ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲಂಗಡಿ ಬೆಳೆಯತ್ತ ಹೆಚ್ಚಿದ ರೈತರ ಆಸಕ್ತಿ

ಗಡಿಯಲ್ಲಿ ಕಲ್ಲಂಗಡಿ ಬೆಳೆಯುವ ಗ್ರಾಮ ಎಂದೇ ಪ್ರಸಿದ್ಧಿ
ಗುರುಪ್ರಸಾದ ಮೆಂಟೇ
Published 2 ಏಪ್ರಿಲ್ 2024, 4:35 IST
Last Updated 2 ಏಪ್ರಿಲ್ 2024, 4:35 IST
ಅಕ್ಷರ ಗಾತ್ರ

ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ರೈತರು ಸುಮಾರು 100 ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಿದ್ದಾರೆ.

ಸಾಮಾನ್ಯವಾಗಿ ಕೆಂಪುಬಣ್ಣದ ಕಲ್ಲಂಗಡಿ ಬೆಳೆಯುವುದು ರೂಢಿ. ಆದರೆ ಈ ಗ್ರಾಮದ ರೈತರು ಬಣ್ಣಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಮಾರಾಟ ಮಾಡಿ  ಕೈತುಂಬಾ ಹಣ ಗಳಿಸುತ್ತಿದ್ದಾರೆ. ಬೇಸಿಗೆ ಇರುವುದರಿಂದ ವಿವಿಧ ಬಗೆಯ ಹಣ್ಣುಗಳು, ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದ್ದು, ಹೊರರಾಜ್ಯದಲ್ಲೂ ಬಹುಬೇಡಿಕೆ ಬಂದಿದೆ.

ತೋಟಗಾರಿಕಾ ಇಲಾಖೆ ಅಧಿಕಾರಿಗಳೂ ಸಹ ನಿರ್ದೇಶನ ನೀಡುತ್ತಿದ್ದು, ಪ್ಲಾಸ್ಟಿಕ್ ಹಾಳೆ ಬಳಸಿ ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಇಸ್ರೇಲ್ ಮಾದರಿ ಅನುಸರಿಸುತ್ತಿದ್ದಾರೆ. ಪ್ರತಿ ಕಲ್ಲಂಗಡಿ 7 ರಿಂದ 8 ಕೆಜಿಯಷ್ಟು ತೂಕ ಬಂದಿದೆ. ಜೊತೆಗೆ ಬಣ್ಣ, ರುಚಿಗೆ ಇದು ಖ್ಯಾತಿ ಗಳಿಸಿದ್ದು, ಹೋಲ್‌ಸೆಲ್ ವ್ಯಾಪಾರಿಗಳು ಮುಗಿಬಿದ್ದು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರೈತರು.

ರಾಸಾಯನಿಕ, ಸಾವಯವ ಹಾಗೂ ಜೈವಿಕ ಕೃಷಿಯಲ್ಲಿ ಶ್ರಮಪಟ್ಟು ಹೆಚ್ಚು ನಿಗಾವಹಿಸಿ ಕಾಲ ಕಾಲಕ್ಕೆ ಅಗತ್ಯವಾದಷ್ಟು ಮಾತ್ರ ನೀರು, ಗೊಬ್ಬರ ಒದಗಿಸಿ ಬೆಳೆ ಆರೈಕೆ ಮಾಡುವ ಮೂಲಕ ಇಂತಹ ಕಲ್ಲಂಗಡಿ ಬೆಳೆದಿದ್ದಾರೆ.

‘ವಾರ್ಷಿಕ ಸರಾಸರಿ 60 ಟನ್‍ಗೂ ಅಧಿಕ ಕಲ್ಲಂಗಡಿ ಮಾರಾಟ ಮಾಡುತ್ತೇವೆ. ಇಸ್ರೇಲ್ ಮಾದರಿಯ ಕೃಷಿಯಲ್ಲಿ ತೊಡಗಿದ ಬಳಿಕ ರೋಗ ಬಾಧೆ, ಇಬ್ಬನಿಗೆ ಕಲ್ಲಂಗಡಿ ಹೂವು ಉದುರುವ ಸಮಸ್ಯೆ ಕಡಿಮೆ ಆಗಿದೆ. ಹಣ್ಣುಗಳ ಬೆಳವಣಿಗೆಯೂ ಉತ್ತಮವಾಗಿದೆ’ ಎನ್ನುತ್ತಾರೆ ಯುವ ರೈತ ಭಗವಾನ ಡಾಂಗೆ.

ಹೊರ ರಾಜ್ಯಗಳಿಗೆ ರವಾನೆ: ಕೊಂಗಳಿ ಗ್ರಾಮದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣುಗಳಿಗೆ ನೆರೆಯ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆ.

‘ಮಳೆಗಾಲ ಮುಗಿಯುತ್ತಿದ್ದಂತೆಯೇ ಫಸಲು ಕೈಗೆ ಬರುತ್ತದೆ. ಆಗ ಕೆಜಿಗೆ ಸರಾಸರಿ ₹20 ರಿಂದ ₹25 ದರ ಸಿಗುತ್ತದೆ. ಈಗ ಬೇಡಿಕೆ ಹೆಚ್ಚಿದ್ದರೂ ಉತ್ಪಾದನೆ ಪ್ರಮಾಣ ಅಧಿಕವಿರುವ ಕಾರಣ ದರ ಕಡಿಮೆ. ಆದರೆ ಈ ಸಮಯದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇಲ್ಲಿ ಬೆಳೆಯುವ ಹಸಿರು ಕಲ್ಲಂಗಡಿಗೆ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಕೃಷಿಕ ಪ್ರದೀಪ ಡಾಂಗೆ.

ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಯ ಕಲ್ಲಂಗಡಿ ಬೀಜಗಳು ಸಿಗುತ್ತವೆ. ಕಂಪನಿಯವರು ಕೂಡಾ ಹತ್ತಾರು ಆಶ್ವಾಸನೆಗಳನ್ನು ನೀಡಿ ರೈತರಿಗೆ ಬೆಳೆಯಲು ಹೇಳುತ್ತಾರೆ. ಬೇರೆ ಕಲ್ಲಂಗಡಿಗೆ ಹೋಲಿಸಿದರೆ, ಗ್ರಾಮದಲ್ಲಿ ಸಿಂಭಾ , ಉತ್ಕೃಷ್ಟ, ಮೆಲೋಡಿ, ವಿರಾಟ, ರಸಿಕಾ, ಸುಲ್ತಾನ ತಳಿಯ ಕಲ್ಲಂಗಡಿ ಹೆಚ್ಚು ಬೆಳೆಯುತ್ತಿದ್ದು ಈ ತಳಿಯು ಕಪ್ಪಾಗಿದ್ದು, ರುಚಿ ಜಾಸ್ತಿಯಿದೆ.

ಹುಲಸೂರು ಸಮೀಪದ ಕೊಂಗಳಿ ಗ್ರಾಮದಲ್ಲಿ ಬೆಳೆದ ಕಲ್ಲಂಗಡಿ ಬೆಳೆ
ಹುಲಸೂರು ಸಮೀಪದ ಕೊಂಗಳಿ ಗ್ರಾಮದಲ್ಲಿ ಬೆಳೆದ ಕಲ್ಲಂಗಡಿ ಬೆಳೆ
ರವೀಂದ್ರ ಜಟಗೊಂಡ್
ರವೀಂದ್ರ ಜಟಗೊಂಡ್
ಏಕನಾಥ ಕಾರಬಾರಿ ಕೃಷಿಕ
ಏಕನಾಥ ಕಾರಬಾರಿ ಕೃಷಿಕ

ಐದು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೇನೆ. ಕಳೆದ ಬಾರಿಗಿಂತ 2 ಎಕರೆ ಹೆಚ್ಚು ಬೆಳೆದಿದ್ದೇನೆ. ಮಳೆಯಿಲ್ಲದೆ ಇರುವುದರಿಂದ ಕಲ್ಲಂಗಡಿ ಬೆಲೆ ಚೆನ್ನಾಗಿದೆ ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದೇನೆ.

–ಏಕನಾಥ ಕಾರಬಾರಿ ಕಲ್ಲಂಗಡಿ ಕೃಷಿಕ

ಕೊಂಗಳಿಯಲ್ಲಿ ಕಲ್ಲಂಗಡಿ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದ್ದು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಪ್ರೋತ್ಸಾಹಧನನ್ನು ನೀಡಲಾಗುತ್ತಿದೆ.

–ರವೀಂದ್ರ ಜಟಗೊಂಡ್ ಸಹಾಯಕ ತೋಟಗಾರಿಕಾ ಅಧಿಕಾರಿ

ಗ್ರಾಮದ ಯುವ ರೈತರು ವಾಣಿಜ್ಯ ಕೃಷಿಯ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ. ಇದರಿಂದ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಹೋಗುವವರ ಸಂಖ್ಯೆ ಕಡಿಮೆಯಾಗಿದೆ.

–ಯೋಗಾಜಿ ಕಾರಬಾರಿ ಗ್ರಾಮದ ಪ್ರಮುಖ

ಖಾಸಗಿ ಉದ್ಯೋಗಕ್ಕಿಂತ ಕೃಷಿ ಚಟುವಟಿಕೆ ಲಾಭದಾಯಕ ಹಾಗೂ ನೆಮ್ಮದಿ ತರುವ ಕ್ಷೇತ್ರ ಎಂಬುದು ಮನವರಿಕೆ ಆಗಿದೆ.

–ಪ್ರದೀಪ ಡಾಂಗೆ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT