ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಔರಾದ್: 50 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಸೋಯಾ ಬಿತ್ತನೆ; ಬೆಳೆ ವಿಮೆ ಮಾಡಿಸದ ಶೇ 30 ರಷ್ಟು ರೈತರು

ಕೈಕೊಟ್ಟ ಮಳೆ, ಸೋಯಾ ಬೆಳೆಗಾರರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಸೋಯಾ ಬೆಳೆದ ರೈತರು ಆತಂಕದಲ್ಲಿದ್ದಾರೆ.

ಕಳೆದ ತಿಂಗಳು 20ರ ನಂತರ ಮಳೆಯಾಗದೆ, ಬಿಸಿಲು ಗಾಳಿಯಿಂದಾಗಿ ಹೂ ಕಾಯಿ ಆಡುವ ಹಂತದಲ್ಲಿರುವ ಸೋಯಾ ಬೆಳೆ ಮೇಲೆ ಹೊಡೆತ ಬೀಳಲಾರಂಭಿಸಿದೆ. ಇದರಿಂದಾಗಿ ಸೋಯಾ ಬೆಳೆ ನೆಚ್ಚಿಕೊಂಡ ರೈತರಲ್ಲಿ ನಡುಕು ಶುರುವಾಗಿದೆ. ತಾಲ್ಲೂಕಿನ 80 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 50 ಸಾವಿರಕ್ಕೂ ಜಾಸ್ತಿ ಪ್ರದೇಶದಲ್ಲಿ ರೈತರು ಸೋಯಾ ಬಿತ್ತನೆ ಮಾಡಿದ್ದಾರೆ. ಇನ್ನು ಸ್ವಲ್ಪ ದಿನ ಮಳೆ ಬಾರದಿದ್ದರೆ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

‘ಜುಲೈ ತಿಂಗಳಲ್ಲಿ ಮಳೆ ಜಾಸ್ತಿಯಾಗಿ ತಗ್ಗು ಪ್ರದೇಶದಲ್ಲಿನ ಸೋಯಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಈಗ ಮಳೆ ಕೊರತೆಯಾಗಿ ಹೂ ಮೊಗ್ಗಿ ನೆಲಕ್ಕುರುಳುತ್ತಿವೆ. ಹೀಗಾಗಿ ತಾಲ್ಲೂಕಿನ ರೈತರು ಸಮಸ್ಯೆಯಲ್ಲಿದ್ದಾರೆ’ ಎಂದು ರೈತ ಮುಖಂಡ ರವೀಂದ್ರ ಮೀಸೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಜುಲೈ ತಿಂಗಳಲ್ಲಿ ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ ಸಾಕಷ್ಟು ರೈತರು ವಿಮೆ ಅರ್ಜಿ ತುಂಬಲು ಸಾಧ್ಯವಾಗಿಲ್ಲ. ಹೀಗಾಗಿ ಈ ತಿಂಗಳು ಕೊನೆಯ ತನಕ ವಿಮೆ ಮಾಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸಣ್ಣ ರೈತರ ಬಳಿ ವಿಮೆ ಕಂತು ತುಂಬಲು ಹಣವಿಲ್ಲ. ಈ ಕಾರಣ ಶೇ 30 ರಷ್ಟು ರೈತರು ವಿಮೆ ಮಾಡಿಸಿಲ್ಲ. ಅಂತಹ ರೈತರಿಗೆ ಸರ್ಕಾರದಿಂದಲೇ ವಿಮೆ ಮಾಡಿಸಬೇಕು. ಇಲ್ಲವೇ ಅವರಿಗೆ ಸರ್ಕಾರವೇ ಪರಿಹಾರ ಕೊಡಬೇಕು’ ಎಂದು ರಾಜ್ಯ ರೈತ ಸಂಘದ ಮುಖಂಡ ಶ್ರೀಮಂತ ಬಿರಾದಾರ ಆಗ್ರಹಿಸಿದ್ದಾರೆ.

‘ತಾಲ್ಲೂಕಿನ ಪ್ರಮುಖ ಬೆಳೆ ಸೋಯಾ, ಉದ್ದು, ಹೆಸರು, ತೊಗರಿ ಬೆಳೆಗೆ ಮಳೆ ಕೊರತೆಯಾಗಿದೆ. ನೀರಾವರಿ ಸೌಲಭ್ಯವಿರುವ ರೈತರು ಅದರ ಸದ್ಬಳಕೆ ಮಾಡಿಕೊಂಡು ಬೆಳೆಗಳಿಗೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿ ಇದ್ದರೆ ಇನ್ನು ಉತ್ತಮ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.