ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ: ಭಾದ್ಲಾಪುರದಲ್ಲಿ ಮಾದರಿ ಶಿಶುವಿಹಾರ

Published 11 ಜುಲೈ 2024, 3:17 IST
Last Updated 11 ಜುಲೈ 2024, 3:17 IST
ಅಕ್ಷರ ಗಾತ್ರ

ಚಿಟಗುಪ್ಪ: ಸರ್ಕಾರಿ ಶಾಲೆ­ಗಳೆಂದರೆ ಮೂಗು ಮುರಿಯುವ ಇಂದಿನ ದಿನ­ಗಳಲ್ಲಿ ತಾಲ್ಲೂಕಿನ ಭಾದ್ಲಾಪುರ್‌ ಗ್ರಾಮದ ಸರ್ಕಾರಿ ಶಾಲೆಯ ಶಿಶುವಿಹಾರ ಎಲ್ಲರಿಗೂ ಮಾದರಿಯಾಗಿದೆ.

ಶಾಲೆಯ ಮುಖ್ಯಶಿಕ್ಷಕ ವಿಠಲರೆಡ್ಡಿ ಕರಕನಳ್ಳಿ ಅವರ ನಿರಂತರ ಶ್ರಮ ಶಿಶುವಿಹಾರ ಸುಂದರ ರೂಪ ಪಡೆಯುತ್ತಿದೆ. ಹಲವು ಇಲ್ಲಗಳ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಹಳೆಯದಾದ ಈ ಶಾಲೆ ಆರಂಭ­ದಲ್ಲಿ ಪ್ರಾಥಮಿಕ ಶಾಲೆಯಾಗಿತ್ತು, ನಂತರದ ದಿನಗಳಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾಯಿತು.

ಈಗ ಅದು ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುತ್ತಿದೆ. ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಖಾಸಗಿ ಶಾಲೆಗಳಲ್ಲಿರುವಂತೆ ಮಕ್ಕಳಿಗೆ ಟೈ, ಬ್ಯಾಡ್ಜ್‌, ಬೆಲ್ಟ್‌, ಸಮವಸ್ತ್ರ ಎಲ್ಲವೂ ಅಳವಡಿಸಲಾಗಿದೆ. ಸಹ ಪಠ್ಯ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ.

ಶಾಲೆಯ ಅಗತ್ಯಕ್ಕೆ ತಕ್ಕಂತೆ ಕಟ್ಟಡ ಮತ್ತು ಕೊಠಡಿಗಳ ಕೊರತೆಯಿದೆ. ಇವುಗಳ ಮಧ್ಯೆಯೇ 2024-25ನೇ ಸಾಲಿಗೆ ಶಿಕ್ಷಣ ಇಲಾಖೆ ಸ್ಮಾರ್ಟ್‌ ಕ್ಲಾಸ್‌ ಮಂಜೂರು ಮಾಡಿದೆ. ಉಚಿತ ಪಠ್ಯಪುಸ್ತಕ, ಶೌಚಾ­ಲಯ, ಪ್ರಯೋಗಾಲಯ, ಕೈತೋಟ, ಕಂಪ್ಯೂಟರ್ ಕೋಣೆ ಹೊಂದಿದೆ.

ಈ ವರ್ಷ 26 ಮಕ್ಕಳನ್ನು ಶಿಶು ವಿಹಾರಕ್ಕೆ ದಾಖಲಿಸಿಕೊಳ್ಳಲಾಗಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಮುಖ್ಯ ಶಿಕ್ಷಕ ವಿಠಲರೆಡ್ಡಿ ಸ್ವಯಂ ಹಣ ಖರ್ಚುಮಾಡಿ ತಾವಾಗಿಯೇ ಶಾಲೆಗೆ 20 ಕುರ್ಚಿಗಳನ್ನು ದೇಣಿಗೆ ನೀಡಿದ್ದಾರೆ. ಇದರಿಂದ ತರಗತಿಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿ ಆಟವಾಡುತ್ತ ಮೂಲಾಕ್ಷರಗಳ ಅಭ್ಯಾಸ ಮಾಡುತ್ತಿದ್ದಾರೆ.

ಮಕ್ಕಳ ಖುಷಿ ಕಂಡು ಸಿಬ್ಬಂದಿ ಸಂತೋಷ ಪಡುತ್ತಿದ್ದಾರೆ. ಸಾಧನೆಗೆ ಆಸಕ್ತಿ ಇದ್ದಲ್ಲಿ ಖಂಡಿತ ಯಶಸ್ಸು ನಮ್ಮದಾಗುತ್ತದೆ ಎಂಬುದಕ್ಕೆ ಈ ಶಿಶುವಿಹಾರ ಹಾಗೂ ಇಲ್ಲಿಯ ಸಿಬ್ಬಂದಿ ಸಾಕ್ಷಿ.

ಶಿಶು ವಿಹಾರಕ್ಕೆ ಬೋಧನೆ ಮಾಡಲು ಸಿಬ್ಬಂದಿ ಅವಶ್ಯಕತೆ ಇದ್ದಾಗ ಮುಖ್ಯ ಶಿಕ್ಷಕರು ಇತರ ಶಿಕ್ಷಕಿಯರ ಮನಸ್ಸು ಗೆದ್ದು ಅವರಿಂದಲೇ ಬೋಧನೆ ಆಟ ಪಾಠ ಮಾಡಿಸುವ ಕೆಲಸ ಆರಂಭಿಸಿದ್ದಾರೆ. ಪಾಲಕರು ಇದನ್ನೆಲ್ಲ ಗಮನಿಸಿ ಹೆಚ್ಚು ಹೆಚ್ಚು ಮಕ್ಕಳಿಗೆ ಇಲ್ಲಿಯ ಶಿಶುವಿಹಾರಕ್ಕೆ ತಂದು ಪ್ರವೇಶ ಪಡೆಯುತ್ತಿದ್ದಾರೆ.

ಮಧ್ಯಾಹ್ನಕ್ಕೆ ಮಕ್ಕಳಿಗೆ ಊಟ ಮಾಡಿಸಿದ ನಂತರ ವಿಶ್ರಾಂತಿಗಾಗಿ ನಿದ್ದೆ ಮಾಡಿಸುವ ಕೆಲಸವೂ ಶಿಕ್ಷಕಿಯರು ಮಾಡುತ್ತಿದ್ದಾರೆ. ಶಾಲೆಯದೇ ಕಿರು ಪಠ್ಯಕ್ರಮ ರಚಿಸಿಕೊಂಡು ಶಿಶು ವಿಹಾರದ ಮಕ್ಕಳಿಗೆ ಹಾಡು ಆಟಗಳ ಮೂಲಕ ಕನ್ನಡ, ಇಂಗ್ಲಿಷ್‌, ಗಣಿತ ವಿಷಯಗಳ ಮೂಲ ಜ್ಞಾನ ಮೂಡಿಸುವ ಬೋಧನೆ ನಡೆಸಲಾಗುತ್ತಿದೆ. ಹೀಗಾಗಿ ಇದೊಂದು ಮಾದರಿ ಶಿಶುವಿಹಾರವಾಗಿ ಬೆಳೆಯುತ್ತಿದೆ.

ಸಂಪನ್ಮೂಲ ವ್ಯಕ್ತಿ ಎಸ್‌‌ಡಿಎಂಸಿ ಪಾಲಕರು ಮತ್ತಿತರ ಅಧಿಕಾರಿಗಳು ಹಿತೈಷಿಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತಿದೆ
ವಿಠಲರೆಡ್ಡಿ ಕರಕನಳ್ಳಿ ಮುಖ್ಯ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT