ಸೋಮವಾರ, ಆಗಸ್ಟ್ 2, 2021
25 °C
ಬುಧವಾರ ಒಂದೇ ದಿನ 32 ಜನರಿಗೆ ಕೋವಿಡ್ 19 ಸೋಂಕು

ಬೀದರ್‌ ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಹುಮನಾಬಾದ್‌ ತಾಲ್ಲೂಕಿನಲ್ಲಿ 12, ಬಸವಕಲ್ಯಾಣ ತಾಲ್ಲೂಕಿನ 11 , ಔರಾದ್ ತಾಲ್ಲೂಕಿನ 5 ಹಾಗೂ ಭಾಲ್ಕಿ ತಾಲ್ಲೂಕಿನ ನಾಲ್ವರು ಸೇರಿ ಜಿಲ್ಲೆಯಲ್ಲಿ ಒಂದೇ ದಿನ ಒಟ್ಟು 32 ಜನರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 207ಕ್ಕೆ ಏರಿದೆ.

ಬಸವಕಲ್ಯಾಣ ತಾಲ್ಲೂಕಿನ ಚಿಟ್ಟಾ(ಕೆ) ತಾಂಡಾದ 9, ಕಿಣ್ಣಿವಾಡಿ ಹಾಗೂ ಗಂಗಾರಾಮ ತಾಂಡಾದ ತಲಾ ಒಬ್ಬರು ಸೇರಿ 11 ಮಂದಿಗೆ ಕೋವಿಡ್‌ 19 ಸೋಂಕು ತಗುಲಿದೆ.

ಹುಮನಾಬಾದ್‌ ಪಟ್ಟಣದ ಜೋಶಿಗಲ್ಲಿಯ ಮೂವರು ಮಹಿಳೆಯರು, ಇಬ್ಬರು ಪುರುಷರು, ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ ಮುಂಬೈನಿಂದ ಬಂದು ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಆಗಿದ್ದ 22 ವರ್ಷದ ಯುವಕ ಹಾಗೂ ಹಿಲಾಲಪುರದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮುಂಬೈನಿಂದ ಹುಮನಾಬಾದ್‌ಗೆ ಬಂದ 63 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ವರ್ಷದ ಇಬ್ಬರು ಬಾಲಕರು, 19 ವರ್ಷದ ಯುವಕ, 21 ಹಾಗೂ 35 ವರ್ಷದ ಮಹಿಳೆಯರ ವೈದ್ಯಕೀಯ ವರದಿ ಪಾಸಿಟಿವ್‌ ಬಂದಿದೆ.

ಔರಾದ್ ತಾಲ್ಲೂಕಿನ ಏಕಂಬಾದ 40, 34 ವರ್ಷದ ಒಂದೇ ಕುಟುಂಬದ ಇಬ್ಬರು ಪುರುಷರು ಹಾಗೂ 34 ವರ್ಷದ ಮಹಿಳೆಗೆ ಹಾಗೂ ಚಿಮ್ಮೆಗಾಂವ್ ತಾಂಡಾದ 47 ಹಾಗೂ 46 ವರ್ಷದ ಇಬ್ಬರು ಪುರುಷರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರು ಮೇ 18 ರಂದು ಮುಂಬೈನಿಂದ ಬಂದು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು.

ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ, ತಹಶೀಲ್ದಾರ್ ಎಂ. ಚಂದ್ರಶೇಖರ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಯ್ಯ ಸ್ವಾಮಿ, ಏಕಂಬಾ ಮತ್ತು ಚಿಮ್ಮೆಗಾಂವ್ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಎರಡೂ ಊರುಗಳ ಮೂರು ಕಿ.ಮೀ. ಅಂತರದೊಳಗೆ ಸೀಲ್ ಡೌನ್ ಮಾಡಿ ಇಲ್ಲಿ ಜನ ಹೊರ ಬರದಂತೆ ನಿರ್ಬಂಧ ವಿಧಿಸಿದ್ದಾರೆ.

ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೆ, ಡಾ.ನಿತಿನ್, ಕಂದಾಯ ನಿರೀಕ್ಷಕ ರಮೇಶ , ಪೋಲಿಸರು ಹಾಗೂ ವೈದ್ಯರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದು, ಗ್ರಾಮಸ್ಥರು ಅನಗತ್ಯವಾಗಿ ಮನೆಗಳಿಂದ ಹೊರ ಬಂದು ಸಾರ್ವಜನಿಕವಾಗಿ ಸಂಚರಿಸದಂತೆ ಎಚ್ಚರ ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು