ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಏತ ನೀರಾವರಿ ಯೋಜನೆ ರೈತರ ಒತ್ತಾಯ

Published 13 ಆಗಸ್ಟ್ 2023, 5:56 IST
Last Updated 13 ಆಗಸ್ಟ್ 2023, 5:56 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನಿಂದ ಹಾದುಹೋಗುವ ಬೆಣ್ಣೆತೊರೆ ನದಿ ತೀರದಲ್ಲಿ ನೀರಾವರಿಗೆ ಸಾಕಷ್ಟು ಅನುಕೂಲವಿಲ್ಲ. ಮಹಾರಾಷ್ಟ್ರದಲ್ಲಿ ಈ ನದಿಗೆ ಜಲಾಶಯಳಿರುವ ಕಾರಣ ಸಾವಿರಾರು ಎಕರೆಯಲ್ಲಿ ಯಾವಾಗಲೂ ಹಸಿರು ನಳನಳಿಸುತ್ತದೆ. ಆದರೆ ತಾಲ್ಲೂಕು ವ್ಯಾಪ್ತಿಯ ಭೂಭಾಗ ಮಾತ್ರ ಬೇಸಿಗೆಯಲ್ಲಿ ಮತ್ತು ಮಳೆ ಕೊರತೆಯಾದಾಗ ಬರಡಾಗಿ ಕಾಣುತ್ತದೆ.

ತಾಲ್ಲೂಕಿನಲ್ಲಿ ನೀರಾವರಿ ಕೆರೆಗಳಿಲ್ಲ. ಚುಳಕಿನಾಲಾ ಮತ್ತು ಮುಲ್ಲಾಮಾರಿ ಮೇಲ್ದಂಡೆ ಯೋಜನೆ ಜಲಾಶಯಗಳಿದ್ದರೂ ಅವುಗಳ ನೀರಿನಿಂದ ಭಾಲ್ಕಿ ತಾಲ್ಲೂಕು ಹಾಗೂ ಕಲಬುರಗಿ ಜಿಲ್ಲೆಯ ಹೆಚ್ಚಿನ ಗ್ರಾಮಗಳಿಗೆ ಉಪಯೋಗವಾಗಿದೆ.

ಬೆಣ್ಣೆತೊರೆ ನದಿ ಕೂಡ ತಾಲ್ಲೂಕು ಸ್ಥಳದಿಂದ 45 ಕಿ.ಮೀ ದೂರದ ಗಡಿಭಾಗದಲ್ಲಿದೆ. ಮಹಾರಾಷ್ಟ್ರದ ಧಾನೂರ ಗ್ರಾಮದಲ್ಲಿ ಜಲಾಶಯ ನಿರ್ಮಿಸಿದ್ದರಿಂದ ನೀರಿನ ಹರಿವು ಕಡಿಮೆಯಾಗಿದೆ. ತಾಲ್ಲೂಕಿನ 15 ಕಿ.ಮೀ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಇದಕ್ಕೆ ಬ್ಯಾರೇಜ್ ನಿರ್ಮಿಸಿದ್ದರೂ ಅವುಗಳ ಸರಿಯಾದ ನಿರ್ವಹಣೆ ಇಲ್ಲದೆ ಜಮೀನುಗಳಿಗೆ ಇಡೀ ವರ್ಷ ನೀರು ದೊರಕುತ್ತಿಲ್ಲ.

ಬಟಗೇರಾ ಗ್ರಾ.ಪಂ ವ್ಯಾಪ್ತಿಯ ಚಿತ್ತಕೋಟಾ-ಗಿಲಗಿಲಿ, ಹತ್ತರ್ಗಾ-ಹಿಪ್ಪರ್ಗಾ, ಶಿರಗೂರ-ನಂದಗೂರ ರಸ್ತೆಗಳಲ್ಲಿ ನದಿಗೆ ಬಿಸಿಬಿ(ಬ್ರಿಜ್ ಕಂ ಬ್ಯಾರೇಜ್) ನಿರ್ಮಿಸಲಾಗಿದೆ. ಬಟಗೇರಾವಾಡಿ, ಗದ್ಲೇಗಾಂವ ಹತ್ತಿರದಲ್ಲಿಯೂ ಬ್ಯಾರೇಜ್‌ಗಳಿವೆ. ಕೆಲವೆಡೆ ಈ ಬ್ಯಾರೇಜ್‌ಗಳಿಗೆ ಗೇಟುಗಳಿಲ್ಲ. ಇನ್ನೂ ಕೆಲವು ಗೇಟ್‌ಗಳಿಂದ ನೀರು ಸೋರುತ್ತದೆ. ಹೀಗಾಗಿ ಹೆಚ್ಚಿನ ನೀರು ಸಂಗ್ರಹಣೆಯಾಗದೇ, ಪಂಪ್‌ಸೆಟ್ ಮೂಲಕ ನೀರು ಸಾಗಿಸುವ ಸಮೀಪದ ಹೊಲದವರಿಗೆ ಬೇಸಿಗೆಯಲ್ಲಿ ನೀರು ಲಭ್ಯವಾಗುತ್ತಿಲ್ಲ.

ಹತ್ತಿರದ ಆಳಂದ ತಾಲ್ಲೂಕಿನ ಬೆಳಮಗಿ ವ್ಯಾಪ್ತಿಯ ಕಟ್ಟರಮುಖಿ ಸ್ಥಳದಲ್ಲಿ ನದಿಗೆ ಜಲಾಶಯ ಕಟ್ಟುವುದಕ್ಕಾಗಿ ಹಿಂದೆ ಸಮೀಕ್ಷೆ ನಡೆದಿತ್ತು. ಎರಡು ಗುಡ್ಡಗಳು ಸಂದಿಸುವ ಈ ಜಾಗದಲ್ಲಿ ಅಣೆಕಟ್ಟೆ ನಿರ್ಮಿಸಿದರೆ ಸಾವಿರಾರು ಎಕರೆಗೆ ನೀರಾವರಿಗೆ ಅನುಕೂಲ ಆಗುತ್ತದೆ. ಆದರೂ, ನಂತರದಲ್ಲಿ ಈ ಬಗ್ಗೆ ಪ್ರಯತ್ನ ನಡೆದಿಲ್ಲ. ಹೋಬಳಿ ಕೇಂದ್ರ ಕೊಹಿನೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯಗತಗೊಳಿಸುತ್ತಿರುವ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಇಲ್ಲಿಂದ ನೀರು ಸಾಗಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಮಹಾಗಾಂವ ಹತ್ತಿರದ ಗಂಡೂರಿನಾಲೆ ಜಲಾಶಯಕ್ಕೆ ವರ್ಗಾವಣೆಗೊಂಡಿತು.

‘ಇಲ್ಲಿ ಏತ ನೀರಾವರಿ ಯೋಜನೆ ಕೈಗೊಂಡರೆ ಉಜಳಂಬ, ಏಕಂಬಾ, ಬಟಗೇರಾ, ಲಾಡವಂತಿ ಮತ್ತು ಬೆಳಮಗಿ ಗ್ರಾ.ಪಂಗಳ ವ್ಯಾಪ್ತಿಯ ಅನೇಕ ಗ್ರಾಮಗಳ ಜಮೀನುಗಳಿಗೆ ನೀರಾವರಿ ಕೈಗೊಳ್ಳಲು, ಕೆರೆಗಳಲ್ಲಿ ನೀರು ಭರ್ತಿಗೆ ಅನುಕೂಲವಾಗುತ್ತದೆ’ ಎಂಬುದು ಹಿರಿಯ ಗುರುಶಾಂತಪ್ಪ ಚಿತ್ತಕೋಟಾ ಹೇಳಿದರು.

ಬೆಣ್ಣೆತೊರೆ ನದಿಗೆ ಕೂಡುವ ರಾಷ್ಟ್ರೀಯ ಹೆದ್ದಾರಿಯಿಂದ ಧಾಮೂರಿ-ಉಜಳಂಬವರೆಗೆ ತಾಲ್ಲೂಕಿನ ಸರಹದ್ದಿನಗುಂಡ ಹರಿಯುವ ಅಮೃತಕುಂಡ ನಾಲಾಕ್ಕೂ 4 ಸ್ಥಳಗಳಲ್ಲಿ ನಿರ್ಮಿಸಿದ ಬ್ಯಾರೇಜ್‌ಗಳು ಸಹ ಹಾಳಾಗಿವೆ’ ಎಂದು ಎಪಿಎಂಸಿ ಸದಸ್ಯ ಸಂತೋಷ ಜಾಧವ ಹೇಳಿದ್ದಾರೆ.

‘ಬ್ಯಾರೇಜ್‌ಗಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಸರಹದ್ದಿನಲ್ಲಿರುವ ಶಿರಗೂರ ಸಮೀಪದ ಮಹಾರಾಷ್ಟ್ರದ ಧಾನೂರಾ ಗ್ರಾಮದ ಜಲಾಶಯ
ಬಸವಕಲ್ಯಾಣ ತಾಲ್ಲೂಕಿನ ಸರಹದ್ದಿನಲ್ಲಿರುವ ಶಿರಗೂರ ಸಮೀಪದ ಮಹಾರಾಷ್ಟ್ರದ ಧಾನೂರಾ ಗ್ರಾಮದ ಜಲಾಶಯ
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಸಮೀಪದ ಬೆಣ್ಣೆತೊರೆ ನದಿಗೆ ಕಟ್ಟಿದ ಬ್ಯಾರೇಜ್ ಮತ್ತು ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಸಹ ಕಾಣಬಹುದು
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಸಮೀಪದ ಬೆಣ್ಣೆತೊರೆ ನದಿಗೆ ಕಟ್ಟಿದ ಬ್ಯಾರೇಜ್ ಮತ್ತು ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಸಹ ಕಾಣಬಹುದು
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಸಮೀಪದ ಬೆಣ್ಣೆತೊರೆ ನದಿಗೆ ಕಟ್ಟಿದ ಬ್ಯಾರೇಜ್ ಮತ್ತು ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಸಹ ಕಾಣಬಹುದು
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಸಮೀಪದ ಬೆಣ್ಣೆತೊರೆ ನದಿಗೆ ಕಟ್ಟಿದ ಬ್ಯಾರೇಜ್ ಮತ್ತು ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಸಹ ಕಾಣಬಹುದು
ಶಿರಗೂರ ಸಮೀಪದ ನದಿಯ ಬ್ಯಾರೇಜ್‌ನ ಗೇಟು ತೆಗೆದಿರಿಸಲಾಗಿದೆ. ಇತರೆ ಬ್ಯಾರೇಜು ನಿರ್ವಹಣೆ ಇಲ್ಲದೆ ಹೆಚ್ಚಿನ ನೀರು ಸಂಗ್ರಹಣೆ ಆಗುತ್ತಿಲ್ಲ
–ಗೋಲಂದಾಸ ಇಲ್ಲಾಳೆ, ಗ್ರಾ.ಪಂ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT