ಬೀದರ್: ಬಹು ಸಂಸ್ಕೃತಿ, ಬಹು ಭಾಷಿಕರ ನಾಡು ಬೀದರ್. ಕರ್ನಾಟಕದ ಮಟ್ಟಿಗೆ ಇದೊಂದು ಮಿನಿ ಭಾರತ. ಸಹಿಷ್ಣುತೆ ಈ ನೆಲದ ಗುಣ. ಅದರ ದುರ್ಬಳಕೆ ಮಾಡಿಕೊಂಡೇ ಹೊರಗಿನವರು ಇಲ್ಲಿ ಆಳಿ ಹೋದರು. ಆದರೂ ಇಲ್ಲಿಯ ಜನ ನೆಲ ಮೂಲದ ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿದರು. ಸಂಸ್ಕೃತಿಯೇ ಪ್ರೀತಿ, ಸಂಸ್ಕೃತಿಯೇ ನೀತಿಯಾಗಬೇಕು ಎಂದು ನಿರೂಪಿಸಿದರು. ಆದರೆ, ಸಾಂಸ್ಥಿಕ ಸಂಘಟನೆಗಳ ರಾಜಕೀಯದಿಂದಾಗಿ ‘ಸಾಹಿತ್ಯಿಕ ಸಂಸ್ಕೃತಿ’ ಯೇ ದಾರಿ ತಪ್ಪುತ್ತಿದೆ.
ದಖ್ಖನ್ ಇತಿಹಾಸದಲ್ಲಿ ಬೀದರ್ ಪ್ರಸಿದ್ಧಿ ಪಡೆದಿತ್ತು. ಹಲವು ಶತಮಾನಗಳ ನಿರ್ಲಕ್ಷ್ಯದ ಪರಿಣಾಮ ಸಾಂಸ್ಕೃತಿಕ ಸಿರಿವಂತಿಕೆ ನೆಲಕಚ್ಚಿದ ನಂತರ ನೆನಪು ಮಾತ್ರ ಉಳಿದಿದೆ. ಈಗ ಇಲ್ಲಿನ ಸ್ಮಾರಕಗಳೇ ಕತೆ ಹೇಳುತ್ತಿವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ನೆಲದಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಿದೆ. ಬಹಮನಿ ಸುಲ್ತಾನರು, ಬರೀದ್‌ಶಾಹಿ, ಆದಿಲ್‌ಶಾಹಿಗಳು, ಹೈದರಾಬಾದ್ ನಿಜಾಮರು, ಮರಾಠರು ಆಳಿ ಹೋದರೂ ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇಲ್ಲಿಯ ಜನ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ.
ಸಾಹಿತ್ಯಿಕ ಜಾಗೃತಿ
ಬೀದರ್ ಜಿಲ್ಲೆಯಲ್ಲಿ ಸಾಹಿತ್ಯಿಕ ಸಂಘಟನೆಗಳು ಸಹ ನೆಲ ಮೂಲದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಗಡಿನಾಡಿಗೆ ಕನ್ನಡ ಸಾಹಿತ್ಯಿಕ ಸಂಘಟನೆಗಳು ನೀಡಿದ ಕೊಡುಗೆ ಮರೆಯುವಂತಿಲ್ಲ.
ಕನ್ನಡ ಶಕ್ತಿ ಕೇಂದ್ರ, ಪ್ರಭುರಾವ್ ಕಂಬಳಿವಾಲೆ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಸಂಘ, ಕುವೆಂಪು ಕನ್ನಡ ಸಂಘ, ಧರಿನಾಡು ಕನ್ನಡ ಸಾಹಿತ್ಯ ಸಂಘ, ಕರ್ನಾಟಕ ಲೇಖಕಿಯರ ಸಂಘ, ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ, ಕರುನಾಡು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು, ಕರ್ನಾಟಕ ಬರಹಗಾರರ ಸಂಘ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಚುಟುಕು ಸಾಹಿತ್ಯ ಪರಿಷತ್ತು, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ಬೌದ್ಧ ಸಾಹಿತ್ಯ ಪರಿಷತ್ತು, ಮಂದಾರ ಕಲಾವಿದರ ವೇದಿಕೆ. ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್, ಪಂಚಾಕ್ಷರ ಗವಾಯಿ ಸೇವಾ ಸಂಘ, ರೆವರೆಂಡ್ ಡಾ.ಜೆ. ಟಿ.ಸೀಮಂಡ್ಸ್ ಸಾಹಿತ್ಯ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಘಟಕಗಳು ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಕನ್ನಡ ಉಳಿಸಿ ಬೆಳೆಸಲು ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿವೆ.
ಕನ್ನಡ ಸಾಹಿತ್ಯ ಪರಿಷತ್ತು ಈ ಸಾಹಿತ್ಯಿಕ ಸಂಘ ಸಂಸ್ಥೆಗಳಿಗೆ ಹಿರಿಯಣ್ಣನ ಸ್ಥಾನದಲ್ಲಿದೆ. ತಾಲ್ಲೂಕು ಘಟಕಗಳು ಸಾಹಿತ್ಯ, ಸಂಸ್ಕೃತಿಯನ್ನೇ ಪರಿಗಣನೆಗೆ ತೆಗೆದುಕೊಳ್ಳದ ಸ್ಥಿತಿಗೆ ತಲುಪಿವೆ. ಒಂದು ಘಟಕ ಮಾತ್ರ ಸಾಹಿತಿಗಳನ್ನಲ್ಲದೇ ಯಾರಿಗೂ ಮಣೆ ಹಾಕದೇ ಬದ್ಧತೆ ಪ್ರದರ್ಶಿಸಿದೆ. ಇನ್ನೊಂದು ಘಟಕ ನಿಯಮಾವಳಿಗಳನ್ನೇ ಗಾಳಿಗೆ ತೂರಿದೆ. ಸಾಹಿತ್ಯಿಕ ಶಿಸ್ತು ಕುಸಿದಿರುವುದು ಹಲವು ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಯಾರೊಬ್ಬರೂ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
‘ಸಾಹಿತಿಗಳನ್ನು ಗೌರವಿಸಿ ಬೆಳೆಸಬೇಕಾದವರೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಸಿದ್ಧೇಶ್ವರ ಶ್ರೀಗಳು ಪದ್ಮಶ್ರೀ ಪ್ರಶಸ್ತಿ ಪಡೆಯದೇ ದೊಡ್ಡವರಾದರು. ಅವರಂತೆ ಸ್ವಾಮೀಜಿಗಳು ಸಮಾಜಕ್ಕೆ ಆದರ್ಶವಾಗಬೇಕು’ ಎಂದು ಬೀದರ್ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ರಮೇಶ ಬಿರಾದಾರ ಹೇಳುತ್ತಾರೆ.
‘ಕನ್ನಡ ಕಟ್ಟಿದವರು ಅಂದರೆ ಬರಹ ರೂಪದಲ್ಲಿ (ಕೃತಿ ರಚಿಸಿ) ಸೇವೆ ಸಲ್ಲಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಅನುಭವಿಗಳು ಎಂದೇ ಅರ್ಥ. ಸಾಹಿತಿಗಳನ್ನೇ ಮೂಲೆಗುಂಪು ಮಾಡಿದರೆ ಕನ್ನಡ ಸಾರಸ್ವತ ಲೋಕವನ್ನು ಬೆಳೆಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಬಸವಕಲ್ಯಾಣದ ಸಾಹಿತಿ ಮಚ್ಚೇಂದ್ರ ಅಣಕಲ್.
‘ಗಡಿನಾಡಿನಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿರುವುದನ್ನು ಯಾರೂ ಮರೆಯುವಂತಿಲ್ಲ’ ಎಂದು ಅತಿವಾಳೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಸಂಜೀವಕುಮಾರ ಅತಿವಾಳೆ ಅಭಿಪ್ರಾಯ ಪಡುತ್ತಾರೆ.
‘ಗಡಿನಾಡಿನಲ್ಲಿ ಒಂದು ಶತಮಾನ ಪೂರ್ತಿ ಕನ್ನಡ ಅಕ್ಷರ ಬಿತ್ತಿದ ಶ್ರೇಯಸ್ಸು ಕ್ರೈಸ್ತ ಮಿಷನರಿಗಳಿಗೆ ಸಲ್ಲುತ್ತದೆ. ಮಿಷನರಿಗಳು ಸ್ಥಾಪಿಸಿದ ಸಂಸ್ಥೆಗಳು ಇಂದು ಕನ್ನಡ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ರೆವರೆಂಡ್ ಡಾ.ಜೆ. ಟಿ. ಸೀಮಂಡ್ಸ್ ಸಾಹಿತ್ಯ ಸಂಘದ ಬಿ.ಕೆ. ಸುಂದರರಾಜ ಹೇಳುತ್ತಾರೆ.
ಶತಮಾನದ ಹಿಂದೆಯೇ ಶಾಲೆ ಆರಂಭಿಸಿದ್ದ ಕ್ರೈಸ್ತರು, ಮುಸ್ಲಿಮರು
ಮುಂಬೈ ಕರ್ನಾಟಕದಲ್ಲಿ ಕೊಲ್ಹಾಪುರದ ಶಾಹು ಮಹಾರಾಜರ ಕೃಪೆಯಿಂದಾಗಿ ಮರಾಠಿ ಶಾಲೆಗಳು ತೆರೆದುಕೊಂಡಿದ್ದವು. ಹೈದರಾಬಾದ್ ನಿಜಾಮರ ಆಡಳಿತದಲ್ಲೇ ಕನ್ನಡ, ಮರಾಠಿ ಹಾಗೂ ಉರ್ದು ಶಾಲೆಗಳು ಇದ್ದವು. ಹೈದರಾಬಾದ್ ನಿಜಾಮರು ಅನುಮತಿ ನೀಡಿದ ಶಾಲೆಗಳು ಇಂದಿಗೂ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿವೆ. ನಾಲ್ಕು ಶಾಲೆಗಳು ಶತಮಾನ ಪೂರೈಸಿವೆ.
ಬ್ರಿಟಿಷರ ಆಡಳಿತ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಶುರುವಾದವು. ಆದರೆ, ಬೀದರ್ ಜಿಲ್ಲೆಯಲ್ಲಿ ಬ್ರಿಟಿಷರು ಆಡಳಿತ ನಡೆಸದಿದ್ದರೂ ಕ್ರೈಸ್ತ ಮಿಷನರಿಗಳು ಒಂದು ಶತಮಾನದ ಹಿಂದೆಯೇ ಕನ್ನಡ ಶಾಲೆಗಳನ್ನು ಆರಂಭಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
ರಾಜ್ಯ ಸರ್ಕಾರ 2018-2019ನೇ ಸಾಲಿನ ಬಜೆಟ್‌ನಲ್ಲಿ ಶತಮಾನ ಪೂರೈಸಿದ ರಾಜ್ಯದ 100 ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಪಾರಂಪರಿಕ ಶಾಲೆಯ ಗೌರವ ನೀಡಿದೆ. 100 ವರ್ಷ ಪೂರೈಸಿದ ಶಾಲೆಗಳನ್ನು ಪ್ರಾರಂಭವಾಗಿದ್ದ ಸ್ಥಿತಿಯಲ್ಲೇ ಉಳಿಸಿಕೊಳ್ಳಬೇಕು, ರಾಜ್ಯದ ಪರಂಪರೆಯ ಐತಿಹಾಸಿಕ ಕಟ್ಟಡ ಸಂರಕ್ಷಿಸಬೇಕು ಎನ್ನುವ ಆಶಯ ಸರ್ಕಾರ ಹೊಂದಿದೆ. ಇದೇ ಅವಧಿಯಲ್ಲಿ ಬೀದರ್ ಜಿಲ್ಲೆಯ ಆರು ಶಾಲೆಗಳನ್ನು ಗುರುತಿಸಿದೆ. ನಾಲ್ಕು ಶಾಲೆಗಳಿಗೆ ಆರ್ಥಿಕ ನೆರವನ್ನೂ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಿಗೆ ಪಾರಂಪರಿಕ ಸ್ಥಾನಮಾನ ದೊರಕಿದೆ. ಬೀದರ್ ಜಿಲ್ಲಾ ಕೇಂದ್ರದಲ್ಲೇ ಶತಮಾನ ಪೂರೈಸಿದ ಒಂದು ಶಾಲೆ ಇದೆ. ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಕಟ್ಟಡಕ್ಕೆ ಪಾರಂಪರಿಕ ಸ್ಥಾನ ದೊರಕಿಲ್ಲ.
ರಾಜ್ಯದಲ್ಲಿರುವ ಎಲ್ಲ ಮಠಗಳೂ ಕನ್ನಡದ ಮಠಗಳೇ ಆಗಿವೆ. ತುಮಕೂರಿನ ಸಿದ್ಧಗಂಗಾ ಮಠ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡ ಮಠಗಳಲ್ಲಿ ಮುಂಚೂಣಿಯಲ್ಲಿದೆ. ಬಡತನದ ಕಾರಣ ಬೀದರ್ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ಉಚಿತವಾಗಿ ಓದಿದ್ದಾರೆ. ಗಡಿಯಲ್ಲಿ ಕನ್ನಡ ಉಳಿಸಿದ ಶ್ರೇಯಸ್ಸು ದೂರದ ಸಿದ್ಧಗಂಗಾ ಮಠಕ್ಕೂ ಸಲ್ಲುತ್ತದೆ.
ಮಿಷನರಿಗಳ ಕನ್ನಡದ ಸೇವೆಗೆ 126 ವರ್ಷ
ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ ಬೀದರ್ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ 126 ವರ್ಷಗಳು ಪೂರ್ಣಗೊಂಡಿವೆ. ಬೀದರ್‌ನ ಮಂಗಲಪೇಟೆಯಲ್ಲಿ 1903ರಲ್ಲಿ ಮೊದಲ ಶಾಲೆ ಆರಂಭವಾಯಿತು. ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ 1903ರಲ್ಲಿ ಮೊದಲು ಗಂಡು ಮಕ್ಕಳ ಕನ್ನಡ ಮಾಧ್ಯಮ ಶಾಲೆ ತೆರೆಯಿತು. 1908ರಲ್ಲಿ ಹತ್ತು ಬಾಲಕಿಯರಿಗೆ ಉಚಿತ ಪ್ರವೇಶ ನೀಡಿ ಮೊದಲ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.