ಬುಧವಾರ, ಡಿಸೆಂಬರ್ 1, 2021
26 °C
ಅಭ್ಯರ್ಥಿಗಳ ಪ್ರಚಾರ ಶುರು

ಬೀದರ್ ವಿಧಾನ ಪರಿಷತ್ ಚುನಾವಣೆ: ಪಂಚಾಯಿತಿ ಮತದಾರರ ಮೇಲೆ ಪಕ್ಷಗಳ ಕಣ್ಣು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಬೀದರ್: ವಿಧಾನ ಪರಿಷತ್ತಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸದೇ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ. ರಾಷ್ಟ್ರೀಯ ಪಕ್ಷಗಳ ಮಧ್ಯೆಯೇ ನೇರ ಹಣಾಹಣಿ ನಡೆಯುವುದು ಸ್ಪಷ್ಟವಾಗಿ ಕಂಡು ಬರುತ್ತಿರುವುದರಿಂದ ಎರಡೂ ಪಕ್ಷಗಳು ಗ್ರಾಮ ಪಂಚಾಯಿತಿ ಸದಸ್ಯರ ಮೇಲೆಯೇ ಕಣ್ಣು ಇಟ್ಟಿವೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳು ವಿಸರ್ಜನೆಯಾಗಿರುವ ಕಾರಣ ಸದಸ್ಯರು ಮತ ಹಕ್ಕು ಕಳೆದುಕೊಂಡಿದ್ದಾರೆ. ಮತದಾರರಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ನಾಮಪತ್ರಗಳು ಕ್ರಮಬದ್ಧವಾಗಿರುವುದನ್ನು ಜಿಲ್ಲಾ ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆಯೇ ಮತದಾರರನ್ನು ಓಲಿಸುವ ಕಾರ್ಯ ಶುರುವಾಗಿದೆ.

ಜಿಲ್ಲೆಯಲ್ಲಿ ಒಟ್ಟು 3,495 ಮತದಾರರು ಇದ್ದಾರೆ. ನಗರ, ಪಟ್ಟಣಗಳಲ್ಲಿ 257 ಹಾಗೂ ಗ್ರಾಮೀಣ ಪ್ರದೇಶದಲ್ಲಿ 3,238 ಮತದಾರರು ಇದ್ದಾರೆ. ನಗರಸಭೆ, ಪುರಸಭೆಗಳ 23 ನಾಮನಿರ್ದೇಶಿತ ಸದಸ್ಯರಿಗೂ ಮತ ಹಕ್ಕು ಕಲ್ಪಿಸಲಾಗಿದೆ.

ಬೀದರ್ ತಾಲ್ಲೂಕಿನಲ್ಲಿ 691, ಭಾಲ್ಕಿಯಲ್ಲಿ 646, ಬಸವಕಲ್ಯಾಣದಲ್ಲಿ 606, ಹುಮನಾಬಾದ್‌ನಲ್ಲಿ 416, ಔರಾದ್ 416, ಹುಲಸೂರಲ್ಲಿ 129, ಕಮಲನಗರದಲ್ಲಿ 280 ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ 308 ಮತದಾರರು ಇದ್ದಾರೆ. ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲೇ ಅತಿ ಹೆಚ್ಚು ಮತದಾರರು ಇರುವ ಕಾರಣ ರಾಜಕೀಯ ಪಕ್ಷಗಳು ಈ ತಾಲ್ಲೂಕುಗಳಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿವೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬರು ಶಾಸಕರು ಇದ್ದಾರೆ. ವಿಧಾನ ಪರಿಷತ್ತಿನ ನಾಲ್ವರು ಸದಸ್ಯರಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಇದ್ದಾರೆ.

ಯಾವ ಉಸಾಬರಿಯೂ ಬೇಡ ಎಂದು ಜೆಡಿಎಸ್‌ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿ ಗೋವಿಂದರಾವ್ ಸೋಮವಂಶಿ ಪ್ರಾಮಾಣಿಕತೆ ಹಾಗೂ ನಿಷ್ಠೆಯ ವಿಷಯ ಪ್ರಸ್ತಾಪಿಸಿ ಮತದಾರರ ಬಳಿ ಮತಯಾಚಿಸಲು ನಿರ್ಧರಿಸಿದ್ದಾರೆ.

ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್ ಪಾಟೀಲ ಇಬ್ಬರೂ ಪ್ರಬಲರಾಗಿದ್ದು, ಗೆಲುವಿನ ವಿಶ್ವಾಸದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪಕ್ಷಗಳ ಮುಖಂಡರು ಪಂಚಾಯಿತಿಗೆ ಚುನಾಯಿತರಾಗಿರುವ ಸದಸ್ಯರ ಬಳಿ ಹೋಗಿ ಪ್ರರಸ್ಪರರಿಗೆ ಪ್ರಬಲ ಸ್ಪರ್ಧೆ ಒಡ್ಡಲು ಸಿದ್ಧತೆ ನಡೆಸಿದ್ದಾರೆ.

‘ಬಿಜೆಪಿ ಒಂದು ತಿಂಗಳಿಂದ ತಯಾರಿ ನಡೆಸಿದೆ. ಪಂಚಾಯಿತಿ ಚುನಾವಣೆ ನಡೆದ ಸಂದರ್ಭದಲ್ಲೇ ನಮ್ಮ ಪಕ್ಷದವರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿದ್ದೇವೆ. ಹೀಗಾಗಿ ಪಕ್ಷದ ಅಭ್ಯರ್ಥಿಯ ಗೆಲುವು ಕಷ್ಟವಾಗಲಾರದು’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಪಡೆ ಇದೆ. ಔರಾದ್ ಹಾಗೂ ಬೀದರ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪಂಚಾಯಿತಿ ಸದಸ್ಯರು ಇದ್ದಾರೆ. ಔರಾದ್‌ನಲ್ಲಿ ಬಿಜೆಪಿ ಶಾಸಕರಿದ್ದರೂ ಬಹುತೇಕ ಪಂಚಾಯಿತಿಗಳು ಕಾಂಗ್ರೆಸ್‌ ಅಧೀನದಲ್ಲಿವೆ. ಕಾಂಗ್ರೆಸ್‌ ಅಭ್ಯರ್ಥಿ ಜಯ ಸುಲಭವಾಗಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ವಿಶ್ವಾಸ ವ್ಯಕ್ತ‍ಪಡಿಸುತ್ತಾರೆ.

ಮತದಾರರ ಪ್ರಮಾಣ

ತಾಲ್ಲೂಕುಮತದಾರರು
ಬೀದರ್ ತಾಲ್ಲೂಕು691
ಭಾಲ್ಕಿ646
ಬಸವಕಲ್ಯಾಣ606
ಹುಮನಾಬಾದ್‌416
ಔರಾದ್416
ಹುಲಸೂರ129
ಕಮಲನಗರ280
ಚಿಟಗುಪ್ಪ308

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು