ಗುರುವಾರ , ಆಗಸ್ಟ್ 11, 2022
24 °C
ಖಾಸಗಿ ಕಂಪನಿ ಬೊಕ್ಕಸ ಸೇರುತ್ತಿದೆ ರೈತರ ಹಣ; ಕೃಷಿ ಇಲಾಖೆ ಕಂತು ಸಂಗ್ರಹಿಸಲು ಬೇಡಿಕೆ

ಬೀದರ್: ಬೆಳೆ ವಿಮೆ ಸಂಸ್ಥೆ ಸರ್ಕಾರದ್ದೇ ಇರಲಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ರೈತರ ಅನುಕೂಲಕ್ಕಾಗಿಯೇ ಇರುವ ಬೆಳೆ ವಿಮೆಯ ಬಹುತೇಕ ಕಂತು ಬೆಳೆ ವಿಮಾ ಕಂಪನಿಗಳ ಬೊಕ್ಕಸ ಸೇರುತ್ತಿರುವ ಕಾರಣ ಕೃಷಿಕರಿಗೆ ಹೆಚ್ಚು ಅನುಕೂಲವಾಗುತ್ತಿಲ್ಲ. ವಿಮೆ ಕಂಪನಿಗಳಿಗೆ ಲಾಭ ಮಾಡಿಕೊಡುವ ಬದಲು ಕೃಷಿ ಇಲಾಖೆಯೇ ನೇರವಾಗಿ ಕಂತು ಸಂಗ್ರಹಿಸುವ ಮೂಲಕ ರೈತರ ಹಣ ಸರ್ಕಾರದ ಖಾತೆಯಲ್ಲೇ ಉಳಿಯುವಂತೆ ಮಾಡಬೇಕು ಎನ್ನುವ ರೈತರ ಬೇಡಿಕೆ ಮುನ್ನೆಲೆಗೆ ಬಂದಿದೆ.

ಪ್ರಸಕ್ತ ವರ್ಷ ಬೀದರ್‌ ಜಿಲ್ಲೆಯಲ್ಲಿ 2,13,153 ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 50 ಸಾವಿರ ರೈತರು ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕಿದ್ದಾರೆ. ಕಳೆದ ವರ್ಷ ಸಮಸ್ಯೆಯಾಗಿಲ್ಲ. ಹೀಗಾಗಿ ಬೆಳೆ ವಿಮೆ ಪರಿಹಾರ ಪಾವತಿಯಾಗಿಲ್ಲ. ಮುಂಬೈನ ಎಚ್‌ಡಿಎಫ್‌ಸಿ ಇರ್ಗೋ ಜನರಲ್‌ ಇನ್ಶುರನ್ಸ್‌ ಕಂಪನಿ ರೈತರ ಬೆಳೆ ವಿಮೆ ಭರಿಸಿಕೊಂಡಿತ್ತು. ಈ ವರ್ಷ ಯುನಿವರ್ಸಲ್‌ ಸೊಪ್ಕೊ ಜಿಐಸಿ ಕಂಪನಿಗೆ‌ ಹೊಣೆ ವಹಿಸಲಾಗಿದೆ.

‘2019-20ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ (ಪಿಎಂಎಫ್‌ಬಿಐ) ಅಡಿ ಒಟ್ಟು ಸಂಗ್ರಹವಾದ ಪ್ರಿಮಿಯಂ ಮೊತ್ತ ₹31,391 ಕೋಟಿ ಪೈಕಿ ₹16,325 ಕೋಟಿ ವಿಮಾ ಕಂಪನಿಗಳ ಪಾಲಾಗಿದೆ. ಅದರಲ್ಲೂ ಎಐಸಿ ಕಂಪನಿಯೊಂದೇ ₹13,651 ಕೋಟಿ ಪ್ರೀಮಿಯಂ ಬಾಚಿಕೊಂಡಿದೆ. ಸರ್ಕಾರ ರೈತರಿಂದ ಬೆಳೆ ವಿಮೆ ಪ್ರಿಮಿಯಂ ಭರಿಸಿಕೊಂಡಿದ್ದರೆ ಹಣ ಸರ್ಕಾರದ ಬಳಿಯೇ ಉಳಿಯಿತ್ತಿತ್ತು. ಇದೇ ಹಣದಲ್ಲಿ ರೈತರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು’ ಎಂದು ಕೆಲ ರೈತರು ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್ ಸೋಂಕು ಹರಡುವಿಕೆ ಭಯದಿಂದಾಗಿಯೇ ಈ ಬಾರಿ ಅನೇಕ ರೈತರು ಬೆಳೆ ವಿಮೆ ಪ್ರಿಮಿಯಂ ಪಾವತಿಸಿಲ್ಲ. ಕೇಂದ್ರ ಸರ್ಕಾರ ಯೋಜನೆ ಉದ್ದೇಶ ಚೆನ್ನಾಗಿಯೇ ಇರಬಹುದು. ಆದರೆ, ರೈತರು ಕೆಲ ವಿಮಾ ಕಂಪನಿಗಳ ತಂತ್ರದಿಂದಾಗಿ ಮೋಸಕ್ಕೊಳಗಾಗುತ್ತಿದ್ದಾರೆ. 2018ರಲ್ಲಿ ಜಿಲ್ಲೆಯ ರೈತರು 12 ದಿನ ಧರಣಿ ಸತ್ಯಾಗ್ರಹ ನಡೆಸಿದ ಕಾರಣ ಜಿಲ್ಲೆಯ ರೈತರಿಗೆ ₹138 ಕೋಟಿ ಬೆಳೆ ವಿಮೆ ಬಂದಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳುತ್ತಾರೆ.

‘ವಿಮಾ ಕಂಪನಿಗಳು ಪ್ರಿಮಿಯಂ ಪಾವತಿ ಸಂದರ್ಭದಲ್ಲಿ ನಿಬಂಧನೆಗಳ ಬಗ್ಗೆ ಸರಿಯಾಗಿ ಹೇಳುವುದೇ ಇಲ್ಲ. ಬೆಳೆ ವಿಮೆ ಪರಿಹಾರ ಕೊಡುವ ಸಂದರ್ಭ ಬಂದಾಗ ಹಲವು ಕಾರಣಗಳನ್ನು ನೀಡಿ ಪರಿಹಾರ ಪಾವತಿಸಲು ನಿರಾಕರಿಸುತ್ತವೆ. ನನ್ನ ಮಾಹಿತಿ ಪ್ರಕಾರ ಕಳೆದ ವರ್ಷ ರಾಜ್ಯದ ರೈತರು ₹10 ಸಾವಿರ ಕೋಟಿ ಪಾವತಿಸಿದ್ದಾರೆ. ಈ ಪೈಕಿ ರೈತರಿಗೆ ₹1 ಸಾವಿರ ಕೋಟಿ ಮಾತ್ರ ಪರಿಹಾರ ಕೊಡಲಾಗಿದೆ. ₹9 ಸಾವಿರ ಕಂಪನಿ ಬೊಕ್ಕಸ ಸೇರಿದೆ. ಈ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡರೆ ಸರ್ಕಾರಕ್ಕೂ ಹಾನಿಯಾಗುವುದಿಲ್ಲ’ ಎನ್ನುತ್ತಾರೆ ಅವರು.

‘ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಜವಾಬ್ದಾರಿ ವಹಿಸಿದೆ. ವಿಮಾ ಕಂಪನಿಗಳು ತಾಲ್ಲೂಕುಗಳಿಗೆ ಇಂದಿಗೂ ನೋಡೆಲ್‌ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಕಂಪನಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಲು ಸಾಧ್ಯವಾಗದಿದ್ದರೆ ರೈತರು ಕಚೇರಿಗೆ ಬಂದು ಅರ್ಜಿ ಕೊಡಲು ಸಾಧ್ಯವಾಗುವಂತಹ ವ್ಯವಸ್ಥೆ ಮಾಡಬೇಕು’ ಎಂದು ಹೇಳುತ್ತಾರೆ.

‘2016ರಿಂದ ಈವರೆಗೆ ರೈತರು ಮತ್ತು ಸರ್ಕಾರಗಳು ವಿಮೆ ಪ್ರಿಮಿಯಂ ಮೊತ್ತವಾಗಿ ಪಾವತಿಸಿದ ಹಣಕ್ಕೆ ಹೋಲಿಸಿದರೆ, ವಿಮಾ ಕಂಪನಿಗಳು ಬೆಳೆ ನಷ್ಟ ಪರಿಹಾರ ನೀಡಿದ ಮೊತ್ತ ಬಹಳ ಕಡಿಮೆ ಇದೆ. ಯೋಜನೆಗಳು ವಿಮಾ ಕಂಪನಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಬಾರದು’ ಎನ್ನುತ್ತಾರೆ ಅವರು.

‘ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳೆ ವಿಮೆ ಯೋಜನೆ ಬೀದರ್‌ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲವಾಗಿದೆ. 2017 ಹಾಗೂ 2018ರಲ್ಲಿ ಜಿಲ್ಲೆಯ ರೈತರು ಅತಿ ಹೆಚ್ಚು ಬೆಳೆ ಪರಿಹಾರ ಪಡೆದಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿ ವಿಮಾ ಕಚೇರಿ ತೆರೆಯಬೇಕು ಎನ್ನುವ ಬೇಡಿಕೆ ಇದೆ. ಈಗಾಗಲೇ ವಿಮಾ ಕಂಪನಿ ಒಪ್ಪಿಗೆ ನೀಡಿರುವ ಮಾಹಿತಿ ಇದೆ. ಶೀಘ್ರದಲ್ಲಿ ಕಚೇರಿಗಳೂ ಆರಂಭವಾಗಲಿವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌. ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು