ಹುಮನಾಬಾದ್: ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕುಣಿ ಗ್ರಾಮದಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಅಕ್ರಮ ನಡೆದಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗುರುವಾರ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯಿಂದ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೋರೆ ಮಾತನಾಡಿ,‘ಸಿಂಧನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕುಣಿ ಗ್ರಾಮದ ಸರ್ವೇ ನಂಬರ್ 33 ಜಮೀನಿನಲ್ಲಿ 3 ಕೃಷಿ ಹೊಂಡಗಳು ನಿರ್ಮಿಸಲಾಗಿದೆ ಎಂದು ಹಣ ಲಪಟಾಯಿಸಿದ್ದಾರೆ. ಆದರೆ ಈ ಹೊಲದಲ್ಲಿ ಯಾವುದೇ ಕೃಷಿ ಹೊಂಡಗಳು ಇಲ್ಲ. ಈ ಬಗ್ಗೆ ಜಮೀನಿನ ಮಾಲೀಕರಿಗೂ ಸಹ ಮಾಹಿತಿ ಇಲ್ಲದೆ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.