ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಮಗಿರಿ ಮಾನಸಿಕತೆಯಿಂದ ಅಭಿಮಾನದ ಕೊರತೆ: ಬಾಲಮುಕುಂದ ಪಾಂಡೆ

Published 24 ಡಿಸೆಂಬರ್ 2023, 15:56 IST
Last Updated 24 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಬೀದರ್‌: ‘ಗುಲಾಮಗಿರಿ ಹಾಗೂ ಪಾಶ್ಚಿಮಾತ್ಯ ಮಾನಸಿಕತೆಯಿಂದ ನಮ್ಮಲ್ಲಿ ಅಭಿಮಾನದ ಕೊರತೆ ಉಂಟಾಗುತ್ತಿದೆ’ ಎಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ ರಾಷ್ಟ್ರೀಯ ಸಂಘಟನಾ ಮಂತ್ರಿ ಬಾಲಮುಕುಂದ ಪಾಂಡೆ ಹೇಳಿದರು.

ಭಾರತೀಯ ಇತಿಹಾಸ ಸಂಕಲನ ಸಮಿತಿ, ಸ್ವ-ಇತಿಹಾಸ,  ಸ್ವ-ಸಂಸ್ಕೃತಿ ಮತ್ತು ಸ್ವ-ಶಿಕ್ಷಣ ಕುರಿತು ನಗರದ ಜನಸೇವಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಅಭ್ಯಾಸ ವರ್ಗವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಭಾರತದ ನಾಗರಿಕತೆ ಹಾಗೂ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮಾನವ ಕಲ್ಯಾಣ ಭಾರತದಲ್ಲಿದೆ. ಭಾರತೀಯರಿಗೆ ತಮ್ಮ ನೈಜ ಇತಿಹಾಸ ಹಾಗೂ ಸಂಸ್ಕೃತಿಯ ಅರಿವಾದಾಗ ನಮ್ಮ ಅಂತಃಕರಣ ಶಕ್ತಿಯ ಅರಿವಾಗುತ್ತದೆ ಎಂದು ತಿಳಿಸಿದರು.

ಬ್ರಿಟಿಷರು ನಮ್ಮನ್ನು ಕಾರ್ಮಿಕರಾಗಿ ರೂಪಿಸಲು ನಮ್ಮ ಪೂರ್ವಜರ ಬಗ್ಗೆ ಕೀಳರಿಮೆ ಮೂಡಿಸುವ ರೀತಿಯಲ್ಲಿ ಇತಿಹಾಸ ಕಲಿಸಿದರು. ಬ್ರಿಟಿಷರ ರಹಸ್ಯ ಉದ್ದೇಶವನ್ನು ಈಡೇರಿಸಲು ಕೆಲವು ಸ್ವಾರ್ಥ ಇತಿಹಾಸಕಾರರು ಭಾರತದ ಮೂಲ ಇತಿಹಾಸ ಬರೆಯಲಿಲ್ಲ. ಬದಲಾಗಿ ಆಕ್ರಮಣಾಕಾರಿಗಳ, ಮೊಘಲರ, ಬ್ರಿಟಿಷರ ಆಡಳಿತದ ಇತಿಹಾಸ ಬರೆದು, ಪಠ್ಯದ ಮೂಲಕ ನಮ್ಮ ತಲೆಗೆ ತುಂಬಲಾಗಿದೆ. ಈಗ ನಮ್ಮ ನೈಜ ಇತಿಹಾಸ ಪರಿಚಯಿಸುವ ಕಾರ್ಯ ಭಾರತೀಯ ಇತಿಹಾಸ ಸಂಕಲನ ಸಮಿತಿ ಮಾಡುತ್ತಿದೆ ಎಂದರು.

‘ಹಿಂದುತ್ವ ಮತ್ತು ಇತಿಹಾಸ’ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ  ಕಾರ್ಯಕಾರಿಣಿ ಸದಸ್ಯ ರವೀಂದ್ರ ಮಾತನಾಡಿ,‘ಜಗತ್ತಿಗೆ ಜೀವನ ಮಾರ್ಗವನ್ನು ಭೋದಿಸಿದವರು ಭಾರತೀಯರು. ಜಗತ್ತಿನಲ್ಲಿ ಇತರೆ ನಾಗರಿಕತೆಗಳು ಬೆಳೆಯುವುದಕ್ಕೂ ಮುನ್ನ ಭಾರತದಲ್ಲಿ ನಾಗರಿಕತೆ ಪ್ರಬುದ್ಧವಾಗಿ ಬೆಳೆದಿತ್ತು. ಆದ ಕಾರಣ ಹಿಂದೂ ಧರ್ಮವನ್ನು ಸನಾತನ ಧರ್ಮ ಎನ್ನುವುದು. ಹಿಂದೂ ಧರ್ಮ ಎಂದರೆ ನಮ್ಮ ಸಂಸ್ಕೃತಿ, ನಮ್ಮ ರಾಷ್ಟ್ರೀಯತೆಯ ಮೂಲ. ಹಿಂದೂ ಧರ್ಮ ಇಡೀ ವಿಶ್ವಕ್ಕೆ ಮಾನವೀಯತೆ ಸಂದೇಶ ಭೋದಿಸುತ್ತದೆ’ ಎಂದು ವಿವರಿಸಿದರು.  

ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ ನವದೆಹಲಿಯ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ.ಎಂ.ಕೊಟ್ರೇಶ್ ಅವರು ‘ಭಾರತೀಯ ಇತಿಹಾಸದ ಸಂಶೋಧನೆಯ ಮೈಲಿಗಲ್ಲುಗಳು’ ಕುರಿತು ಮಾತನಾಡಿದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಅವರು ‘ಕಥನ’ (ನೆರೇಷನ್) ಕುರಿತು ಉಪನ್ಯಾಸ ನೀಡಿದರು.

ಇತಿಹಾಸ ಸಂಕಲನ ಸಮಿತಿ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಆರ್. ಅವರು ‘ಇತಿಹಾಸ ಸಂಕಲನ ಸಮಿತಿ ಧ್ಯೇಯೋದ್ದೇಶಗಳು’ ಕುರಿತು ವಿವರಿಸಿದರು.

ಪತ್ರಕರ್ತ ಸದಾನಂದ ಜೋಶಿ,  ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರ, ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಜ್ಯ ಗೌರವ ಅಧ್ಯಕ್ಷ ಸಂಜೀವ್ ರೆಡ್ಡಿ, ರಾಷ್ಟ್ರೀಯ ಮಹಿಳಾ ಪ್ರಮುಖ ಅನುರಾಧ ರಾಜಹಂಸ, ಉಪಾಧ್ಯಕ್ಷ ಶ್ರೀಶೈಲ ಬಿರಾದಾರ, ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಜ್ಯ ಅಧ್ಯಕ್ಷ ಸಂಜೀವ್ ರೆಡ್ಡಿ, ಸಹ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷ ಶ್ರೀಶೈಲ ಬಿರಾದಾರ, ಇತಿಹಾಸ ಪೋಷಕರಾದ ನಾಗರಾಜ ಕರ್ಪೂರ, ಶಿವಕುಮಾರ ವಿ.ಉಪ್ಪೆ, ಜಿಲ್ಲಾ ಸಂಚಾಲಕ ವೀರಶೆಟ್ಟಿ ಮೈಲೂರಕರ್, ಜಿಲ್ಲಾ ಅಧ್ಯಕ್ಷ ಸಂಜೀವಕುಮಾರ ತಾಂದಳೆ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT