ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಬಿಸಿ ದೋಸೆಯಂತೆ ಎಸಿ, ಕೂಲರ್‌ ಮಾರಾಟ

ಬೇಡಿಕೆ ಹೆಚ್ಚಿದ್ದರಿಂದ ಸಕಾಲಕ್ಕೆ ಎಸಿ ಪೂರೈಸಲು ಡೀಲರ್‌ಗಳಿಗೆ ಸಮಸ್ಯೆ
Published 12 ಮೇ 2024, 4:35 IST
Last Updated 12 ಮೇ 2024, 4:35 IST
ಅಕ್ಷರ ಗಾತ್ರ

ಬೀದರ್‌: ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ ಕಂಪನಿಗಳಿಗೆ ಇದು ವರವಾಗಿ ಪರಿಣಮಿಸಿದೆ.

ಏಪ್ರಿಲ್‌ ಕೊನೆಯಿಂದ ಬಿಸಿಲಿನ ಪ್ರಮಾಣದಲ್ಲಿ ಭಾರಿ ಏರಿಕೆ ಆಗಿರುವುದರಿಂದ ಎಸಿ ಹಾಗೂ ಏರ್‌ ಕೂಲರ್‌ಗಳು ಬಿಸಿ ದೋಸೆಗಳಂತೆ ಬಿಕರಿ ಆಗುತ್ತಿವೆ. ಅದರಲ್ಲೂ ಎಸಿಗಳಿಗೆ ಸ್ವಲ್ಪ ಹೆಚ್ಚೇ ಬೇಡಿಕೆ ಸೃಷ್ಟಿಯಾಗಿದೆ. ಈ ಹಿಂದೆ ಈ ಕಂಪನಿ, ಆ ಕಂಪನಿ, ಇಷ್ಟು ರೇಟಿಂಗ್‌, ಅಷ್ಟು ರೇಟಿಂಗ್‌ ಎಂದು ಜನ ಚೌಕಾಸಿ ಮಾಡಿ, ಆನ್‌ಲೈನ್‌ನಲ್ಲಿ ದರ ವ್ಯತ್ಯಾಸವನ್ನು ನೋಡಿಕೊಂಡು ಆಯ್ಕೆ ಮಾಡುತ್ತಿದ್ದರು. ಈಗ ಬೇಡಿಕೆ ಬಹಳ ಹೆಚ್ಚಾಗಿದ್ದು, ಪೂರೈಕೆ ತಗ್ಗಿರುವುದರಿಂದ ಯಾವುದಾದರೂ ಸರಿ ಮೊದಲು ಮನೆಗೊಂದು ಎಸಿ ಕೊಂಡೊಯ್ದರಾಯಿತು ಎಂಬ ಭಾವನೆ ಬಂದಿದೆ. ಇಷ್ಟಾದರೂ ಸಕಾಲಕ್ಕೆ ಎಸಿಗಳು ಸಿಗುತ್ತಿಲ್ಲ. ಸ್ಥಳೀಯ ಮಳಿಗೆಗಳಿಂದ ಹೆಚ್ಚಾಗಿ ಡೀಲರ್‌ಗಳಿಗೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಆದರೆ, ಅಂದುಕೊಂಡ ಸಮಯಕ್ಕೆ ಪೂರೈಕೆ ಆಗುತ್ತಿಲ್ಲ. ಕೆಲವು ಕಂಪನಿಗಳಂತೂ ಪೂರೈಸಲು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿವೆ.

‘ಬೇಸಿಗೆಯಲ್ಲಿ ಇಡೀ ದೇಶದಲ್ಲಿ ಸರಾಸರಿ ಒಂದು ಅಂದಾಜು ಸಂಖ್ಯೆಯಲ್ಲಿ ಎಸಿಗಳು ಬೇಕಾಗಬಹುದು ಎಂದು ಊಹಿಸಿ ಕಂಪನಿಗಳು ಎಸಿಗಳನ್ನು ತಯಾರಿಸುತ್ತವೆ. ಆದರೆ, ಇಡೀ ದೇಶದಲ್ಲಿ ಈ ಸಲ ಬಿಸಿಲಿನ ಪ್ರಮಾಣ ಹೆಚ್ಚಿದೆ. ಮಹಾನಗರಗಳಲ್ಲಿ ಐ.ಟಿ, ಬಿ.ಟಿ ಸೇರಿದಂತೆ ದೊಡ್ಡ ಕಂಪನಿಗಳು, ಕೈಗಾರಿಕೆಗಳಲ್ಲಿ ಸಹಜವಾಗಿಯೇ ಹೆಚ್ಚಿನ ಬೇಡಿಕೆ ಇರುತ್ತದೆ. ಈಗ ಮೇಲ್ಮಧ್ಯಮ ವರ್ಗದವರೆಲ್ಲ ಎಸಿ ಖರೀದಿಸುತ್ತಿದ್ದಾರೆ. ಇದರಿಂದ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಎಸಿಗಳು ಸಿಗಲಾರದಂತಹ ಪರಿಸ್ಥಿತಿ ಇದೆ’ ಎಂದು ಎಸಿ ಡೀಲರ್‌ ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಬ್ರ್ಯಾಂಡೆಡ್‌ ಎಸಿಗಳಿಗೆ ಭಾರಿ ಬೇಡಿಕೆ ಇದೆ. ಅವುಗಳು ಈಗ ಮೂರನೇ ಹಾಗೂ ನಾಲ್ಕನೇ ಹಂತದ ನಗರಗಳಿಗೆ ಪೂರೈಸುತ್ತಿಲ್ಲ. ಮಹಾನಗರಗಳನ್ನು ಕೇಂದ್ರೀಕರಿಸಿ ವಹಿವಾಟು ನಡೆಸುತ್ತಿದ್ದಾರೆ. ಇದರಿಂದಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಂಪನಿಗಳಿಗೆಲ್ಲ ಬೇಡಿಕೆ ಸೃಷ್ಟಿಯಾಗಿದೆ. ಯಾವುದಾದರೂ ಇರಲಿ ಎಂದು ಜನ ಖರೀದಿಸುತ್ತಿದ್ದಾರೆ’ ಎಂದು ಹೇಳಿದರು.

ಇದು ಎಸಿಗಳ ವಿಷಯವಾದರೆ ಏರ್‌ ಕೂಲರ್‌ಗಳೇನೂ ಕಮ್ಮಿ ಇಲ್ಲ. ವಿವಿಧ ಕಂಪನಿಗಳು, ಸ್ಥಳೀಯವಾಗಿ ತಯಾರಿಸಲಾಗುವ ಕೂಲರ್‌ಗಳಿಗೆಲ್ಲ ಡಿಮ್ಯಾಂಡ್‌ ಹೆಚ್ಚಾಗಿದೆ. ಇದೇ ಅವಕಾಶವನ್ನು ಬಳಸಿಕೊಂಡು ಬೆಲೆ ಕೂಡ ಹೆಚ್ಚಿಸಲಾಗಿದೆ. ಈ ಹಿಂದೆ ಮಧ್ಯಮ ಗಾತ್ರದ ಏರ್‌ ಕೂಲರ್‌ ₹5ರಿಂದ ₹6 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಏಕಾಏಕಿ ಅವುಗಳ ಬೆಲೆ ₹7ರಿಂದ ₹9 ಸಾವಿರದ ವರೆಗೆ ಹೆಚ್ಚಳವಾಗಿದೆ. ಬ್ರ್ಯಾಂಡೆಡ್‌ ಕಂಪನಿಗಳ ಬೆಲೆ ಇನ್ನಷ್ಟು ಹೆಚ್ಚಾಗಿದೆ. ಆದರೆ, ಎಸಿಗಳಿಗೆ ಹೋಲಿಸಿದರೆ ಕೂಲರ್‌ಗಳು ತಕ್ಷಣಕ್ಕೆ ಸಿಗುತ್ತಿರುವುದು ಸಮಾಧಾನಕರ ಸಂಗತಿ.

‘ಜನ ಬ್ರ್ಯಾಂಡೆಡ್‌ ಕಂಪನಿಗಳ ಬೆಲೆ ಎಷ್ಟಿದ್ದರೂ ಅವುಗಳ ಹೆಸರು ನೋಡಿದ ತಕ್ಷಣವೇ ಕೊಂಡೊಯ್ಯುತ್ತಾರೆ. ಸ್ಥಳೀಯವಾಗಿ ತಯಾರಿಸಿದ ಕೂಲರ್‌ಗಳ ಬೆಲೆ ಕಡಿಮೆ. ಕಂಪನಿಗಳಂತೆ ಇವುಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತವೆ. ಎಲ್ಲದರ ಬೆಲೆ ಹೆಚ್ಚಾಗಿದೆ. ಹೀಗಾಗಿ ತುಸು ಬೆಲೆ ಹೆಚ್ಚಿಸಲಾಗಿದೆ. ಬೇಸಿಗೆ ಮುಗಿದ ನಂತರ ಕೂಲರ್‌ಗಳನ್ನು ಯಾರು ಕೇಳುವುದಿಲ್ಲ’ ಎಂದು ಕೂಲರ್‌ ಮಳಿಗೆ ಮಾಲೀಕ ಸಲೀಂ ಹೇಳಿದರು.

ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರ ಮನೆಗಳಲ್ಲಿ ಹಿಂದೆ ಫ್ಯಾನ್‌ಗಳು ತಿರುಗುತ್ತಿದ್ದವು. ಈಗ ಅವುಗಳ ಜಾಗ ಎಸಿ, ಕೂಲರ್‌ಗಳು ಆಕ್ರಮಿಸಿಕೊಂಡಿವೆ. ಬಿಸಿ ಗಾಳಿಯಿಂದ ಅನಾರೋಗ್ಯಕ್ಕೆ ಒಳಗಾಗುವುದರ ಬದಲು ಇದು ಉತ್ತಮ ಎನ್ನುತ್ತಾರೆ ಸಾರ್ವಜನಿಕರು.

ಎಸಿ ಕೂಲರ್‌ ರಿಪೇರರ್‌ಗಳಿಗೂ ಬೇಡಿಕೆ

ಬೇಸಿಗೆಯಲ್ಲಿ ಎಸಿ ಕೂಲರ್‌ಗಳಷ್ಟೇ ಅಲ್ಲ ಅವುಗಳನ್ನು ದುರಸ್ತಿಗೊಳಿಸುವವರಿಗೂ ಈಗ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಹೈ ವೊಲ್ಟೇಜ್‌ ಅಥವಾ ಇನ್ನಿತರೆ ಕಾರಣಗಳಿಂದ ಎಸಿ ಕೂಲರ್‌ಗಳು ಕೈಕೊಡುವುದು ಸಹಜ. ವಿಪರೀತ ಬಿಸಿಲಿನಲ್ಲಿ ಎಸಿ ಕೂಲರ್‌ ಇಲ್ಲದೆ ಒಂದು ನಿಮಿಷವೂ ಕೂರಲಿಕ್ಕೆ ಆಗದ ಪರಿಸ್ಥಿತಿ ಇದೆ. ದುರಸ್ತಿ ಮಾಡುವವರಿಗೆ ಕರೆ ಮಾಡಿದರೆ ಎರಡ್ಮೂರು ದಿನಗಳ ನಂತರ ಭೇಟಿ ಕೊಡುತ್ತಿದ್ದಾರೆ. ಇದು ಅವರ ಮೇಲಿರುವ ಕೆಲಸದ ಒತ್ತಡ ತೋರಿಸುತ್ತದೆ. ಕೆಲವರು ಅಷ್ಟೊಂದು ದಿನ ಕಾದು ಕೂರಲಿಕ್ಕಾಗದೇ ಅವರ ವಾಹನಗಳಲ್ಲಿಯೇ ಮಳಿಗೆಗೆ ತೆಗೆದುಕೊಂಡು ಹೋಗಿ ದುರಸ್ತಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಿಸಿಲು ಸೃಷ್ಟಿಸಿದೆ. ಬಹುತೇಕ ಎಲೆಕ್ಟ್ರಿಕ್‌ ಮಳಿಗೆಗಳವರಿಗೆ ಈಗ ಬಿಡುವಿಲ್ಲದ ಕೆಲಸ.

ಮಾರಾಟಕ್ಕೆ ಜೋಡಿಸಿ ಇಟ್ಟಿರುವ ಸ್ಥಳೀಯ ಏರ್ ಕೂಲರ್‌ಗಳು
ಮಾರಾಟಕ್ಕೆ ಜೋಡಿಸಿ ಇಟ್ಟಿರುವ ಸ್ಥಳೀಯ ಏರ್ ಕೂಲರ್‌ಗಳು
ಏರ್‌ ಕೂಲರ್‌ಗಳನ್ನು ದುರಸ್ತಿಗೊಳಿಸುತ್ತಿರುವುದು
ಏರ್‌ ಕೂಲರ್‌ಗಳನ್ನು ದುರಸ್ತಿಗೊಳಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT