ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ಬೀದರ್ ಜಿ.ಪಂ. ಅವಿಶ್ವಾಸ ನಿರ್ಣಯದ ವರದಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉ‍ಪಾಧ್ಯಕ್ಷರ ವಿರುದ್ಧ ಅವಿಶ್ವಾಸ
Last Updated 23 ಅಕ್ಟೋಬರ್ 2020, 14:25 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉ‍ಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಪ್ರಾದೇಶಿಕ ಆಯುಕ್ತ ಎನ್‌.ವಿ. ಗುರುಪ್ರಸಾದ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ಕರೆದಿದ್ದ ಸಭೆಯಲ್ಲಿ ಸದಸ್ಯರು ಮತದಾನ ಮಾಡಿದರು.

ಹೈಕೋರ್ಟ್‌ ನಿರ್ದೇಶನದಂತೆ ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಹೈಕೋರ್ಟ್‌ ನಿರ್ಣಯ ಬಹಿರಂಗ ಪಡಿಸಲಿದೆ ಎಂದು ಚುನಾವಣಾ ಅಧಿಕಾರಿ ಹೇಳಿದರು.

ಗೋಪ್ಯ ಮತದಾನ ನಡೆದ ಕಾರಣ ಯಾವ ಸದಸ್ಯರು ಯಾರ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎನ್ನುವುದು ಹೊರಗಿನವರಿಗೆ ಗೊತ್ತಾಗಲಿಲ್ಲ. ಆದರೆ, ಸಭೆಯಿಂದ ಹೊರಗೆ ಬಂದ ಸದಸ್ಯರು ಹಾಲಿ ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಒಮ್ಮತದಿಂದ ಮತ ಚಲಾಯಿಸಿದ್ದೇವೆ ಎಂದು ತಿಳಿಸಿದರು.

‘ಕಳೆದ ವರ್ಷದ ಅನುದಾನ ವಿನಿಯೋಗಿಸಲು ಅಧ್ಯಕ್ಷೆ ಗೀತಾ ಚಿದ್ರಿ ಹಿಂದೇಟು ಹಾಕುತ್ತಿದ್ದರು. ಅಗೌರವ ತೋರುತ್ತಿದ್ದರಿಂದ ಸದಸ್ಯರು ರೋಸಿ ಹೋಗಿದ್ದರು. ಹೀಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಸೇರಿ ಒಟ್ಟು 24 ಸದಸ್ಯರು ಪಕ್ಷ ಬೇಧ ಮರೆತು ಅವಿಶ್ವಾಸ ಮಂಡನೆ ಮಾಡಿದ್ದೇವೆ’ ಎಂದು ಕಾಂಗ್ರೆಸ್‌ನ ವಿಜಯಕುಮಾರ ಪಾಟೀಲ ಗಾದಗಿ ಹಾಗೂ ಭಾರತಬಾಯಿ ಶೇರಿಕಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ವಿಜಯಪುರದಿಂದ ಬಂದ ಸದಸ್ಯರು: ಹಾಲಿ ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸಾಬೀತು ಪಡಿಸಲು ಎರಡು ದಿನಗಳ ಹಿಂದೆ ವಿಜಯಪುರಕ್ಕೆ ತೆರಳಿದ್ದ 24 ಸದಸ್ಯರು ಖಾಸಗಿ ಬಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದರು. ಕಾಂಗ್ರೆಸ್‌ ಬಂಡಾಯ ಸದಸ್ಯರೇ ನಿಯೋಗದ ನೇತೃತ್ವ ವಹಿಸಿದ್ದರು.

ಅವಿಶ್ವಾಸ ಗೊತ್ತುವಳಿ ಪ್ರಯುಕ್ತ ಜಿಲ್ಲಾ ಪಂಚಾಯಿತಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.

ಅಧಿಕಾರದ ಗದ್ದುಗೆಗೆ ಹಗ್ಗ ಜಗ್ಗಾಟ:ಜಿಲ್ಲಾ ಪಂಚಾಯಿತಿ ಗದ್ದುಗೆಗಾಗಿ ನಿರಂತರವಾಗಿ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಪ್ರಾರಂಭದಲ್ಲಿ ಭಾರತಬಾಯಿ ಶೇರಿಕಾರ ಹಾಗೂ ಗೀತಾ ಚಿದ್ರಿ ನಡುವೆ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ವರಿಷ್ಠರು ಇಬ್ಬರ ಮಧ್ಯೆ ಸಂಧಾನ ನಡೆಸಿ ಎರಡೂ ವರ್ಷ ಅವಧಿಗೆ ಒಬ್ಬರಂತೆ ಇಬ್ಬರನ್ನೂ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ಕೊಟ್ಟು ಮೊದಲ ಅವಧಿಗೆ ಭಾರತಬಾಯಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು.

ಅವಧಿ ಮುಗಿದ ಮೇಲೆ ಅಧ್ಯಕ್ಷೆ ಭಾರತಬಾಯಿ ಹಾಗೂ ಉಪಾಧ್ಯಕ್ಷ ಪ್ರಕಾಶ ಪಾಟೀಲ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ್ದರು. ಅತೃಪ್ತ ಸದಸ್ಯರ ಮನವಿ ಮೇರೆಗೆ ಅವರಿಗೆ ವಿಶ್ವಾಸ ಸಾಬೀತು ಪಡಿಸಲು ಸೂಚಿಸಲಾಗಿತ್ತು. ಭಾರತಬಾಯಿ ಬಹುಮತ ಸಾಬೀತು ಪಡಿಸಲು ವಿಫಲವಾಗಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಾರತಬಾಯಿ, ಪ್ರಕಾಶ ಪಾಟೀಲ ಹಾಗೂ ಪ್ರಿಯಾ ಠಾಕೂರ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ನಂತರ ಗೀತಾ ಚಿದ್ರಿ ಅವರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಗೀತಾ ಚಿದ್ರಿ ಅಭಿವೃದ್ಧಿ ವಿಷಯದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಕೆಲವು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಎಂದು ಕೆಲವು ಸದಸ್ಯರು ಆರೋಪಿಸಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಅವಕಾಶ ಕಲ್ಪಿಸಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ಸದಸ್ಯರು ಈ ಒಡಕನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಸದಸ್ಯರಾದ ವಿಜಯಕುಮಾರ ಪಾಟೀಲ ಗಾದಗಿ ಹಾಗೂ ಅಫ್ರೋಜ್‌ ಖಾನ್‌ ಅವರನ್ನು ಈಗಾಗಲೇ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ. ‌

ಕುಸಿದ ಕಾಂಗ್ರೆಸ್‌ ಬಲ:ಬೀದರ್ ಜಿಲ್ಲಾ ಪಂಚಾಯಿತಿ 34 ಸಂಖ್ಯಾ ಬಲ ಹೊಂದಿದೆ. ಸಂತಪುರ ಕ್ಷೇತ್ರದ ಸದಸ್ಯ ಅನಿಲ ಗುಂಡಪ್ಪ ಅವರು ಈಚೆಗೆ ನಿಧನರಾದ ಕಾರಣ ಈ ಸಂಖ್ಯೆ 33ಕ್ಕೆ ಇಳಿದಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 19 ಇದ್ದರೂ ಒಂದೂವರೆ ವರ್ಷದ ಹಿಂದೆ ಮೂವರನ್ನು ಪಕ್ಷದಿಂದ ಉಚ್ಚಾಟಿಸಿದರೆ, ಎರಡು ದಿನಗಳ ಹಿಂದೆ ಇಬ್ಬರನ್ನು ಪಕ್ಷದಿಂದ ಹೊರಗೆ ಹಾಕಲಾಗಿದೆ. ಹೀಗಾಗಿ ಕಾಂಗ್ರೆಸ್‌ ಬಲ 14ಕ್ಕೆ ಕುಸಿದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಬಂಡಾಯ ಶಮನ ಮಾಡಲು ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆ ಕರೆದಿದ್ದರು. ಏಳು ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ. ಇದು ವರಿಷ್ಠರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

ಬಹುಮತ ಸಾಬೀತು ಪಡಿಸಲು 17 ಸದಸ್ಯರ ಬೆಂಬಲ ಬೇಕು. ಬಿಜೆಪಿಯ 11 ಹಾಗೂ ಜೆಡಿಎಸ್‌ನ ಮೂವರು ಸದಸ್ಯರು ಗೀತಾ ಚಿದ್ರಿ ವಿರುದ್ಧ ಬಂಡಾಯ ಎದ್ದಿರುವ ಸದಸ್ಯರ ಬೆಂಬಲಕ್ಕೆ ನಿಂತಿದ್ದಾರೆ. ಅಧ್ಯಕ್ಷ–ಉ‍ಪಾಧ್ಯಕ್ಷ ಅವಧಿ ಐದು ತಿಂಗಳು ಮಾತ್ರ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT