ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ

Published 27 ಮೇ 2024, 4:58 IST
Last Updated 27 ಮೇ 2024, 4:58 IST
ಅಕ್ಷರ ಗಾತ್ರ

ಬೀದರ್‌: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸರ್ಕಾರಿ ಶಾಲೆಗಳು ಸಜ್ಜಾಗಿವೆ.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಬೀದರ್‌ ಜಿಲ್ಲೆಯ 98 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಬೇಕಿರುವ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮಂಜೂರಾತಿ ನೀಡಿದೆ. ಇಷ್ಟೇ ಅಲ್ಲ, ಎಲ್‌ಕೆಜಿ, ಯುಕೆಜಿ ಪಠ್ಯ ಕಲಿಸುವ ಪ್ರತಿ ಶಿಕ್ಷಕರಿಗೆ ತಲಾ ₹10 ಸಾವಿರ, ಆಯಾಗಳಿಗೆ ತಲಾ ₹5 ಸಾವಿರ ಭರಿಸಲು ಮುಂದಾಗಿದೆ.

ಹಿಂದಿನ ವರ್ಷ ಕರ್ನಾಟಕ ಸರ್ಕಾರಿ ಪಬ್ಲಿಕ್‌ ಶಾಲೆಗಳಲ್ಲಿ (ಆಂಗ್ಲ ಮಾಧ್ಯಮ) ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿತ್ತು. ಎಸ್‌ಡಿಎಂಸಿ ಅವರು ಸ್ವಯಂಪ್ರೇರಣೆಯಿಂದ ಕೆಲ ಶಾಲೆಗಳಲ್ಲಿ ಆರಂಭಿಸಿದ್ದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಸರ್ಕಾರಿ ಶಾಲೆಗಳಿಗೂ ವಿಸ್ತರಿಸಲು ಕೆಕೆಆರ್‌ಡಿಬಿ ನಿರ್ಧರಿಸಿದೆ. ಅದಕ್ಕಾಗಿ ಜಿಲ್ಲೆಯ 98 ಆಯ್ದ ಶಾಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮುಂದಾಗಿರುವುದರಿಂದ ಸಹಜವಾಗಿಯೇ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲೆಗಳಿಗೆ ಇದರ ಬಿಸಿ ಮುಟ್ಟಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಗಲ್ಲಿಗೊಂದರಂತೆ ಖಾಸಗಿ ಶಾಲೆಗಳು ಹುಟ್ಟು ಕೊಳ್ಳುತ್ತಿವೆ. ಕನಿಷ್ಠ ಸೌಕರ್ಯಗಳು ಅಲ್ಲಿಲ್ಲ. ಮತ್ತೆ ಕೆಲವು ಶಾಲೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪರಿಣಾಮಕಾರಿ ಪೂರ್ಣ ಪ್ರಾಥಮಿಕ ಶಿಕ್ಷಣ ಸಿಕ್ಕರೆ ಖಾಸಗಿ ಶಾಲೆಗಳತ್ತ ಯಾರೂ ಸುಳಿಯುವುದಿಲ್ಲ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ಪರಿಣತರು.

ಇನ್ನು, ಜಿಲ್ಲೆಯ 97 ಶಾಲೆಗಳಲ್ಲಿ ತ್ರಿಭಾಷಾ ಮಾಧ್ಯಮ ಅನುಷ್ಠಾನಕ್ಕೂ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಹೋದ ವರ್ಷ ಕೆಲ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದರ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಶಿಕ್ಷಣ ಇಲಾಖೆ ಈಗ 97 ಶಾಲೆಗಳನ್ನು ಆಯ್ಕೆ ಮಾಡಿದೆ. ಒಂದು ಮಾತೃಭಾಷೆ ವಿಷಯದ ಜೊತೆಗೆ ಇಂಗ್ಲಿಷ್‌ ಭಾಷೆ ಕಡ್ಡಾಯವಾಗಿ ಪಾಠ ಮಾಡಲಾಗುತ್ತದೆ.

29ರಿಂದ ಶಾಲಾ ಪ್ರಾರಂಭೋತ್ಸವ

ಮೇ 29ರಂದು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಲ್ಲ ಶಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದು ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗಳಿಗೆ ಆಹ್ವಾನಿಸಿ ಸಿಹಿ ಕೊಟ್ಟು ಬರಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಒಂದನೇ ತರಗತಿ ಪ್ರವೇಶ ಗೊಂದಲ

ಒಂದನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಮಕ್ಕಳ ವಯಸ್ಸಿನ ಕುರಿತಾಗಿ ಅನೇಕ ಪೋಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಸರ್ಕಾರದ ನಿಯಮದ ಪ್ರಕಾರ 6 ರಿಂದ 7 ವರ್ಷದೊಳಗಿನ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಬಹುದು. ಆದರೆ ಜೂನ್‌ 1ಕ್ಕೆ ಅನ್ವಯವಾಗುವಂತೆ ಒಂದೆರೆಡು ದಿನ ಅಥವಾ ಒಂದು ವಾರ ಕಡಿಮೆಯಿದ್ದರೂ ಮಕ್ಕಳಿಗೆ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ಎಂದು ಪೋಷಕರು ಗೋಳು ತೋಡಿಕೊಂಡಿದ್ದಾರೆ. ‘ಜೂನ್‌ 1ಕ್ಕೆ ಅನ್ವಯವಾಗುವಂತೆ ಮಗುವಿಗೆ ಆರು ವರ್ಷ ತುಂಬಿರಬೇಕು. ಇಲ್ಲವೇ 6ರಿಂದ 7 ವರ್ಷದೊಳಗಿನ ಮಕ್ಕಳು ಪ್ರವೇಶಕ್ಕೆ ಅರ್ಹರು ಎಂಬ ನಿಯಮ ಇದೆ.

ಈ ವಯಸ್ಸಿನ ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಇರುವುದರಿಂದ ಸರ್ಕಾರ ವೈಜ್ಞಾನಿಕವಾಗಿ ಈ ನಿಯಮ ರೂಪಿಸಿದೆ. ಕೆಲವು ದಿನ ಅಥವಾ ಕೆಲವು ವಾರ ಕಡಿಮೆ ಇದ್ದು ಪ್ರವೇಶ ನಿರಾಕರಿಸುತ್ತಿದ್ದರೆ ಪೋಷಕರು ನಿರಾಶರಾಗಬೇಕಿಲ್ಲ. 7 ವರ್ಷದೊಳಗೆ ಯಾವಾಗ ಬೇಕಾದರೂ ಶಾಲೆಗೆ ಸೇರಿಸಬಹುದು’ ಎಂದು ಡಿಡಿಪಿಐ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶಾಲೆ ಆರಂಭಕ್ಕೂ ಮೊದಲು ಪಠ್ಯ

‘ಈಗಾಗಲೇ ಸರ್ಕಾರವು ಜಿಲ್ಲೆಗೆ ಪಠ್ಯ ಪುಸ್ತಕಗಳನ್ನು ಕಳಿಸುತ್ತಿದ್ದು ಹಂತ ಹಂತವಾಗಿ ಪುಸ್ತಕಗಳು ಬರುತ್ತಿವೆ. ಮೇ 29ರಿಂದ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು ಅಷ್ಟರೊಳಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಗಳು ಕೈಸೇರಲಿವೆ’ ಎಂದು ಡಿಡಿಪಿಐ ಸಲೀಂ ಪಾಶಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT