ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ; ಚರ್ಮೋದ್ಯಮಕ್ಕೆ ಧಕ್ಕೆ

ಜಗಜೀವನರಾಂ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅರ್ಜುನ ಕನಕ ಕಳವಳ
Last Updated 9 ಜನವರಿ 2021, 6:43 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಗೋಹತ್ಯೆ ನಿಷೇಧದ ನೆಪದಲ್ಲಿ ಸರ್ಕಾರ ಎಲ್ಲ ಜಾನುವಾರು ಗಳ ಹತ್ಯೆ ನಿಷೇಧಿಸುವ ಕಾನೂನು ಜಾರಿಗೊಳಿಸಿದ್ದು, ಇದರಿಂದ ಗೋಮಾಂಸ ತಿನ್ನುವವರಗಿಂತ ಚರ್ಮೋದ್ಯಮಕ್ಕೆ, ರೈತರಿಗೆ ಹೆಚ್ಚಿನ ಸಂಕಟ ಎದುರಾಗಲಿದೆ’ ಎಂದು ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅರ್ಜುನ ಕನಕ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಶುಕ್ರವಾರ ಗೋಹತ್ಯೆ ನಿಷೇಧದ ಬಗ್ಗೆ ನಡೆದ ವಿವಿಧ ಪಕ್ಷ ಹಾಗೂ ಸಮಾಜದ ಪ್ರಮುಖರ ಸಭೆಯ ನಂತರ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಜಗಜೀವನರಾಂ ನಿಗಮದಿಂದ ಚರ್ಮೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತದೆ. ಸಾವಿರಾರು ಜನರು ಈ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಜಾನುವಾರು ಹತ್ಯೆ ನಿಲ್ಲಿಸಿದರೆ ಇವರ ಮೇಲೆ ಆಗುವ ಪರಿಣಾಮ ಏನು? ಈ ಕಸಬು ಅವಲಂಬಿಸಿದವರ ಉದ್ಯೋಗಕ್ಕಾಗಿ ಪರ್ಯಾಯ ವ್ಯವಸ್ಥೆ ಏನಿದೆ? ಅವರು ಕುಟುಂಬ ನಿರ್ವಹಣೆಗೆ ಏನು ಮಾಡಬೇಕು? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಪ್ರವಕ್ತಾ ಆಕಾಶ ಖಂಡಾಳೆ ಮಾತನಾಡಿ, ‘ಗೋಹತ್ಯೆ ನಿಷೇಧ ಕಾನೂನಿನಿಂದ ರೈತರಿಗೆ ಜಾನುವಾರು ಮಾರಾಟ ಹಾಗೂ ಖರೀದಿಗೆ ತೊಂದರೆ ಆಗುವ ಕಾರಣ ಇದು ರೈತವಿರೋಧಿ ಕಾನೂನಾಗಿದೆ. ಅಲ್ಲದೆ, ರೈತರು ಎಲ್ಲಿಯಾದರೂ ಜಾನುವಾರು ತೆಗೆದುಕೊಂಡು ಹೋದರೆ ಸಂಶಯದ ಮೇಲೆ ಅನಾಹುತ ಸಂಭವಿಸುವ ಸಾಧ್ಯತೆಯಿದೆ’ ಎಂದು ಅವರು ತಿಳಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಂಚಾಲಕ ಮುಜಾಹಿದಪಾಶಾ ಕುರೇಶಿ ಮಾತನಾಡಿ, ‘ಈ ಕಾನೂನು ಜಾರಿಯಾಗದಂತೆ ತಡೆಯಲು ನ್ಯಾಯಾಲಯದ ಮೊರೆ ಹೋಗಲಾಗುತ್ತದೆ. ಜಾನುವಾರು ಹತ್ಯೆ ಆರೋಪಿಗೆ ₹10 ಲಕ್ಷ ದಂಡ ವಿಧಿಸಿರುವುದೂ ನ್ಯಾಯಸಮ್ಮತಲ್ಲ. ಗೋಹತ್ಯೆ ನಿಷೇಧಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಎತ್ತು, ಎಮ್ಮೆಗಳ ಹತ್ಯೆ ತಡೆಯುವುದು ಸರಿಯಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ತಹಶೀನಅಲಿ ಜಮಾದಾರ ಮಾತನಾಡಿ, ‘ದೇಶದಲ್ಲಿ ಶೇ 90 ರಷ್ಟು ಜನರು ಮಾಂಸಾಹಾರಿ ಆಗಿದ್ದು ಅವರಿಗೆ ಈ ಕಾನೂನಿನಿಂದ ಅನ್ಯಾಯ ಆಗಲಿದೆ’ ಎಂದು ಹೇಳಿದರು.

ಇಕ್ರಾಮೊದ್ದೀನ್ ಖಾದಿವಾಲೆ ಮಾತನಾಡಿ, ‘ಮಾಂಸ ರಪ್ತು ಜಾರಿಯಿಟ್ಟು ಗೋಹತ್ಯೆ ತಡೆಯುವುದು ಸೂಕ್ತವಲ್ಲ’ ಎಂದರು.

ಸಂಭಾಜಿ ಬ್ರಿಗೆಡ್ ಅಧ್ಯಕ್ಷ ಅಜಿಂಕ್ಯ ಮುಳೆ, ರೈತ ಮುಖಂಡ ಕಾಸಿಂಸಾಬ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT