ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ಕಟ್ಟಡ, ಬಯಲಲ್ಲೇ ಪಾಠ

ಸೌಲಭ್ಯ ವಂಚಿತ ಗಂಗನಬಿಡ ಶಾಲೆ: 1ರಿಂದ 8ನೇ ತರಗತಿಯಲ್ಲಿ 225 ಮಕ್ಕಳು
Last Updated 3 ಜುಲೈ 2022, 2:18 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ದಾಬಕಾ (ಸಿ) ಹೋಬಳಿ ವ್ಯಾಪ್ತಿಯ ಗಂಗನಬಿಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ನೂತನ ಕಟ್ಟಡದ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಮಕ್ಕಳಿಗೆ ಮೈದಾನದಲ್ಲೇ ಪಾಠ ಮಾಡಬೇಕಾಗಿದೆ.

‘ಗಂಗನಬಿಡ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 225 ವಿದ್ಯಾರ್ಥಿಗಳು ಇದ್ದಾರೆ. ಹಳೆ ಕಟ್ಟಡ ಶಿಥಿಲಗೊಂಡಿದ್ದು, ಕಾಂಕ್ರೀಟ್‌ ಛಾವಣಿಯ ಸಿಮೆಂಟ್‌ ಚಕ್ಕಳೆಗಳು ಬೀಳುತ್ತಿವೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಗಂಭೀರ ಇರುತ್ತದೆ. ಮಳೆ ನಿಂತರೂ ಛಾವಣಿ ಸೋರಿಕೆ ನಿಲ್ಲುವುದಿಲ್ಲ. ಕಟ್ಟಡ ಕುಸಿಯುವ ಭೀತಿ ಕಾಡುತ್ತದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

‘ಪಾಠವು ಸುಗಮವಾಗಿ ಸಾಗಬೇಕು ಮತ್ತು ಮಕ್ಕಳೂ ಸುರಕ್ಷಿತವಾಗಿ ಇರಬೇಕು ಎಂಬ ಉದ್ದೇಶದಿಂದ ಆಟದ ಮೈದಾನದಲ್ಲಿ ಪಾಠ ಮಾಡುತ್ತಿದ್ದೇವೆ. ಆಯಾ ತರಗತಿಯ ಮಕ್ಕಳನ್ನು ಒಂದೊಂದು ಕಡೆ ಕೂರಿಸುತ್ತೇವೆ’ ಎಂದು ಅವರು ಹೇಳಿದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 2018ರಲ್ಲೇ ₹ 26 ಲಕ್ಷ ಅಂದಾಜು ವೆಚ್ಚದಲ್ಲಿ 3 ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತು. ಆದರೆ, ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿ ಯಾಕೆ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಯಾರೂ ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೂಲಸೌಲಭ್ಯ ಕೊರತೆ: ‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಶಾಲೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಮೂಲಸೌಕರ್ಯಗಳಿಲ್ಲ. ನಾಲ್ಕು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ರಚನೆಯಾಗಿಲ್ಲ. ಐವರು ಕಾಯಂ ಶಿಕ್ಷಕರಿದ್ದಾರೆ. ಇಬ್ಬರು ಶಿಕ್ಷಕರ ಕೊರತೆಯಿದೆ’ ಎಂದು ಗ್ರಾಮಸ್ಥ ರಾಜಕುಮಾರ ಬಿರಾದಾರ ತಿಳಿಸಿದ್ದಾರೆ.

*ಮೈದಾನದಲ್ಲಿ ಕೂತು ಪಾಠ ಆಲಿಸಲು ಕಷ್ಟವಾಗುತ್ತದೆ. ಇದರಿಂದಾಗಿ ನಮ್ಮ ಅಭ್ಯಾಸಕ್ಕೆ ತುಂಬಾ ತೊಂದರೆ ಆಗಿದೆ. ಕಟ್ಟಡ ಕಾಮಗಾರಿ ಬೇಗನೇ ಪೂರ್ಣಗೊಳಿಸಿ, ಸಮಸ್ಯೆ ನಿವಾರಿಸಬೇಕು

ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ

*ಶಾಲೆಗೆ ನಾನು ಭೇಟಿ ನೀಡಿದಾಗ, ಬಯಲಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರಲಿಲ್ಲ. ನೂತನ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಕ್ಕಳಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲಾಗುವುದು

ಎಚ್‌.ಎಸ್‌.ನಗನೂರು, ಕ್ಷೇತ್ರ ಶಿಕ್ಷಣಾಧಿಕಾರಿ, ಕಮಲನಗರ–ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT