ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾಂತ್ರೀಕೃತ ಕೃಷಿಯತ್ತ ಹೆಚ್ಚುತ್ತಿದೆ ಒಲವು

ದುಬಾರಿಯಾಗುತ್ತಿದೆ ಎತ್ತಿನ ಬೇಸಾಯ; ಅನಿವಾರ್ಯವಾದ ಯಂತ್ರೋಪಕರಣಗಳ ಅವಲಂಬನೆ
Published 16 ಜೂನ್ 2024, 6:57 IST
Last Updated 16 ಜೂನ್ 2024, 6:57 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನಲ್ಲಿ ರೈತರು ನೂರಾರು ವರ್ಷಗಳಿಂದ ಎತ್ತುಗಳನ್ನು ಅವಲಂಬಿಸಿ ಮಾಡುತ್ತಿದ್ದು ಬೇಸಾಯ ಈಗ ದೂರವಾಗುತ್ತಿದೆ. ಎತ್ತುಗಳನ್ನು ಹೂಡಿಕೊಂಡು ಹೊಲದಲ್ಲಿ ನಿತ್ಯ ಕೆಲಸ ಮಾಡುತ್ತಿದ್ದ ದೃಶ್ಯ ತೀರಾ ಕಡಿಮೆಯಾಗಿ ಹೊಲ ಗದ್ದೆಗಳಲ್ಲಿ ಈಗ ಟ್ರ್ಯಾಕ್ಟ‌ರ್ ಸೇರಿ ವಿವಿಧ ಯಂತ್ರೋಪಕರಣಗಳ ಅವಲಂಬನೆ ಅನಿವಾರ್ಯವಾಗಿದೆ.

ಎತ್ತುಗಳಿಗೆ ದುಬಾರಿ ದರ, ಮೇವಿನ ಅಭಾವ ಹಾಗೂ ಎತ್ತುಗಳ ಆರೈಕೆ, ಕಾರ್ಮಿಕರ ಸಮಸ್ಯೆ, ದುಬಾರಿ ಕೂಲಿ ಹಣ, ಎತ್ತುಗಳ ಸಾಕಾಣಿಕೆಗೆ ವೆಚ್ಚ ದುಬಾರಿ, ಹೀಗೆ ಹತ್ತು ಹಲವು ಆಯಾಮಗಳಿಂದ ಬಸವಳಿದ ರೈತರು ವಿವಿಧ ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಮೋರೆ ಹೋಗಿದ್ದಾರೆ. ಹುಲಸೂರ ತಾಲ್ಲೂಕಿನಾದ್ಯಂತ ಹಲವೆಡೆ ಹೊಲ ಹಸನು ಮಾಡುವುದು, ಬಿತ್ತನೆ ಕಾರ್ಯ ಮಾಡುವಲ್ಲಿ ಹೊಲದ ಅಂಗಳದಲ್ಲಿ ಟ್ರ್ಯಾಕ್ಟ‌ರ್ ಸದ್ದು ಮೊಳಗತೊಡಗಿದೆ.

‘50 ವರ್ಷಗಳ ಹಿಂದೆ 200ಕ್ಕೆ ಒಂದು ಜೊತೆ ಮಜಬೂತಾದ ಎತ್ತುಗಳನ್ನು ಖರೀದಿಸುತ್ತಿದ್ದೆವು. ಆದರೆ ಈಗ ಒಂದು ಜತೆ ಎತ್ತು ಖರೀದಿಸಲು ಕನಿಷ್ಠ ₹50 ಸಾವಿರದಿಂದ ₹1 ಲಕ್ಷದವರೆಗೆ ಹೊಂದಿಸಬೇಕಿದೆ’ ಎನ್ನುತ್ತಾರೆ ಗಡಿ ಗೌಡಗಾಂವ್ ಗ್ರಾಮದ ರೈತ ಬಂಡೆಪ್ಪ ಪಾಟೀಲ.

‘ಎತ್ತುಗಳನ್ನು ಹೂಡಿ ಬಾರಕೋಲು ಚಾಟಿ ಬೀಸುತ್ತಾ ಉಳಿಮೆ ಮಾಡುವ ಸಾಂಪ್ರದಾಯಿಕ ದೃಶ್ಯ ದೂರವಾಗಿದೆ. ಯಂತ್ರಗಳಿಂದ ಸರಿಯಾದ ಸಮಯಕ್ಕೆ ಹಾಗೂ ತುಂಬಾ ನೀಟಾಗಿ ಕೃಷಿ ಕಾರ್ಯ ನಡೆಯುತ್ತದೆ. ಇದರಿಂದ ಸಮಯ ಕೂಡಾ ಉಳಿತಾಯ ಆಗುತ್ತದೆ’ ಎಂದು ಕೆಸರ ಜವಳಗಾ ಗ್ರಾಮದ ರೈತ ಕಲ್ಯಾಣರಾವ ಕರಕಲ್ಲೇ ಹೇಳುತ್ತಾರೆ.

‘ಈಗ ಎತ್ತುಗಳ ಬೇಸಾಯ ದುಬಾರಿಯಾದರೂ, ಪ್ರತಿದಿನ ಅವುಗಳಿಂದ ದೊರೆಯುವ ಸಗಣಿ, ಗಂಜಲ ಹೊಲಗಳಿಗೆ ಉತ್ಕೃಷ್ಟವಾದ ಗೊಬ್ಬರವಾಗುತ್ತಿದೆ. ಇದರಿಂದ ಜಮೀನುಗಳಿಗೆ ಸಾಕಷ್ಟು ಸತ್ವ ದೊರೆಯುತ್ತದೆ. ಆದರೆ ಈಗ ಎಲ್ಲಾ ರೈತರಿಗೂ ಈ ರೀತಿ ಎತ್ತು ಸಾಕಲು ಆಗದಿರುವುದು ಸತ್ಯ' ಎಂದು ಅವರು ಹೇಳಿದರು.

‘ಕಳೆದ ವರ್ಷ ಮಳೆ ತೀರಾ ಕಡಿಮೆ ಆಗಿ ಬರಗಾಲದ ಕರಾಳ ಛಾಯೆ ಆವರಿಸಿತ್ತು. ಕೊಳವೆಬಾವಿ ನೀರಿಲ್ಲದೆ ಒಣಗಿ ಹೋಗಿದ್ದವು. ಈ ಬಾರಿ ಮಳೆ ಚೆನ್ನಾಗಿದೆ ಎಂಬ ಮಾಹಿತಿ ಆಧರಿಸಿ ನಮ್ಮ ಹೊಲಗಳಲ್ಲಿ ಬೀಜ ಬಿತ್ತನೆ ಉತ್ಸಾಹದಿಂದ ನಡೆದಿದೆ. ಇಲ್ಲಿಯವರೆಗೆ ಮಳೆಯು ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಬೀಜ ಮೊಳಕೆ ಒಡೆಯಲು ಸಾಧ್ಯವಾಗಿದೆ ಇಲ್ಲದಿದ್ದರೆ ಅದು ಭೂಮಿಯಲ್ಲಿ ಅರೆ ಬರೆ ಮೊಳಕೆ ಒಡೆಯುತಿತ್ತು ಎಂಬ ಆತಂಕ ಆವರಿಸಿತ್ತು ಎಂದು ಮುಸ್ತಪುರ ಗ್ರಾಮದ ರೈತ ಕೂಪೇಂದ್ರ ಪಾಟೀಲ ಹೇಳುತ್ತಾರೆ.

ಕೃಷಿ ಇಲಾಖೆಯಲ್ಲಿ ಸರ್ಕಾರದಿಂದ ದೊರೆಯುವ ಕೃಷಿ ಸಲಕರಣೆಗಳಿಗೆ ಸಬ್ಸಿಡಿ ಇಲ್ಲದೆ ತೊಂದರೆ ಆಗಿದೆ. ಯಂತ್ರ ಬಳಕೆ ಹೆಚ್ಚಾಗಿದೆ. ಆದ್ದರಿಂದ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಬೇಕು. ಸರ್ಕಾರದ ಪಾಲುದಾರಿಕೆಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಾಗೂ ಕೃಷಿ ಯಂತ್ರಧಾರೆ ಯೋಜನೆಯಡಿ ಕಡಿಮೆ ದರದಲ್ಲಿ ಹೊಲದ ಉಳಿಮೆ ಮಾಡಲು ವಾಹನಗಳು ಬಾಡಿಗೆ ರೂಪದಲ್ಲಿ ದೊರೆಯುತ್ತವೆ. ಆದರೆ ಒಂದೇ ಸಮಯದಲ್ಲಿ ಬೇಡಿಕೆ ಹೆಚ್ಚಾದಾಗ ಎಲ್ಲರಿಗೂ ವಾಹನ ದೊರೆಯುವುದಿಲ್ಲ ಎಂಬ ಆತಂಕ ರೈತರದ್ದಾಗಿದೆ.

ಹುಲಸೂರ ಸಮೀಪದ ಜಮಖಂಡಿ ಗ್ರಾಮದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿರುವ ರೈತ
ಹುಲಸೂರ ಸಮೀಪದ ಜಮಖಂಡಿ ಗ್ರಾಮದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿರುವ ರೈತ
ಮಾರ್ತಾಂಡ ಮಾಚಕೂರಿ
ಮಾರ್ತಾಂಡ ಮಾಚಕೂರಿ

ಯಂತ್ರೋಪಕರಣಗಳ ಅವಲಂಬನೆ ಅನಿವಾರ್ಯ ದುಬಾರಿಯಾಗುತ್ತಿದೆ ಎತ್ತಿನ ಬೇಸಾಯ

ಈಗ ಕೃಷಿಗೆ ಟ್ರ್ಯಾಕ್ಟರ್‌ಗಳ ಬಳಕೆ ಹೆಚ್ಚಾಗಿದ್ದರೂ ಶೇ 20ರಷ್ಟು ಸಣ್ಣ ರೈತರು ಎತ್ತುಗಳನ್ನು ಬಳಸುತ್ತಿದ್ದಾರೆ. ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತಿದೆ. ಅಲ್ಲಿ ರೈತರು ಹಸು ಮತ್ತು ಎಮ್ಮೆಗಳೊಂದಿಗೆ ಎತ್ತುಗಳನ್ನು ಸಾಕುತ್ತಿದ್ದಾರೆ.

- ಮಾರ್ತಾಂಡ ಮಾಚಕೂರಿ ಸಹಾಯಕ ಕೃಷಿ ನಿರ್ದೇಶಕ ಹುಲಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT