ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆ ಬಗೆಹರಿಸಿ ಕೆಡಿಪಿ ಸಭೆ ನಡೆಸಿ

ಕಬ್ಬು ಹಣ ಕೊಡದಿದ್ದರೆ ಸಚಿವರಿಗೆ ಘೇರಾವ್: ರೈತ ಸಂಘ ಎಚ್ಚರಿಕೆ
Last Updated 3 ಫೆಬ್ರುವರಿ 2021, 15:59 IST
ಅಕ್ಷರ ಗಾತ್ರ

ಬೀದರ್: ರೈತರ ಸಮಸ್ಯೆ ಬಗೆಹರಿಸಿದ ನಂತರವೇ ಕೆಡಿಪಿ ಸಭೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.

ಕೆಡಿಪಿ ಸಭೆಗೆ ಮುಂಚೆ ಕಬ್ಬು ಹಣ ಹಾಗೂ ನೆರೆ ಪರಿಹಾರ ಒದಗಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಮೂರು-ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆಗಳು ಹಾಳಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಬೆಳೆ ಪರಿಹಾರ ಕೊಡುವಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ. ಬೆಳೆ ವಿಮೆ ಪರಿಹಾರವನ್ನೂ ಕಲ್ಪಿಸಿಲ್ಲ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಜತೆ ಚರ್ಚಿಸಿ ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ನಿಗದಿಪಡಿಸಿದ್ದಾರೆ. ಆದರೆ, ಕಾರ್ಖಾನೆಗಳು ಈವರೆಗೂ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸಿಲ್ಲ. ಎರಡು ವಾರದೊಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಪಂಪ್‍ಸೆಟ್‍ಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸಬೇಕು. ತೊಗರಿ ಖರೀದಿ ಕೇಂದ್ರಗಳನ್ನು ತ್ವರಿತವಾಗಿ ಆರಂಭಿಸಬೇಕು. ಬಿಎಸ್‍ಎಸ್‍ಕೆಯಲ್ಲಿ ಇರುವ ₹ 7-8 ಕೋಟಿ ಮೊತ್ತದ ಸಕ್ಕರೆ ದಾಸ್ತಾನು ಮಾರಾಟ ಮಾಡಿ ರೈತರ ಬಾಕಿ ಕಬ್ಬು ಹಣ ಪಾವತಿಸಬೇಕು. ಕಾರಂಜಾ ನೀರಾವರಿ ಯೋಜನೆಯ ಹೆಚ್ಚುವರಿ ಜಮೀನಿನ ಕಬ್ಬು ಹೊಲಗಳಲ್ಲಿ ನಿಂತಿರುವ ನೀರು ಖಾಲಿ ಮಾಡಿಸಬೇಕು. 2019-20, 2020-21ನೇ ಸಾಲಿನ ಬೆಳೆ ವಿಮೆ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಕಳಪೆ ಸೋಯಾಬೀನ್ ಬೀಜ ಮಾರಾಟ ಮಾಡಿದ ಕಂಪನಿಗಳಿಂದ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಸಿದ್ದಣ್ಣ ಭೂಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಕಾಶ ಬಾವಗೆ, ಕಾಶಪ್ಪ ಶೇರಿಕಾರ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಪಂಚಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT