ಬೀದರ್: ತಾಲ್ಲೂಕಿನ ಹೊನ್ನಿಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪುನಃ ಚಿರತೆ ಕಾಣಿಸಿಕೊಂಡಿದೆ.
ಐದು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಸುತ್ತಮುತ್ತಲಿನ ಭಾಗದ ಜನ ಆತಂಕಕ್ಕೆ ಒಳಗಾಗಿದ್ದರು. ಈಗ ಮತ್ತೆ ಅದೇ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಅರಣ್ಯದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಜುಲೈ 25ರಂದು ಚಿರತೆಯ ಚಲನವಲನ ಸೆರೆಯಾಗಿದೆ.
‘ಐದು ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಗಂಡು ಚಿರತೆ ಮತ್ತೆ ಕ್ಯಾಮೆರಾದಲ್ಲಿ ಟ್ರ್ಯಾಪ್ ಆಗಿದೆ. ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಮೊಲ, ಜಿಂಕೆ, ಕಾಡು ಹಂದಿಗಳು ಯಥೇಚ್ಛವಾಗಿದ್ದು, ಅವುಗಳನ್ನು ಬೇಟೆಯಾಡುತ್ತಿದೆ. ಜನರ ಮೇಲೆ ದಾಳಿ ನಡೆಸಿಲ್ಲ. ಜನವಸತಿ ಪ್ರದೇಶಗಳ ಸಮೀಪವೂ ಹೋಗಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈ ಚಿರತೆ ತೆಲಂಗಾಣ ಅರಣ್ಯ ಪ್ರದೇಶದಿಂದ ಔರಾದ್, ಜನವಾಡ, ಖಾನಾಪುರ ಮೂಲಕ ಹೊನ್ನಿಕೇರಿ ಅರಣ್ಯ ಪ್ರದೇಶ ಸೇರಿದೆ. ಏಕೆಂದರೆ ಈ ಭಾಗದಲ್ಲೆಲ್ಲಾ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.
ಖಂಡ್ರೆ ಮನವಿ: ಹೊನ್ನಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ವಾರದ ಹಿಂದೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮನವಿ ಮಾಡಿದ್ದಾರೆ. ಸುತ್ತಮುತ್ತಲಿನ ಗ್ರಾಮ, ರಸ್ತೆಗಳ ಬಳಿ ಎಚ್ಚರಿಕೆ ಫಲಕಗಳನ್ನು ಹಾಕಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂಬ ವಿವರವನ್ನು ಅವರ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.