ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿ ರಕ್ಷಣೆಯೇ ಪರಿಷತ್ ಉದ್ದೇಶ: ಶಿವಲಿಂಗ ಹೇಡೆ

ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ‘ಫೇಸ್‍ಬುಕ್ ಲೈವ್’ ಕಾರ್ಯಕ್ರಮ
Last Updated 8 ಮೇ 2021, 3:52 IST
ಅಕ್ಷರ ಗಾತ್ರ

ಬೀದರ್: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕಟ್ಟಲಾದ ಸಂಸ್ಥೆ ಎಂದು ಸಂಪನ್ಮೂಲ ವ್ಯಕ್ತಿ ಶಿವಲಿಂಗ ಹೇಡೆ ನುಡಿದರು.

ನಗರದ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ‘ಫೇಸ್‍ಬುಕ್ ಲೈವ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1914 ರಲ್ಲಿ ನಡೆದ ಮೈಸೂರು ಸಂಪದಭ್ಯುದಯ ಸಮಾಜ ಸಮ್ಮೇಳನದಲ್ಲಿ ಪರಿಷತ್ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು. ಅದಕ್ಕಾಗಿ ರಾವ್ ಬಹದ್ದೂರ್, ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ.ಎಸ್. ಅಚ್ಯುತರಾವ್ ಅವರನ್ನು ಒಳಗೊಂಡ ಉಪ ಸಮಿತಿ ರಚಿಸಲಾಯಿತು. 1915 ರಲ್ಲಿ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸಲಾಯಿತು. 1935 ರಲ್ಲಿ ಅದನ್ನು ಕನ್ನಡ ಸಾಹಿತ್ಯ ಪರಿಷತ್ ಎಂದು ಬದಲಿಸಲಾಯಿತು ಎಂದು ಹೇಳಿದರು.

ಹಿಂದೆ ಕರ್ನಾಟಕವೇ ದೊಡ್ಡ ರಾಷ್ಟ್ರವಾಗಿತ್ತು. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರ ಆಳ್ವಿಕೆ ಕಾಲದಲ್ಲಿ ಈಗಿನ ಮಹಾರಾಷ್ಟ್ರವೂ ಒಳಗೊಂಡಂತೆ ವಿಶಾಲ ಭೂ ಪ್ರದೇಶವನ್ನು ಹೊಂದಿತ್ತು. ಬಾದಾಮಿಯ ಎರಡನೇ ಪುಲಕೇಶಿಯ ಕಾಲದಲ್ಲಿ ನರ್ಮದಾ ನದಿವರೆಗೂ ವಿಸ್ತರಿಸಿತು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಲ್ಕು ಸದಸ್ಯರಿಂದ ಆರಂಭವಾದ ಪರಿಷತ್ ಈಗ ಮೂರೂವರೆ ಲಕ್ಷ ಸದಸ್ಯರನ್ನು ಹೊಂದಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಪರಿಷತ್ ಪ್ರತಿ ವರ್ಷ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತ ಬಂದಿದೆ. ಈವರೆಗೆ 85 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದೆ. ಸಾಹಿತಿಗಳಿಗೆ ನೃಪತುಂಗ, ಚಾವುಂಡರಾಯ ಪ್ರಶಸ್ತಿಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ಕನ್ನಡ ನಾಡು, ನುಡಿಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಪರಿಷತ್ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಜನಮನವನ್ನು ಮುಟ್ಟುವ ಹಲವು ರಚನಾತ್ಮಕ ಕಾರ್ಯಗಳನ್ನು ಮಾಡಿದೆ ಎಂದು ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಹೇಳಿದರು.

ಕೋವಿಡ್ ಆರಂಭದಲ್ಲಿ ಮಾಸ್ಕ್, ಗಡಿಯಲ್ಲಿ ಉಚಿತ ಆಹಾರ ವಿತರಣೆ ಮಾಡಿತ್ತು. ಇದೀಗ ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಆಪ್ತ ಸಮಾಲೋಚನೆ, ಜೀವವಿದ್ದರೆ ಜೀವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಗಣೇಶ ಥೋರೆ ಉಪಸ್ಥಿತರಿದ್ದರು. ಉಪನ್ಯಾಸಕ ಜಗನ್ನಾಥ ಕಮಲಾಪುರೆ ನಿರೂಪಿಸಿದರು. ವೀರಶೆಟ್ಟಿ ಚನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT