ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಸ್ಪಂದಿಸುವ ಸಾಹಿತ್ಯ ರಚನೆಯಾಗಲಿ

ಕನಕಗಿರಿಯ ಗಜಲ್ ಕವಿ ಅಲ್ಲಾ ಗಿರಿರಾಜ್ ಅಭಿಮತ
Last Updated 29 ನವೆಂಬರ್ 2020, 15:33 IST
ಅಕ್ಷರ ಗಾತ್ರ

ಬೀದರ್: ‘ಜನರ ಬದುಕಿಗೆ ಸ್ಪಂದಿಸುವ ರೀತಿಯಲ್ಲಿ ಸಾಹಿತ್ಯ ರಚಿಸಿದಾಗ ಮಾತ್ರ ಸಾಹಿತ್ಯವು ಬಹು ಕಾಲದವರೆಗೆ ಓದುಗರ ಮನದಾಳದಲ್ಲಿ ಇರಲು ಸಾಧ್ಯ’ ಎಂದು ಕನಕಗಿರಿಯ ಗಜಲ್ ಕವಿ ಅಲ್ಲಾ ಗಿರಿರಾಜ್ ಅಭಿಪ್ರಾಯಪಟ್ಟರು.

ನಗರದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಬೆಳಗಾವಿಯ ಗಜಲ್ ಕವಿ ನಾಗೇಶ ನಾಯಕ ಅವರ ‘ಗರೀಬನ ಜೋಳಿಗೆ’ ಗಜಲ್ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರಶಸ್ತಿಗಾಗಿ ಸಾಹಿತ್ಯ ರಚಿಸುವುದು ಬೇಡ. ಬೇರೆ ಬೇರೆ ಭಾಷೆಗಳ ಪ್ರಭಾವದ ಮಧ್ಯೆಯೂ ಗಡಿನಾಡಿನಲ್ಲಿ ಸಾಹಿತ್ಯ ನಿರಂತರವಾಗಿ ಉಳಿದು ಬೆಳೆದುಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಸಂಕಲನ ಪರಿಚಯಿಸಿದ ಕಲಬುರ್ಗಿಯ ಕವಿ ಸಿ.ಎಸ್ ಆನಂದ, ‘ಸವದತ್ತಿಯ ನಾಗೇಶ್ ನಾಯಕ ಅವರ ಗರೀಬನ ಜೋಳಿಗೆ ಗಜಲ್ ಸಂಕಲನವು 70 ಗಜಲ್‌‌‌ಗಳಿಂದ ಕೂಡಿದ್ದು, ಅತ್ಯಂತ ಅರ್ಥಪೂರ್ಣ ಹಾಗೂ ಮೌಲಿಕವಾದ ಚಿಂತನೆ ಒಳಗೊಂಡಿದೆ. ಜೀವಪರ ಜನಪರ ಕಾಳಜಿಯುಳ್ಳ ಚಿಂತನೆಗಳು ಸಂಕಲನದಲ್ಲಿ ಇವೆ’ ಎಂದರು.

ಕಲಬುರ್ಗಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಾರ್ಯಾಲಯದ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಜಿ. ಬಾಬುರಾವ್ ಮಾತನಾಡಿ, ‘ಹಲವು ಭಾಷೆಗಳನ್ನು ಬಳಸುವ ಜನರಿಂದ ಕೂಡಿರುವ ಗಡಿ ಜಿಲ್ಲೆಯಾದ ಬೀದರ್ ಸೌಹಾರ್ದತೆಯ ಬದುಕಿಗೆ ಹೆಸರಾಗಿದೆ, ಕನ್ನಡ ಬಳಕೆ ಹೆಚ್ಚಾಗಿ ಮಾಡಿದಾಗ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಿದೆ’ ಎಂದು ತಿಳಿಸಿದರು.

ಕವಿ ನಾಗೇಶ್ ಜೆ.ನಾಯಕರು ಮಾತನಾಡಿ, ‘ಗಜಲ್ ಎಂದರೆ ಮನಸುಗಳನ್ನು ಕೂಡಿಸುವ ಅದ್ಭುತ ಶಕ್ತಿ ಹೊಂದಿರುವ ಸಾಹಿತ್ಯವಾಗಿದೆ. ನನ್ನ ಸಂಕಲನದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಮಿಡಿಯುವ, ಶೋಷಿತರ ಪರ ಕಂಬನಿ ಗೆರೆಯುವ ಅಂತಃಕರಣದ ವಿಷಯ ವಸ್ತು ಉಳ್ಳ ಗಜಲ್ ಗಳು ಇವೆ’ ಎಂದು ಹೇಳಿದರು.

ಬೆಳಗು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ಅನಿಲಕುಮಾರ್ ದೇಶಮುಖ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಂ.ಪಿ.ಮುಧಾಳೆ ಮಾತನಾಡಿದರು.

ಕರುನಾಡು ಸಾಹಿತ್ಯ- ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ. ಶಾಮರಾವ್ ನೆಲವಾಡೆ ಅಧ್ಯಕ್ಷತೆ ವಹಿಸಿದ್ದರು. ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಆಶಯ ನುಡಿ ಆಡಿದರು.

ಓಂಪ್ರಕಾಶ ಧಡ್ಡೆ, ರಮೇಶ್ ಬಿರಾದಾರ್, ಪಾರ್ವತಿ ಸೋನಾರೆ, ಡಾ. ನಾಗಶಟ್ಟಿ ಪಾಟೀಲ್ ಗಾದಗಿ, ಶ್ರೇಯಾ ಮಹೇಂದ್ರಕರ, ಸುನೀತಾ ಬಿರಾದಾರ್, ಕುಸುಮಾ ಹತ್ಯಾಳ್, ಮಂಗಲಾ ಪೋಳ್, ಕೀರ್ತಿಲತಾ ಹೊಸಾಳೆ, ಅಜೀತ ನೆಳಗೆ, ನಾಗೇಶ್ ಸ್ವಾಮಿ, ವಿದ್ಯಾವತಿ ಹಿರೇಮಠ, ಪ್ರಿಯಾ ಲಂಜವಾಡಕರ್, ಸಂತೋಷ್ ಕುಮಾರ್ ಸುಂಕದ, ಮುರಳಿನಾಥ ಮೇತ್ರೆ, ಮಾರುತಿ ಮಾಸ್ಟರ್, ಮಾಯಾದೇವಿ ಗೋಖಲೆ, ಬುದ್ಧದೇವಿ ಸಂಗಮ, ಶೈಲಜಾ ಹುಡುಗೆ, ವೈಜಿನಾಥ ಬಾಬಶಟ್ಟೆ, ದಿಲೀಪ ತರನಳ್ಳಿ, ಬಿ.ಎಂ.ಶಶಿಕಲಾ,ರವಿದಾಸ ಕಾಂಬ್ಳೆ, ಅಭಯ ಬಿದ್ರೆ, ಸ್ವರಚಿತ ಕವನ ವಾಚಿಸಿದರು.

ರವೀಂದ್ರ ಲಂಜವಾಡಕರ ಸ್ವಾಗತಿಸಿದರು, ದೇವಿದಾಸ ಜೋಶಿ ನಿರೂಪಿಸಿದರು, ಅಜೀತ ನೆಳಗೆ ವಂದಿಸಿದರು. ಆಶರಾಣಿ ನೆಲವಾಡೆ ಪ್ರಾರ್ಥನೆ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT