ಹುಲಸೂರ: ತಾಲ್ಲೂಕಿನಲ್ಲಿ ಗಡಿಭಾಗದಲ್ಲಿ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಬೇಕಾದ ಗಡಿ ಪ್ರಾಧಿಕಾರ ನಿರ್ಲಕ್ಷ್ಯ ಸಂಘ–ಸಂಸ್ಥೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಗಡಿನಾಡು ಕನ್ನಡ ಶಾಲೆ ಆರಂಭಗೊಂಡು ವರ್ಷಗಳೇ ಕಳೆದರೂ ಬಹುತೇಕ ಶಾಲೆಗಳಲ್ಲಿ ಕನ್ನಡ ಭಾಷೆ ಶಿಕ್ಷಕರ ಕೊರತೆ ಇದೆ. ಕರ್ನಾಟಕದ ಗಡಿ ಭಾಗದ 850ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ದಾಖಲೆ ಸಂಗ್ರಹಿಸುತ್ತಿದೆ. ಈ ನಡುವೆ ತಾಲ್ಲೂಕಿನ ಸಾವಿರಕ್ಕೂ ಹೆಚ್ಚು ಕನ್ನಡದ ಮಕ್ಕಳು ಅನಿವಾರ್ಯವಾಗಿ ಮರಾಠಿ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
ಪೋಷಕರ ಇಂಗ್ಲಿಷ ವ್ಯಾಮೋಹ, ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಗಡಿಭಾಗದಲ್ಲಿ ಮರಾಠಿ ಹಾಗೂ ಆಂಗ್ಲ ಭಾಷೆಯ ಖಾಸಗಿ ಶಾಲೆಗಳು ಹಾವಳಿ ಹೆಚ್ಚುತ್ತಿದೆ. ಇದೇ ಮುಂದುವರಿದರೆ ಗಡಿಯಲ್ಲಿ ಮಕ್ಕಳು ಕೂಡ ಕನ್ನಡ ತೊರೆದು ಅನ್ಯ ಭಾಷೆಗಳನ್ನು ಅಧ್ಯಯನ ಮಾಡುವ ಸನ್ನಿವೇಶ ನಿರ್ಮಾಣವಾಗಲಿದೆ.
ಗಡಿ ಭಾಗಕ್ಕೆ ಅಂಟಿಕೊಂಡಿರುವ ಕೋಟಮಾಳ, ಎಲ್ಲಮವಾಡಿ, ಹನುಮಂತವಾಡಿ, ಹರೆವಾಡಿ, ಕಾದೆಪೂರ, ದೇವನಾಳ, ಮಾಚನಾಳ, ಕೊಂಗಳಿ, ಸೋಲದಾಪಕ, ಹಲಸಿ ತುಗಾಂವ, ಶ್ರಿಮಾಳಿ, ಅಳವಾಯಿಗಳಲ್ಲಿ ಇಂದಿಗೂ ಕನ್ನಡ ಭಾಷೆ ಮತ್ತು ಶಿಕ್ಷಣದ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಕಂಡು ಬರುತ್ತಿಲ್ಲ.
‘ಗಡಿನಾಡಿನ ಕನ್ನಡ ಮಾಧ್ಯಮದ ಮಕ್ಕಳಿಗೆ ವಸತಿ ನಿಲಯಗಳು, ಶಿಕ್ಷಕರ ತರಬೇತಿ ಕಾಲೇಜು ಆರಂಭಿಸಬೇಕಾಗಿದೆ. ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿವಿಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳನ್ನು ಗಡಿಭಾಗದಲ್ಲಿ ಮೇಲಿಂದ ಮೇಲೆ ನಡೆಸಬೇಕು. ಆಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಮುಂದಿನ ಪೀಳಿಗೆಗೂ ದಕ್ಕಲಿದೆ’ ಎನ್ನುತ್ತಾರೆ ಸಾಹಿತಿ ಭೀಮಾಶಂಕರ ಬಿರಾದಾರ .
ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ: ತಾಲ್ಲೂಕಿನ ಬಹುತೇಕ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆಯೇ ಕಷ್ಟವಾಗಿದೆ. ಜನರು ನೆರೆಯ ಮಹಾರಾಷ್ಟ್ರದೊಂದಿಗೆ ಹೆಚ್ಚಿನ ಸಂಬಂಧ ಬೆಳೆಸಿಕೊಂಡಿರುವುದು ಮತ್ತು ಮನೆಯಲ್ಲಿ ಪಾಲಕರು ನಿತ್ಯ ಮರಾಠಿ ಭಾಷೆಯಲ್ಲಿ ಸಂವಹನ ನಡೆಸುವುದರಿಂದ ಮಕ್ಕಳು ಶಾಲೆಯಲ್ಲಿ ಕನ್ನಡ ಅರ್ಥೈಸಿಕೊಳ್ಳಲು ಪರದಾಡುವಂತಾಗಿದೆ.
ತಾಲ್ಲೂಕಿಗೆ ಮಹಾರಾಷ್ಟ್ರ ಗಡಿ ಕೇವಲ 4 ಕಿ.ಮೀ ಅಂತರದಲ್ಲಿದ್ದು ತಾಲ್ಲೂಕಿನಾದ್ಯಂತ ಕನ್ನಡಕ್ಕಿಂತ ಮರಾಠಿ ಪ್ರಭಾವವೇ ಹೆಚ್ಚಾಗಿದೆ. ಈ ಭಾಗದ ಕೆಲವು ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಇಂದಿಗೂ ಮಕ್ಕಳಿಗೆ ಕನ್ನಡದಲ್ಲಿ ಹೇಳಿದ ಪಾಠವನ್ನು ಮರಾಠಿ ಭಾಷೆಗೆ ಅನುವಾದ ಮಾಡಿ ಹೇಳಬೇಕಾದ ಸ್ಥಿತಿಯಿದೆ.
ಗಡಿ ಪ್ರಾಧಿಕಾರ ಎಲ್ಲಿ?: ಗಡಿಭಾಗದ ಹಳ್ಳಿಗಳ, ಶಾಲೆಗಳ ಅಭಿವೃದ್ಧಿಗಾಗಿ ಸರಕಾರ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಅದಕ್ಕೆ ಅಧ್ಯಕ್ಷರು, ಕೆಲ ಸಿಬ್ಬಂದಿ ಕೂಡ ಇದ್ದಾರೆ. ಆದರೆ ಅದಕ್ಕೆ ಇಂತಹ ಹಳ್ಳಿಗಳ ಹಾಗೂ ಶಾಲೆಗಳ ಸ್ಥಿತಿಗತಿ ಕಾಣುತ್ತಿಲ್ಲ ಎಂಬ ಆರೋಪವಿದೆ. ಗಡಿಭಾಗದ ಶಾಲೆಗಳಲ್ಲಿ ಇಷ್ಟೇಲ್ಲ ನಡೆಯುತ್ತಿದ್ದರೂಅದಕ್ಕೂ ನನಗೂ ಏನು ಸಂಬಂಧವೇ ಇಲ್ಲ ಅನ್ನುವಂತೆ ಗಡಿ ಅಭಿವೃದ್ಧಿ ಪ್ರಾಧಿಕಾರ ನಡೆದುಕೊಳ್ಳುತ್ತಿದೆ. ಅದ್ಯಾಕೆ ಪ್ರಾಧಿಕಾರ ಇಂತಹ ಶಾಲೆಗಳ ಸುಧಾರಣೆಗೆ ಮುಂದಾಗುತ್ತಿಲ್ಲ ಎಂಬುದು ಗ್ರಾಮದ ಪ್ರಜ್ಞಾವಂತರ ಪ್ರಶ್ನೆ.
ನಾಮಫಲಕಗಳಲ್ಲಿ ಅನ್ಯ ಭಾಷೆ: ಹುಲಸೂರ ತಾಲ್ಲೂಕಿನ ಅಂಗಡಿ, ಹೋಟೆಲ್‌ಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕಾಗಿದೆ ಆದರೆ ಎಲ್ಲೆಡೆ ಮಾತ್ರ ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳು ರಾರಾಜಿಸುತ್ತಿವೆ.
‘ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂಬ ನಿಯಮವಿದ್ದರೂ ಕೆಲವು ವ್ಯಾಪಾರಿಗಳು ಅದನ್ನು ಗಾಳಿಗೆ ತೂರುತ್ತಿದ್ದಾರೆ. ದಂಡ ವಿಧಿಸಲು ಅಧಿಕಾರಿಗಳು ಮುಂದಾದರೆ, ಪ್ರಭಾವ ಬಳಸಿ ಉದ್ಯಮಿಗಳು, ವ್ಯಾಪಾರಿಗಳು ತಪ್ಪಿಸಿಕೊಳ್ಳುತ್ತಾರೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕರವೇ ತಾಲ್ಲೂಕ (ನಾರಾಯಣಗೌಡ ಬಣ) ಅಧ್ಯಕ್ಷ ವಿವೇಕ ಚಳಕಾಪುರೆ.
ಗಡಿಭಾಗದ ಶಾಲೆಗಳ ಮಕ್ಕಳಿಗೆ ಕನ್ನಡವೇ ಕಗ್ಗಂಟಾಗಿದೆ. ಸರ್ಕಾರ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಯೋಜನೆ ರೂಪಿಸಲು ಮುಂದಾಗಬೇಕುರಾಜಕುಮಾರ ತೊಂಡಾರೆ ಅಧ್ಯಕ್ಷ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ
ಅನ್ಯ ರಜ್ಯದೊಂದಿಗೆ ಗಡಿ ಹಂಚಿಕೊಂಡ ಗ್ರಾಮಗಳಲ್ಲಿ ಕಲಾಭವನ ಅಥವಾ ರಂಗಭವನಗಳು ಆಗಬೇಕು. ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನವೇ ಇಲ್ಲ. ಕನ್ನಡ ಚುಟವಟಿಕೆ ನಡೆಸುವುದು ಹೇಗೆ?. ಕನ್ನಡ ಉಳಿಸಿ ಬೆಳೆಸಲು ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕುನಾಗರಾಜ ಹಾವಣ್ಣ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ
ಕನ್ನಡ ನೆಲದಲ್ಲಿದ್ದು ಇಲ್ಲೇ ಅಗತ್ಯ ಸೌಲಭ್ಯಗಳನ್ನು ಪಡೆದು ಕನ್ನಡ ಭಾಷೆ ಬಾರದೇ ವ್ಯಾಪಾರ ಸೇರಿ ಎಲ್ಲಾ ವ್ಯವಹಾರಕ್ಕಾಗಿ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆಅಜಿತ ಸೂರ್ಯವಂಶಿ ಅಧ್ಯಕ್ಷ ಲಹೂಜಿ ಶಕ್ತಿ ಸೇನೆ ತಾಲ್ಲೂಕು ಘಟಕ
ಶಾಲೆಗಳಿಗೆ ಬೀಗ
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಜಮಖಂಡಿ ಕೊಂಗಳಿ ಅಳವಾಯಿ ಗ್ರಾಮದ ಗಡಿನಾಡು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಗಳ ಕಾರಣ ಮೂರು ವರ್ಷಗಳಿಂದ ಬಾಗಿಲು ತೆರೆದಿಲ್ಲ. ಕೆಲವು ಶಾಲೆಯಲ್ಲಿ ಮಕ್ಕಳು ಇದ್ದರೂ ಮರಾಠಿ ಶಾಲೆಯಲ್ಲಿ ಓದುತ್ತಿದ್ದು ಕೆಲವೆಡೆ ಕಟ್ಟಡಗಳು ಪಾಳು ಬಿದ್ದಿವೆ. ನಿರಂತರ ಜಾಗೃತಿ ಮೂಡಿಸಿದರೂ ಮಕ್ಕಳು ಪ್ರವೇಶ ಪಡೆದಿಲ್ಲ. ಶಾಲೆಗೆ ಬೀಗ ಹಾಕಿದ್ದು ಅಲ್ಲದೇ ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ಬೇರೆಡೆ ನಿಯೋಜಿಸಿದೆ. ಅಳವಾಯಿ ಗ್ರಾಮದ ಸರ್ಕಾರಿ ಕನ್ನಡ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಸುಮಾರು 26 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರಾದರೂ ಶಾಲೆ ಆರಂಭವಾದ ಕೆಲವೇ ತಿಂಗಳಿನಲ್ಲಿ ನೇಮಕಗೊಂಡ ಒಬ್ಬರೇ ಶಿಕ್ಷಕ ಬೇರೆಡೆ ವರ್ಗಾವಣೆಯಾಗಿದ್ದಾರೆ. ಬಳಿಕ ಅನಿವಾರ್ಯವಾಗಿ ಮಕ್ಕಳು ಬೇರೆಡೆ ಸ್ಥಳಾಂತರಗೊಂಡಿದ್ದು ಅಂದಿನಿಂದ ಶಾಲೆಗೆ ಬೀಗ ಹಾಕಲಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ಗುಂಡಪ್ಪ ಗಂದಗೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಪತ್ರದ ಬಗ್ಗೆ ಪ್ರಾಧಿಕಾರ ಸರ್ಕಾರದ ಗಮನಕ್ಕೆ ತಂದಾಗ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ 2023ರ ಫೆ.20 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ರವಾನಿಸಿದ್ದರು. ಆದರೆ ಇಲಾಖೆಯಾಗಲಿ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ಗ್ರಾಮದ ಕನ್ನಡ ಶಾಲೆ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹೀಗೆ ಮಾಡಿದರೆ ಗಡಿ ಭಾಗದ ಜನ ಕನ್ನಡ ಕಲಿಯುವುದು ಹೇಗೆಂಬುದು ಪ್ರಶ್ನೆಯಾಗಿ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.