ಗುರುವಾರ , ಜೂನ್ 30, 2022
25 °C
ಕಲ್ಲಂಗಡಿ ಬೆಳೆಗಾರರ ನೆರವಿಗೆ ಧಾವಿಸಲು ಸರ್ಕಾರಕ್ಕೆ ಒತ್ತಾಯ

ರೈತರ ಬದುಕಿಗೆ ಲಾಕ್‌ಡೌನ್‌ ಬರೆ

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಕಲ್ಲಂಗಡಿ ಹಣ್ಣುಗಳು ಬಾಳಲ್ಲಿ ಸಿಹಿ ದಿನಗಳನ್ನು ತರುತ್ತವೆ ಎಂದುಕೊಂಡು ತುಂಬಾ ಖುಷಿಯಾಗಿದ್ದೆವು. ಆದರೆ, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಘೋಷಿಸಿದ ಲಾಕ್‌ಡೌನ್‌ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಬದುಕನ್ನು ಸಂಕಷ್ಟಕ್ಕೆ ದೂಡಿದೆ...

–ಇವು ತಾಲ್ಲೂಕಿನ ಹಾಲಹಳ್ಳಿ (ಕೆ), ನಿಲಮನಳ್ಳಿ, ಖಟಕಚಿಂಚೋಳಿ, ವರವಟ್ಟಿ, ಬಾಜೋಳಗಾ, ಕೋನಮೆಳ ಕುಂದಾ, ಸಾಯಿಗಾಂವ, ಮೆಹಕರ, ಲಖನಗಾಂವ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕಲ್ಲಂಗಡಿ ಬೆಳೆದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅನ್ನದಾತರ ನೋವಿನ ಮಾತುಗಳು.

‘ನನಗೆ ಒಟ್ಟು 5 ಎಕರೆ ಭೂಮಿ ಇದೆ. ಫೆಬ್ರುವರಿ ತಿಂಗಳಿನಲ್ಲಿ ಬಸವಕಲ್ಯಾಣ ತಾಲ್ಲೂಕಿನ ಜಾಮನಗರದಿಂದ ಮೆಲೋಡಿ ರೋಪ್‌ ತಂದು ನಾಟಿ ಮಾಡಿದ್ದೇನೆ. ಒಟ್ಟು ₹2 ಲಕ್ಷ ಖರ್ಚು ಮಾಡಿದ್ದೇನೆ. ಕೊಳವೆಬಾವಿಗೆ 5 ಇಂಚು ನೀರಿನ ಲಭ್ಯತೆ ಇದೆ. ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಬೆಳೆಗೆ ಔಷೋಧೋಪಚಾರ, ಗೊಬ್ಬರ ಹಾಕಿದ್ದರಿಂದ ಸುಮಾರು 60 ಟನ್‌ ಬಂಪರ್‌ ಬೆಳೆ ಬಂದಿದೆ. ಇನ್ನೇನು ಕಲ್ಲಂಗಡಿ ಮಾರಾಟ ಆರಂಭವಾಗಿ ಕೈ ತುಂಬಾ ಆದಾಯ ಗಳಿಸಬಹುದು ಎಂದು ಖುಷಿಯಲ್ಲಿರುವಾಗಲೇ ಲಾಕ್‌ಡೌನ್‌ ಜಾರಿಯಿಂದಾಗಿ ವ್ಯಾಪಾರಿಗಳು ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ಖರೀದಿಗೆ ನಿರಾಕರಿಸಿದರು’ ಎಂದು ಹಾಲಹಳ್ಳಿ (ಕೆ) ಗ್ರಾಮದ ಪಂಚಾಯಿತಿ ಸದಸ್ಯ, ರೈತರೂ ಆಗಿರುವ ಸೂರ್ಯಕಾಂತ ಮಾಲಿಪಾಟೀಲ ಅಳಲು ತೋಡಿಕೊಂಡರು.

‘ಸಾರ್ವಜನಿಕರೂ ಕಲ್ಲಂಗಡಿ ಸೇವನೆಯಿಂದ ನೆಗಡಿ ಬಂದರೆ ಕೊರೊನಾ ರೋಗಕ್ಕೆ ತುತ್ತಾಗಬಹುದು ಎಂಬ ಭಯದಿಂದ ಒಂದೂವರೆ ರೂಪಾಯಿಗೆ ಕೆ.ಜಿ ಮಾರಾಟ ಮಾಡಿದರು ಕೊಂಡೊಯ್ಯಲು ತಯಾರಿಲ್ಲ’ ಎಂದು ಹೇಳಿದರು.

‘ಮೂರು ಎಕರೆಯಲ್ಲಿ 50 ಟನ್‌ ಕಲ್ಲಂಗಡಿ ಬೆಳೆದಿದ್ದೇನೆ. 1 ಕೆ.ಜಿ ಗೆ ₹10ರಂತೆ ಮಾರಾಟವಾದರೂ ಕನಿಷ್ಠ ₹5 ಲಕ್ಷ ದೊರೆಯುತ್ತದೆ. ಆದರೆ ಕಲ್ಲಂಗಡಿಗೆ ಕೇಳುವವರೇ ಇಲ್ಲದಂತಾಗಿದ್ದು, ಗ್ರಾಮಸ್ಥರಿಗೆ ಉಚಿತವಾಗಿ ಬಂದು ಕೊಂಡೊಯ್ಯಿರಿ ಎಂದು ಹೇಳಿದರೂ ಹೊಲದಲ್ಲಿನ ಸಂಪೂರ್ಣ ಬೆಳೆ ಖಾಲಿ ಆಗಿಲ್ಲ. ಮುಂಗಾರು ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಇನ್ನೂ ಹದಗೊಳಿಸಿಲ್ಲ. ಬೇರೆಯವರ ಬಳಿ ಬಡ್ಡಿಯಿಂದ ಹಣ ತಂದಿದ್ದೇನೆ. ಶ್ರಮವಹಿಸಿ ಬೆಳೆದ ಬೆಳೆ ಈಗ ಕಣ್ಣೆದುರಿನಲ್ಲಿ ಹಾಳಾ ಗುತ್ತಿರುವುದನ್ನು ನೋಡಿ ತುಂಬಾ ಸಂಕಷ್ಟವಾಗುತ್ತಿದೆ’ ಎಂದು ನಿಲಮನಳ್ಳಿ ಗ್ರಾಮದ ರೈತ ಧನರಾಜ ತಿಳಿಸಿದರು.

ಜನಪ್ರತಿನಿಧಿ, ಅಧಿಕಾರಿಗಳು ಕಲ್ಲಂಗಡಿ ಬೆಳೆಗಾರರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ರೈತರ ನೆರವಿಗೆ ಧಾವಿಸಿ ನಮ್ಮನ್ನು ಸಾಲದ ಶೂಲದಿಂದ ಹೊರ ತರಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು