ಸೋಮವಾರ, ಏಪ್ರಿಲ್ 12, 2021
32 °C
ವಿಜ್ಞಾನಿ ಡಾ.ಎಂ.ಎಸ್. ಜೋಗದ ಹೇಳಿಕೆ

ಅಭಿವೃದ್ಧಿಗೆ ವಿಜ್ಞಾನ ಬಳಕೆಯಾಗಲಿ: ಡಾ.ಎಂ.ಎಸ್. ಜೋಗದ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ವಿಶ್ವಶಾಂತಿ ಹಾಗೂ ಅಭಿವೃದ್ಧಿಗಾಗಿ ವಿಜ್ಞಾನ ಬಳಕೆಯಾಗಬೇಕು. ಅದರಿಂದ ಮನುಕುಲದ ಕಲ್ಯಾಣ ಆಗಬೇಕು’ ಎಂದು ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಎಂ.ಎಸ್. ಜೋಗದ ನುಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಇಲ್ಲಿಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ 13ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನಗಳಲ್ಲಿ ವಿಜ್ಞಾನ ಸಮ್ಮಿಳಿತವಾಗಿದೆ. ಬಸವಾದಿ ಶರಣರು ತಮ್ಮ ವಚನಗಳಲ್ಲಿ ವೈಜ್ಞಾನಿಕ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶರಣರು ವಿಜ್ಞಾನವನ್ನು ಶಾಂತಿಗಾಗಿ ಬಳಸಿಕೊಂಡಿದ್ದು ಗಮನಾರ್ಹ. ಆದರೆ ವಿಶ್ವದಲ್ಲಿ ಇಂದಿನ ದಿವಸ ವಿಜ್ಞಾನವನ್ನು ಶಾಂತಿಗಾಗಿ ಬಳಸದೆ, ಕ್ರಾಂತಿಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ’ ಎಂದರು.

‘ವಿಜ್ಞಾನ ಹರಿಯುವ ನೀರು. ಹಿಂದಿನ ವಿಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮ್ಮಿಲನ ಮಾಡಿ ಶಿಕ್ಷಕರು ಮಕ್ಕಳಿಗೆ ಬೋಧಿಸಬೇಕು’ ಎಂದು ಸಲಹೆ ನೀಡಿದರು.

‘ವಿಜ್ಞಾನ ಎಂದರೆ ಸತ್ಯ. ಸತ್ಯಘಟನೆಗಳನ್ನು ಗುರುಗಳು ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಹೃದಯ ಸ್ಪರ್ಶಿಸುವಂತೆ ಬೋಧಿಸಬೇಕು. ವಿಜ್ಞಾನದ ಬಗ್ಗೆ ಧನಾತ್ಮಕ ಚಿಂತನೆ ಮಾಡಬೇಕು. ವಿಜ್ಞಾನದ ಜತೆಗೆ ಮಕ್ಕಳಿಗೆ ದೇಶಭಕ್ತಿ, ರಾಷ್ಟ್ರಪ್ರಜ್ಞೆ ಮತ್ತು ದೇಶಾಭಿವೃದ್ಧಿ ಬಗ್ಗೆ ತಿಳಿಸಿದಾಗ ಮಾತ್ರ ವಿಜ್ಞಾನ ಬೋಧನೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೆಮೊರಿಯಲ್‍ನ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಎಸ್. ಮಾತನಾಡಿ, ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು, ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಬೆಳೆಸಲು ನಿರಂತರ ಪ್ರಯತ್ನ ಮಾಡುತ್ತಿದೆ’ ಎಂದರು.

‘ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವ ದಿಸೆಯಲ್ಲಿ ನಿರಂತರ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಪರಿಷತ್ತಿನ ಕಾರ್ಯ ಪ್ರಶಂಸನೀಯ. ವಿಜ್ಞಾನಿಗಳು, ಶಿಕ್ಷಕರು ಮತ್ತು ಆಸಕ್ತರನ್ನು ಒಂದೇ ವೇದಿಕೆ ಮೇಲೆ ಸೇರಿಸಿ, ಚಿಂತನ ಮಂಥನ ಮಾಡಿಸುತ್ತಿರುವುದು ಖುಷಿ ತಂದಿದೆ’ ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ‘ಬಸವಣ್ಣನವರ ಕಾಲದಲ್ಲಿ ಹಾಗೂ ಮಹಮೂದರ್ ಗವಾನ್ ಅವರ ಸಮಯದಲ್ಲಿ ವಿಶ್ವದ ಜನರು ಇಲ್ಲಿಗೆ ಶಿಕ್ಷಣ ಪಡೆಯಲು ಆಗಮಿಸುತ್ತಿದ್ದರು. ಇದೀಗ ಮತ್ತೆ ಬೀದರ್‌ಗೆ ಬರುತ್ತಿರುವುದು ಶ್ಲಾಘನೀಯ’ ಎಂದರು.

‘ವಿಜ್ಞಾನ ಶಿಕ್ಷಕರು ಮಕ್ಕಳ ಮೂಲ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ನೀಡಿ, ನಂತರ ವಿಜ್ಞಾನ ಬೋಧನೆ ಮಾಡಬೇಕು. ಅಂದಾಗ ಮಾತ್ರ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ತೋರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಶಾಲೆಯ ಮಕ್ಕಳು ಅಶಕ್ತರಲ್ಲ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ತಿಳಿದು ಬೋಧಿಸಿದರೆ ಖಂಡಿತ ಅವರು ಯಶಸ್ವಿಯಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಪಾಟೀಲ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೆವಾಡ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಮಹಾರುದ್ರಪ್ಪ ಆಣದೂರೆ ಮಾತನಾಡಿದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ, ಪಾಂಡುರಂಗ ಬೆಲ್ದಾರ್, ದೇವಿಪ್ರಸಾದ ಕಲಾಲ, ಸಂಜೀವಕುಮಾರ ಸ್ವಾಮಿ, ಮಂಜುನಾಥ ಬೆಳಕೆರೆ, ಬಸವರಾಜ ದೇಶಮುಖ, ಗುಂಡಪ್ಪ ಹುಡಗೆ, ಸಂತೋಷ ಮಂಗಳೂರೆ ಇದ್ದರು.

ಮಾನಸ ಪಾಂಚಾಳ ಹಾಗೂ ಸಂಗಡಿಗರು ವಿಜ್ಞಾನ ಗೀತೆ ಮತ್ತು ನಾಡಗೀತೆ ಹಾಡಿದರು. ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.

ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಲಕಶೆಟ್ಟಿ ಸ್ವಾಗತಿಸಿದರು. ಸಾಹಿತಿ ಶೈಲಜಾ ಹುಡಗೆ ನಿರೂಪಿಸಿದರು. ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ್ ದಾನಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು