ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ; ಅಂತರ್ಜಲ ಹೆಚ್ಚಳವೇ ಜೀವಾಳ

ಕುಡಿಯುವ ನೀರಿನ ಸಮಸ್ಯೆ ನೀಗಲು ಕಳೆದ ವರ್ಷದ ದಾಖಲೆಯ ಮಳೆ ಕಾರಣ
Last Updated 13 ಮೇ 2021, 4:45 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನ 19 ಹಳ್ಳಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಿಟ್ಟರೆ ಎಲ್ಲಾ ಹಳ್ಳಿಗಳಲ್ಲಿ ನೀರಿನ ಸರಬರಾಜು ಚೆನ್ನಾಗಿದೆ. ಕಳೆದ ವರ್ಷ ದಾಖಲೆ ಮಳೆಯೇ ಇದಕ್ಕೆ ಕಾರಣ.

‘ತಾಲ್ಲೂಕಿನ ಮುಸ್ತಾಪುರ ಅಣೆಕಟ್ಟು, ಬೇಲೂರ ಕೆರೆ ತುಂಬಿರುವುದರಿಂದ ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಅಲ್ಲದೇ, ಮುಸ್ತಾಪುರ ಅಣೆಕಟ್ಟಿನ ನೀರು ಪೈಪ್‌ಲೈನ್‌ ಮೂಲಕ ಸುತ್ತಲಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡಿದ್ದರ ಪರಿಣಾಮ ಇನ್ನೂ 15 ದಿನ ನೀರಿನ ಕೊರತೆ ಇಲ್ಲ’ ಎಂದು ಹುಲಸೂರ ತಹಶೀಲ್ದಾರ್‌ ಬಸಲಿಂಗಪ್ಪ ತಿಳಿಸುತ್ತಾರೆ.

‘ತೊಗಲೂರ ಗ್ರಾಮದಲ್ಲಿ ನೀರಿನ ಮೂಲ ತುಂಬಾ ಚೆನ್ನಾಗಿದ್ದು, ಮನೆಮನೆಗೆ ನಳ ಅಳವಡಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಕಡೆಯಿಂದ ನೇಮಿಸಿದ್ದ ನೀರು ಸರಬರಾಜು ಸಿಬ್ಬಂದಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಸಮಸ್ಯೆಗೆ ಮುಕ್ತಿ ಸಿಕ್ಕರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಹಾಲಹಳ್ಳಿ: ಗ್ರಾಮದಲ್ಲಿ ಕುಡಿಯುವ ನೀರು ಮತ್ತು ದಿನಬಳಕೆಯ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ವಾರ್ಡ್‌ಗಳಲ್ಲಿ ಮನೆಯ ಹತ್ತಿರ ನೀರು ಪೂರೈಕೆಯ ವ್ಯವಸ್ಥೆ ಮಾಡಲಾಗಿದೆ ಎಂಬುದು ಅಲ್ಲಿನ ಜನರ ಅಭಿಪ್ರಾಯ.

ಗಡಿಗೌಡಗಾಂವ: ‘ನಮ್ಮ ಗ್ರಾಮದಲ್ಲಿ ಇಲ್ಲಿಯವರೆಗೆ ನೀರಿನ ಸಮಸ್ಯೆ ಇಲ್ಲ. ಎಲ್ಲಾ ವಾರ್ಡ್‌ಗಳಲ್ಲಿ ನೀರಿನ ಸರಬರಾಜು ಇದೆ’ ಎಂದು ಪಿಕೆಪಿಎಸ್‌ ಮಾಜಿ ಅಧ್ಯಕ್ಷ ಸತೀಶ ಹಿರೇಮಠ ತಿಳಿಸುತ್ತಾರೆ.

‘ಬೇಲೂರ ಗ್ರಾಮದಲ್ಲಿ ದೊಡ್ಡದಾದ ಕೆರೆ ಇದ್ದು, ಅದು ಗ್ರಾಮದ ಜನರಿಗೆ ನೀರಿನ ಬವಣೆಯಿಂದ ಪಾರು ಮಾಡಿದೆ. ಈ ಕೆರೆ ನೀರು ಇನ್ನೂ ಎರಡು ತಿಂಗಳಾದರೂ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ’ ಎಂದು ನಾಗೇಶ ಕೌಟೆ ಹೇಳುತ್ತಾರೆ.

ಹುಲಸೂರ ಪಟ್ಟಣದಲ್ಲಿನ ಎಲ್ಲಾ ವಾರ್ಡ್‌ಗಳ ಜನರ ಮನೆಮನೆಗೆ ನಳ ಅಳವಡಿಸಲಾಗಿದೆ. ಅಲ್ಲದೇ ಮುಸ್ತಾಪುರ ಅಣೆಕಟ್ಟಿನಿಂದ ನೀರು ಸರಬರಾಜು ಆಗುತ್ತಿದೆ. ಇದರ ಜೊತೆಗೆ ಪಟ್ಟಣದಲ್ಲಿ ಎರಡು ನೀರು ಶುದ್ಧೀಕರಣ ಘಟಕ ಇವೆ. ವಾರ್ಡ್‌ ನಂ 2ರ ಘಟಕದಲ್ಲಿ 10 ಲೀಟರ್‌ ಕುಡಿಯುವ ನೀರಿಗೆ ₹2 ರಂತೆ ನೀಡಲಾಗುತ್ತಿದೆ.

‘ತಾಂತ್ರಿಕ ದೋಷ ಇದ್ದ ವಾರ್ಡ್‌ ನಂ 7ರಲ್ಲಿನ ಶುದ್ಧ ನೀರಿನ ಘಟಕ ಮತ್ತು ಗೋವರ್ಧನ ತಾಂಡಾದಲ್ಲಿ ಕೊಳವೆಬಾವಿಗೆ ಅಳಡಿಸಿದ್ದ ಸುಟ್ಟ ಮೋಟಾರ್‌ ಅನ್ನು ದುರಸ್ತಿ ಮಾಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಶಾ ದಂಡಿನ್‌ ತಿಳಿಸಿದ್ದಾರೆ.

ಉಳಿದಂತೆ ಕಾದೆಪುರ, ಲಿಂಬಾಪುರ, ಮಿರಖಲ್‌, ಗುತ್ತಿ, ಕೊಟಮಾಳ, ಕಾದರಾಬಾದ ವಾಡಿ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT