ಗುರುವಾರ , ಮಾರ್ಚ್ 23, 2023
30 °C
ಪ್ರತಿ ವರ್ಷ ಹಾನಿ ಸಂಭವಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ

ಮಳೆ ನೀರಿಗೆ ಮನೆ ಜಲಾವೃತ ಭಯ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಮಳೆ ನೀರಿನಿಂದ ನಗರದಲ್ಲಿ ಪ್ರತಿ ವರ್ಷ ಹಾನಿ ಸಂಭವಿಸುತ್ತಿದ್ದರೂ ನಗರಸಭೆಯವರು ಎಚ್ಚೆತ್ತುಕೊಳ್ಳುತ್ತಿಲ್ಲ. ನೀರು ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸದ ಕಾರಣ ಕೆಲ ಓಣಿಗಳ ಮನೆಗಳು ಜಲಾವೃತ್ತಗೊಳ್ಳುವ ಭಯ ಕಾಡುತ್ತಿದೆ.

ಜನಸಂಖ್ಯೆ ಲಕ್ಷಕ್ಕೂ ಮೀರುತ್ತಿರುವ ಕಾರಣ ನಗರ ಪ್ರದೇಶ ವಿಸ್ತಾರಗೊಳ್ಳುತ್ತಿದೆ. ಈ ಬೆಳವಣಿಗೆಗೆ ಅನುಗುಣವಾಗಿ ಚರಂಡಿ ವ್ಯವಸ್ಥೆ ಇಲ್ಲ. ಅಸಲಿಗೆ ನಗರಸಭೆ ಆಸ್ತಿತ್ವಕ್ಕೆ ಬಂದ ನಂತರ ಚರಂಡಿ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಬಂದಿದೆ. ಆದರೂ, ಜನಪ್ರತಿನಿಧಿಗಳ ಉದಾಸೀನತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೂ ನಿಯಮಬದ್ಧವಾಗಿ ನಡೆದಿಲ್ಲ. ಚರಂಡಿ ಕೆಲಸ ಅನೇಕ ಕಡೆ ಅಪೂರ್ಣವಾಗಿ ಉಳಿದಿರುವ ಕಾರಣ ರಸ್ತೆ ಹಾಗೂ ಓಣಿಯ ನೀರು ದೂರಕ್ಕೆ ಸಾಗದೆ ನಿಂತಲ್ಲೆ ನಿಂತು ಹೊಂಡ ನಿರ್ಮಾಣ ಆಗುತ್ತಿವೆ ಎಂಬುದು ನಿವಾಸಿಗಳ ಆರೋಪ.

ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಓಣಿಗಳಿಗೆ ಹೆಚ್ಚಿನ ಹಾನಿ ಸಂಭವಿಸುತ್ತಿದೆ. ಮನೆಗಳಿಗೆ ನೀರು ನುಗ್ಗುವ ಕಾರಣ ಸಾಮಗ್ರಿ, ಬಟ್ಟೆಗಳು ಹಾಳಾಗುತ್ತಿವೆ. ಇಳಿಜಾರು ಪ್ರದೇಶದಲ್ಲಿರುವ ಮುಖ್ಯ ಬಸ್ ನಿಲ್ದಾಣದ ಸುತ್ತಲಿನ ಓಣಿಗಳು ಮತ್ತು ನಾರಾಯಣಪುರ ಕ್ರಾಸ್ ಹತ್ತಿರದ ಓಣಿಗಳಲ್ಲಿ ಹಾಗೂ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಜನರ ಓಡಾಟಕ್ಕೆ ತೊಂದರೆ ಆಗುತ್ತದೆ. ಇಲ್ಲಿನ ಜ್ಞಾನಪ್ರಿಯ ಶಾಲೆಯ ಮಕ್ಕಳು ಕೆಲಸಲ ನಾಲೆಗಳ ನೀರು ಕಡಿಮೆ ಆಗುವತನಕ ಗಂಟೆಗಟ್ಟಲೇ ಕಾಯಬೇಕಾಗುತ್ತಿದೆ. ಪಾರಧಿ ಓಣಿ, ಕೈಕಾಡಿ ಓಣಿ, ಮಾಂಗಗಾರುಡಿ ಓಣಿ, ಮುಖ್ಯ ರಸ್ತೆ ಪಕ್ಕದ ತೆಲಂಗ್‌ ಗಲ್ಲಿಯಲ್ಲಿ ಮಳೆ ನೀರು ವಾರಗಟ್ಟಲೇ ಸಂಗ್ರಹಗೊಂಡು ಪಾಚಿಗಟ್ಟಿದಂತಾಗಿ ದುರ್ನಾತ ಬರುತ್ತದೆ. ಸೊಳ್ಳೆ, ನೊಣಗಳು ಗುಂಯ್ಯಗುಡುತ್ತವೆ.

ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತ, ಅಲ್ಲಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಹಾಗೂ ಮುಖ್ಯ ಬಸ್ ನಿಲ್ದಾಣದವರೆಗಿನ ಚರಂಡಿಗಳು ಅಪೂರ್ಣವಾಗಿದ್ದು ತಾಂತ್ರಿಕ ದೋಷದಿಂದ ಕೂಡಿವೆ. ಕೆಲವೆಡೆ ಒಳಗಡೆ ಮಣ್ಣು, ಕಲ್ಲು ಬಿದ್ದಿದ್ದರಿಂದ ಮುಚ್ಚಿವೆ. ಬಿಇಒ ಕಚೇರಿ ಎದುರಲ್ಲಿ, ಗುರುಭವನ, ಚಿವಡೆ ಕಾಂಪ್ಲೆಕ್ಸ್ ಎದುರಲ್ಲಿ, ತಾಲ್ಲೂಕು ಪಂಚಾಯಿತಿ ಕಚೇರಿ ಹಾಗೂ ತಹಶೀಲ್ದಾರ್ ಹಳೆಯ ಕಚೇರಿ ಎದುರಲ್ಲಿ ಮತ್ತು ಶಿವಾಜಿ ಪಾರ್ಕ್ ಹತ್ತಿರದಲ್ಲಿನ ಚರಂಡಿಗಳ ನೀರಿಗೆ ಮುಂದಕ್ಕೆ ಸಾಗುವ ವ್ಯವಸ್ಥೆಯೇ ಇಲ್ಲ. ಹೀಗಾಗಿ ಮಳೆ ಬಂದಾಗ ಇಲ್ಲಿನ ರಸ್ತೆ ನೀರಲ್ಲಿ ಮುಳುಗುತ್ತದೆ. ಅಂಗಡಿಗಳಲ್ಲಿ ನೀರು ನುಗ್ಗುತ್ತದೆ.

ಆದರೂ, ಸಂಬಂಧಿತರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಎದುರಲ್ಲಿ ತಡೆಗೋಡೆಯಂತೆ ಕಟ್ಟೆ ಕಟ್ಟಿರುವುದು ಇಲ್ಲಿ ಕಾಣಬಹುದು. ಶಾಸಕ ಶರಣು ಸಲಗರ ಉಪ ಚುನಾವಣೆಯಲ್ಲಿ ಗೆದ್ದ ಮರುದಿನವೇ ಚರಂಡಿ ಸ್ವಚ್ಛತೆಗೆ ಸೂಚಿಸಿ ದ್ದಾರೆ. ಅಲ್ಲದೆ, ಒಂದು ತಿಂಗಳಿಂದ ಸ್ವತಃ ಬೆಳಿಗ್ಗೆ ಹೊತ್ತು ಸುತ್ತಾಡಿ ಪರಿಶೀಲಿಸುತ್ತಿದ್ದಾರೆ. ಈ ಕಾರಣ ಪರಿಸ್ಥಿತಿ ಕೆಲಮಟ್ಟಿಗೆ ಸುಧಾರಿಸಿದೆ.

‘ನಗರಸಭೆಯವರು ಕೆಲಸವನ್ನು ಯೋಜನಾಬದ್ಧವಾಗಿ ಹಾಗೂ ಪರಿಪೂರ್ಣವಾಗಿ ನಡೆಸಿಲ್ಲ. ಮುಖ್ಯರಸ್ತೆ ಪಕ್ಕದ ಚರಂಡಿಯನ್ನು ಕೆಲ ಸ್ಥಳದಲ್ಲಿ ಸ್ವಚ್ಛಗೊಳಿಸಿದ್ದರೂ ನೀರು ಮುಂದಕ್ಕೆ ಸಾಗಲು ದಾರಿ ಮಾಡಿಕೊಡಲಾಗಿಲ್ಲ’ ಎಂದು ವ್ಯಾಪಾರಸ್ಥ ಶಿವಶಂಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಧರ್ಮಪ್ರಕಾಶ ಓಣಿಯ ಜಿಕ್ರಾ ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹಗೊಳ್ಳದಂತೆ ಉತ್ತಮ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಧನರಾಜ ರಾಜೋಳೆ ಆಗ್ರಹಿಸಿದ್ದಾರೆ.

‘ಹರಳಯ್ಯ ವೃತ್ತದಿಂದ ಸಂಗಮೇಶ್ವರ ಕಾಲೊನಿಗೆ ಹೋಗುವ ರಸ್ತೆ ಪಕ್ಕದ ಚರಂಡಿ ಯಾವಾಗಲೂ ತುಂಬಿಕೊಂಡೇ ಇರುತ್ತದೆ. ಆದ್ದರಿಂದ ಈ ಭಾಗದಲ್ಲೂ ಸ್ವಚ್ಛತೆ ಕೈಗೊಳ್ಳಬೇಕು' ಎಂದು ಅಮೂಲ್ ಆರ್ಯ ಒತ್ತಾಯಿಸಿದ್ದಾರೆ.

‘ಚರಂಡಿ ಸುಧಾರಣೆಗೆ ಉತ್ತಮ ಯೋಜನೆ ಸಿದ್ಧಪಡಿಸಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಗುವುದು’ ಎಂದು ಪೌರಾಯುಕ್ತ ಶಿವಕುಮಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.