ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲಾಮಟ್ಟದಲ್ಲಿ ಸಾಮೂಹಿಕ ವಿವಾಹ: ಶಾಸಕ ಕಾಶೆಂಪುರ

ಆಣದೂರಿನಲ್ಲಿ 158 ಜೋಡಿಗಳ ಸರಳ ಸಾಮೂಹಿಕ ವಿವಾಹ: ಶಾಸಕ ಕಾಶೆಂಪುರ ಹೇಳಿಕೆ
Last Updated 4 ಜುಲೈ 2022, 15:50 IST
ಅಕ್ಷರ ಗಾತ್ರ

ಜನವಾಡ: ಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ ಅಧಿಕಾರಕ್ಕೆ ಬಂದರೆ ಆಯಾ ಜಿಲ್ಲಾಮಟ್ಟದಲ್ಲಿ ಸರಳ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗುವುದು ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ರಾಷ್ಟ್ರ ಸೇವಾ ದಳ ಹಾಗೂ ಜ್ಞಾನ ಮಾರ್ಗ ಮಲ್ಟಿ ಪರ್ಪೊಸ್ ಸೊಸೈಟಿ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಪ್ರಯುಕ್ತ ಬೀದರ್ ತಾಲ್ಲೂಕಿನ ಆಣದೂರಿನ ಧಮ್ಮ ದರ್ಶನ ಭೂಮಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಳ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸುವ ಮೂಲಕ ಮಹೇಶ ಗೋರನಾಳಕರ್ ಹಾಗೂ ತಂಡದವರು ಮಾದರಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಆಡಂಬರದ ಮದುವೆಯಿಂದಾಗಿ ಬಹಳಷ್ಟು ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿವೆ. ಕಾರಣ, ನೆಮ್ಮದಿಯ ಜೀವನಕ್ಕಾಗಿ ವಿವಾಹ ಸಮಾರಂಭಗಳನ್ನು ಸರಳವಾಗಿ ಆಯೋಜಿಸಬೇಕು. ಸರಳ ಸಾಮೂಹಿಕ ವಿವಾಹಗಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ವ್ಯಸನವು ವ್ಯಕ್ತಿ ಅಷ್ಟೇ ಅಲ್ಲ; ಆತನ ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ. ಕಾರಣ, ಜಿಲ್ಲೆಯನ್ನು ವ್ಯಸನಮುಕ್ತಗೊಳಿಸುವ ದಿಸೆಯಲ್ಲಿ ಜನಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಯುವಕರು ವ್ಯಸನದಿಂದ ದೂರ ಇರಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯುವ ಮುಖಂಡ ಮಹೇಶ ಗೋರನಾಳಕರ್ ಮಾತನಾಡಿ, ಬಡವರು ಸಾಲಕ್ಕೆ ಸಿಲುಕುವುದನ್ನು ತಪ್ಪಿಸಲು ಸರಳ ಸಾಮೂಹಿಕ ವಿವಾಹ ಸಮಾರಂಭ ಸಂಘಟಿಸಲಾಗಿದೆ. 100 ಜೋಡಿಗಳ ವಿವಾಹ ಮಾಡಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದ್ದು, 158 ಜೋಡಿಗಳ ವಿವಾಹ ಮಾಡಿಸಲಾಗಿದೆ. ಇನ್ನು ಪ್ರತಿ ವರ್ಷ 100 ರಿಂದ 200 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸುವ ಯೋಜನೆ ಇದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಭಂತೆ ಜ್ಞಾನಸಾಗರ ಅವರು 158 ಜೋಡಿಗಳ ಮದುವೆ ಮಾಡಿಸಿದರು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ್, ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಬಿ.ಎಸ್.ಐ. ಪ್ರಧಾನ ಕಾರ್ಯದರ್ಶಿ ಡಾ. ಬಾಬುರಾವ್ ಆಣದೂರೆ, ಬಾಲಕರ ಬಾಲ ಮಂದಿರದ ಅಧೀಕ್ಷಕ ಶ್ರೀನಿವಾಸ ಬಿ, ಮುಖಂಡರಾದ ಪಿಂಟು ಕಾಂಬಳೆ, ಸೂರ್ಯಕಾಂತ ಸಾಧುರೆ, ಪವನ್ ಮಿಠಾರೆ, ಗೌತಮ ಮುತ್ತಂಗಿಕರ್, ಅಮರ ಅಲ್ಲಾಪುರ, ಕಲ್ಪನಾ ಗೋರನಾಳಕರ್ ಇದ್ದರು. ರತ್ನದೀಪ ಕಸ್ತೂರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT