ಶುಕ್ರವಾರ, ಮಾರ್ಚ್ 31, 2023
25 °C
ಶಿಕ್ಷಕರಿಗೆ ಕೆಕೆಎಚ್‍ಆರ್‌ಎಸ್ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಸಲಹೆ

ಬೋಧನಾ ಕೌಶಲ ಹೆಚ್ಚಿಸಿಕೊಳ್ಳಿ: ರೇವಣಸಿದ್ದಪ್ಪ ಜಲಾದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶಿಕ್ಷಕರು ಬೋಧನಾ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಸಲಹೆ ಮಾಡಿದರು.

ಇಲ್ಲಿಯ ನೌಬಾದ್‍ನ ಡಯಟ್‍ನಲ್ಲಿ ನಡೆದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸೃಜನಾತ್ಮಕ ಬೋಧನೆ ಹಾಗೂ ಹೊಸ ಶಿಕ್ಷಣ ನೀತಿ ಕುರಿತ 12 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗ ಇದೆ. ಹೀಗಾಗಿ ಮಕ್ಕಳಿಗೆ ಅದಕ್ಕೆ ಪೂರಕವಾದ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ಶಿಕ್ಷಕರು ತಾವು ಬೋಧಿಸುವ ವಿಷಯದ ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ನಿರಂತರ ಶ್ರಮಿಸಬೇಕು. ಆ ಮೂಲಕ ವೃತ್ತಿಯ ಘನತೆ, ಗೌರವ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಟಿಸಿಎಚ್, ಬಿ.ಎಡ್ ಪದವಿಯಿಂದ ಶಿಕ್ಷಕ ಹುದ್ದೆಗೆ ಅರ್ಹತೆ ಮಾತ್ರ ಪಡೆಯಬಹುದು. ಆದರೆ, ಮಕ್ಕಳಿಗೆ ವಿಷಯ ಮನವರಿಕೆ ಆಗುವಂತೆ ಬೋಧನೆ ಮಾಡುವವರೇ ನಿಜವಾದ ಶಿಕ್ಷಕರು ಎಂದು ಹೇಳಿದರು.

ತರಬೇತಿ ಅವಧಿಯಲ್ಲಿ ಪಡೆದ ಜ್ಞಾನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಯೇ ಹೊಸ ಶಿಕ್ಷಣ ನೀತಿಯ ಗುರಿಯಾಗಿದೆ. ಹೊಸ ನೀತಿಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಆದ್ಯತೆ ಕೊಡಲಾಗಿದೆ. ಮಕ್ಕಳ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.

ಅನೇಕ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಡಯಟ್ ಪ್ರಾಚಾರ್ಯ ಬಿ.ಕೆ. ದಿಗಂಬರ ಅಧ್ಯಕ್ಷತೆ ವಹಿಸಿದ್ದರು. ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನವೀನ್ ಭಟ್, ಡಯಟ್ ನೋಡಲ್ ಅಧಿಕಾರಿ ಸಂತೋಷ ಪೂಜಾರಿ ಮಾತನಾಡಿದರು.

ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಚೇತನಾ, ಜಾಫರ್ ಉಪಸ್ಥಿತರಿದ್ದರು.
ಕೆಕೆಎಚ್‍ಆರ್‍ಎಸಿಎಸ್ ತಾಲ್ಲೂಕು ಸಂಯೋಜಕ ಗುರುನಾಥ ರಾಜಗೀರಾ ನಿರೂಪಿಸಿದರು. ಗೋವಿಂದ ರೆಡ್ಡಿ ವಂದಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ಬೆಂಗಳೂರಿನ ಆ್ಯಕ್ಟ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 185 ಶಿಕ್ಷಕ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು