ತಂದರು.

ತಾಲ್ಲೂಕಿನ ಎಲ್ಲೆಡೆ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ, ಕೆರೆಗಳು ಭರ್ತಿಯಾಗಿವೆ. ಬುಧವಾರ ಸಂಜೆ ಸುರಿದ ಗುಡುಗು ಸಹಿತ ಮಳೆಗೆ ತಾಲ್ಲೂಕಿನ ಹಾಲಹಳ್ಳಿ, ಹಲಬರ್ಗಾ, ನಿಟ್ಟೂರ ಹೋಬಳಿ ಸೇರಿದಂತೆ ವಿವಿಧ ಹಳ್ಳಿಗಳ 20 ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿವೆ. ಸುಮಾರು 200 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಾಲ್ಲೂಕಿನ ಹಲಬರ್ಗಾ, ನಿಟ್ಟೂರ, ಭಾತಂಬ್ರಾ, ಲಖನಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಹಲಬರ್ಗಾ ಗ್ರಾಮದಲ್ಲಿ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿತ್ತು. ಜನರು ಕುಡಿಯುವ ನೀರು, ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳಲು ಪರಿತಪಿಸಿದರು.

‘ಜೆಸ್ಕಾಂಗೆ ಕನಿಷ್ಠ ₹13 ಲಕ್ಷ ನಷ್ಟ ಆಗಿದೆ’ ಎಂದು ಎಇಇ ಪಿ.ಗೋಖಲೆ ತಿಳಿಸಿದರು.

ಹಾಳಗೋರ್ಟಾದಲ್ಲಿ ಕೆರೆಯ ನೀರು ಹರಿದು ಬಂದಿದ್ದರಿಂದ ಆರು ಮನೆಗಳು, ಮೆಹಕರ, ಹಲಸಿ ತುಗಾಂವ, ಮೋರಂಬಿ, ಉಚ್ಚಾ ಗ್ರಾಮದಲ್ಲಿಯೂ ಮನೆಗಳು ಕುಸಿದಿದ್ದು, ಬಡ ಜನರ ಬದುಕು ದುಸ್ತರವಾಗಿದೆ. ಇಂಚೂರ, ದಾಡಗಿ, ಆನಂದ ವಾಡಿ ಸೇತುವೆ ಮೇಲಿನಿಂದ ನೀರು ಹರಿದ ಪರಿಣಾಮ ಸುಮಾರು 5 ಗಂಟೆ ರಸ್ತೆ ಸಂಚಾರ ಬಂದಾಗಿತ್ತು. ಭಾಲ್ಕಿ, ಹುಪಳಾ, ಅಂಬೇಸಾಂಗವಿ ಸೇರಿದಂತೆ ಎಲ್ಲ ಸಣ್ಣ ನೀರಾವರಿ ಇಲಾಖೆಯ ಕೆರೆಗಳು ತುಂಬಿವೆ. ಹೆಚ್ಚುವರಿ ನೀರು ಹರಿದು ಹೋಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು