ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ: ಸಚಿವ ಪ್ರಭು ಚವಾಣ್‌

Last Updated 1 ನವೆಂಬರ್ 2021, 8:20 IST
ಅಕ್ಷರ ಗಾತ್ರ

ಬೀದರ್: ‘ಬಹು ಭಾಷಿಕ ಬೀದರ್ ಜಿಲ್ಲೆಯ ಗಡಿಯಲ್ಲಿ ಕನ್ನಡ ಇನ್ನಷ್ಟು ನೆಲೆಯೂರುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದರು.

ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಅನ್ಯ ಭಾಷಿಕರ ಸಂಖ್ಯೆ ಅಧಿಕ ಇದೆ. ಕನ್ನಡ ಗಟ್ಟಿಗೊಳಿಸಲು ಪ್ರತಿಯೊಂದು ಗ್ರಾಮದಲ್ಲಿ ಕನ್ನಡ ಶಾಲೆ ತೆರೆಯಲಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ಇರಲಿಲ್ಲ. ನಾನು ಸಚಿವನಾದ ಮೇಲೆ ಕನ್ನಡ ಭವನ ನಿರ್ಮಾಣ ಮಾಡಿದ್ದೇನೆ. ಕಟ್ಟಡದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಹೇಳಿದರು.

‘ರಾಜ್ಯೋತ್ಸವದ ದಿನ ಹಿರಿಯ ಸಾಹಿತಿಗಳ ಮನೆ ಮನೆಗೆ ಭೇಟಿ ನೀಡಿ ಅವರಿಗೆ ಕನ್ನಡದ ಅಮೂಲ್ಯ ಕೃತಿಗಳನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಗೌರವಿಸುವ ಹೊಸ ಸಂಪ್ರದಾಯ ಶುರು ಮಾಡಿದ್ದೇವೆ. ಇದರಿಂದ ಯುವ ಸಾಹಿತಿಗಳಿಗೂ ಪ್ರೇರಣೆ ದೊರೆಯುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣದಲ್ಲಿದೆ. ಕಡಿಮೆ ಪ್ರಕರಣಗಳಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 14 ಲಕ್ಷ ಜನರಿಗೆ ಕೋವಿಡ್‌ ಪ್ರತಿಬಂಧಕ ಲಸಿಕೆ ಕೊಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ಕೊಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಶಾಸಕರಾದ ರಹೀಂಖಾನ್‌, ಬಂಡೆಪ್ಪ ಕಾಶೆಂಪೂರ್,  ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಅರವಿಂದಕುಮಾರ ಅರಳಿ, ರಘುನಾಥರಾವ್ ಮಲ್ಕಾಪುರೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ, ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಬಗದಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

19 ಮಂದಿಗೆ ರಾಜ್ಯೋತ್ಸವ ಗೌರವ

ಸಾಹಿತ್ಯ: ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಾಹಿತಿ ಬಸವರಾಜ ಬಲ್ಲೂರ, ಪಂಚಾಕ್ಷರಿ ಪುಣ್ಯಶೆಟ್ಟಿ, ಬಸವರಾಜ ಗುರಪ್ಪ, ಬಿ.ಎಂ. ಅಮರವಾಡಿ, ರಮೇಶ ಸಲಗರ.

ಶಿಕ್ಷಣ: ಸುನೀತಾ ದಾಡಗೆ, ಇಂದ್ರಜೀತ್ ಪಾಂಡುರಂಗ, ಶರಣಪ್ಪ ಬಿರಾದಾರ.

ಮಾಧ್ಯಮ: ಪ್ರಜಾವಾಣಿಯ ಬಸವಕಲ್ಯಾಣ ತಾಲ್ಲೂಕು ವರದಿಗಾರ ಮಾಣಿಕ ಭೂರೆ, ಸುಷ್ಮಿತಾ ಮೋರೆ, ರಾಜೇಶ ಮುಗಟೆ,

ಛಾಯಾಗ್ರಹಣ: ವೀರಶೆಟ್ಟಿ ಪಾಟೀಲ, ಕೃಷಿ: ಜಾಫರ್‌ಮಿಯಾ ಚಿಟ್ಟಾ.

ಕೌಶಲಾಭಿವೃದ್ಧಿ: ಬೀದರ್ ಐಟಿಐ ಕಾಲೇಜಿನ ಪ್ರಾಚಾರ್ಯ ಶಿವಶಂಕರ ಟೋಕರೆ.

ಕ್ರೀಡಾ: ದಿಲೀಪಕುಮಾರ ನರಸಪ್ಪ, ಸಾಮಾಜಿಕ ಕ್ಷೇತ್ರ: ಮಲ್ಲಿಕಾರ್ಜುನ ಅಮ್ಟೆ, ಕ್ರಿಸ್ಟೋಫರ್‌ ಫರ್ನಾಂಡೀಸ್.

ವಿಜ್ಞಾನ: ಮಂಜುನಾಥ ಪ್ರಭಾಕರ, ಸಂಘ ಸಂಸ್ಥೆ: ಜ್ಯೋತಿ ಶ್ರೀಮಂತ ಸಪಾಟೆ, ಸಂಗೀತ: ಶಿವರಾಜ ಲಿಂಗಪ್ಪ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT