ಬೀದರ್: ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಅಬ್ಬರಕ್ಕೆ 687 ರೈತರ 528 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಯಾಗಿದೆ. ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬೀದರ್ ತಾಲ್ಲೂಕಿನ ರೈತರು ಅತಿ ಹೆಚ್ಚು ನಷ್ಟ ಅನುಭವಿಸಿದ್ದಾರೆ.
ಬೀದರ್ ತಾಲ್ಲೂಕಿನಲ್ಲಿ 210 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನೀರು ಪಾಲಾಗಿದೆ. 236 ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಟೊಮೊಟೊ 40 ಹೆಕ್ಟೇರ್, ಮೆಣಸಿನಕಾಯಿ 25 ಹೆಕ್ಟೇರ್, ಈರುಳ್ಳಿ 3 ಹೆಕ್ಟೇರ್, ಹೂಕೋಸು 10 ಹೆಕ್ಟೇರ್, ಶುಂಠಿ 85 ಹೆಕ್ಟೇರ್, ಪಪ್ಪಾಯಿ 3 ಹೆಕ್ಟೇರ್ ಹಾಗೂ ಇತರೆ ಬೆಳೆ ಸೇರಿ 210 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿ ಆಗಿದೆ.
ಭಾಲ್ಕಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 25.60 ಹೆಕ್ಟೇರ್ ಪಪ್ಪಾಯಿ, ಬಸವಕಲ್ಯಾಣದಲ್ಲಿ 5.60 ಹೆಕ್ಟೇರ್, ಬೀದರ್‌ನಲ್ಲಿ 3 ಹೆಕ್ಟೇರ್ ಹಾಗೂ ಕಮಲನಗರದಲ್ಲಿ 1 ಹೆಕ್ಟೇರ್ ಸೇರಿ ಒಟ್ಟು 35 ಹೆಕ್ಟೇರ್ ಪ್ರದೇಶದಲ್ಲಿನ ಪಪ್ಪಾಯಿ ಹಾಳಾಗಿದೆ. ಭಾಲ್ಕಿ, ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕಿನಲ್ಲಿ 12.40 ಹೆಕ್ಟೇರ್ ಪ್ರದೇಶದಲ್ಲಿನ ನುಗ್ಗೆ ಗಿಡಗಳು ನೆಲಕ್ಕುರುಳಿವೆ. ಹುಮನಾಬಾದ್ ತಾಲ್ಲೂಕಿನಲ್ಲಿ ಡ್ರ್ಯಾಗನ್ ಬೆಳೆ ಹಾಳಾಗಿದೆ
‘ಅತಿವೃಷ್ಟಿಗೆ ಶುಂಠಿ ಹಾಗೂ ಟೊಮೆಟೊ ಕೊಳೆತು ಹೋಗಿದೆ. ಶುಂಠಿ ಬೆಳೆದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಮುಂಗಾರು ಸರಿಯಾದ ಸಮಯಕ್ಕೆ ಆರಂಭವಾದರೂ ಜುಲೈ ಹಾಗೂ ಆಗಸ್ಟ್‌ನಲ್ಲಿ ಮಳೆ ಅಬ್ಬರಿಸಿ ರೈತರನ್ನು ಕಂಗಾಲು ಮಾಡಿದೆ. ನಾಟಿಗೆ ಮಾಡಿದ ಖರ್ಚು ಸಹ ಬಂದಿಲ್ಲ’ ಎಂದು ಬೀದರ್ ತಾಲ್ಲೂಕಿನ ಹೊನ್ನಿಕೇರಿಯ ರೈತ ರವೀಂದ್ರ ಪಾಟೀಲ ಬೇಸರ ವ್ಯಕ್ತಪಡಿಸಿದರು.
‘ಹುಮನಾಬಾದ್ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಶುಂಠಿ ಹಾಗೂ ಪಪ್ಪಾಯಿ ಹಾಳಾಗಿದೆ. ಘಾಟಬೋರಾಳ, ದುಬಲಗುಂಡಿ ಪರಿಸರದಲ್ಲಿನ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು ಶುಂಠಿ ಕೊಳೆತಿದೆ. ಬೆಳೆ ಕೈಗೆ ಬರುವ ಹಂತದಲ್ಲಿದ್ದಾಗಲೇ ನಷ್ಟವಾಗಿದೆ’ ಎಂದು ಹುಮನಾಬಾದ್ ತಾಲ್ಲೂಕಿನ ಸುಲ್ತಾನ್‌ಬಾದ್ ಗ್ರಾಮದ ರೈತ ಬಲವಂತ ಅಳಲು ತೋಡಿಕೊಂಡರು.
‘ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ಎಷ್ಟು ಹಾನಿಯಾಗಿದೆ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಸಂಪೂರ್ಣ ಸಮೀಕ್ಷೆ ನಡೆಸಿದ ನಂತರ ಹಿರಿಯ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಈಶ್ವರಸಿಂಗ್ ಪವಾರ್ ತಿಳಿಸಿದರು.
‘ಜಿಲ್ಲೆಯ ಎಂಟು ಪೈಕಿ ಆರು ತಾಲ್ಲೂಕುಗಳಲ್ಲಿ ಪ್ರಾಥಮಿಕ ಹಂತದ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಕೊಡಲಾಗಿದೆ. ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಯುತ್ತಿದೆ. ಕ್ರೋಢೀಕೃತ ವರದಿಯನ್ನು ಶೀಘ್ರದಲ್ಲೆ ಸರ್ಕಾರಕ್ಕೆ ಕಳಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಝಿಳ್ಳೆ ಹೇಳಿದರು.
ಪೂರಕ ಮಾಹಿತಿ: ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ಮಾಣಿಕ ಭುರೆ, ವೀರೇಶ ಮಠಪತಿ, ನಾಗೇಶ ಪ್ರಭಾ, ಮನೋಜಕುಮಾರ ಹಿರೇಮಠ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.