ಭಾನುವಾರ, ಅಕ್ಟೋಬರ್ 20, 2019
21 °C
ಮಳೆಯಿಂದ ಸೋರುತ್ತಿರುವ ಛಾವಣಿ

ಬೀದರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇಲ್ಲ ಸೌಲಭ್ಯ

Published:
Updated:
Prajavani

ಬೀದರ್: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಐದು ವರ್ಷಗಳಿಂದ ಸೌಲಭ್ಯಕ್ಕಾಗಿ ಗೋಗರೆಯುತ್ತಿದೆ. ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿದ್ದರೂ ಅಧಿಕಾರಿಗಳು ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.

ಹೆಚ್ಚು ಶುಲ್ಕ ಪಾವತಿಸಿ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿನಿಯರು ಇಲ್ಲಿನ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಮೂಲಸೌಕರ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಕಾಲೇಜಿನಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಿಂದೆ ಇದ್ದ ಹಳೆಯದಾದ ಮೂತ್ರಾಲಯವನ್ನು ಅವರಿಗೆ ಬಳಸಲು ಕೊಡಲಾಗಿದೆ. ಕಾಲೇಜಿನ ಆವರಣ ಸಮತಟ್ಟಾಗಿಲ್ಲ. ಹಳೆಯ ಪೀಠೋಪಕರಣಗಳನ್ನು ಒಂದು ಕಡೆಗೆ ಗುಡ್ಡೆ ಹಾಕಲಾಗಿದೆ. ಕೆಲವು ತಿಂಗಳ ಹಿಂದೆ ವಿದ್ಯಾರ್ಥಿನಿಯರೇ ಒಂದಿಷ್ಟು ಪೀಠೋಪಕರಣಗಳನ್ನು ಸ್ವಚ್ಛ ಮಾಡಿಕೊಂಡಿದ್ದಾರೆ.

ಕಾಲೇಜು ಆರಂಭಿಸಿದಾಗಿನಿಂದ ಇಲ್ಲಿನ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಐದು ವರ್ಷಗಳ ಅವಧಿಯಲ್ಲಿ ಬೀದರ್‌ಗೆ ಬಂದು ಹೋದ ಎಲ್ಲ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ.

ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರು ಮಹಿಳಾ ಕಾಲೇಜಿಗೆ ಹೊಸ ಕಟ್ಟಡಕ್ಕೆ ಜಾಗ ಒದಗಿಸುವ ತಯಾರಿಯಲ್ಲಿದ್ದಾಗಲೇ ಅವರ ವರ್ಗವಾಯಿತು. ನಂತರ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲೇ ಬಿದ್ದುಕೊಂಡಿತು. ಅಲ್ಪಾವಧಿಗೆ ಕಾರ್ಯನಿರ್ವಹಿಸಿದ ಅನಿರುದ್ಧ ಶ್ರವಣ ಅವರು ಒಂದಿಷ್ಟು ಅನುಕೂಲ ಮಾಡಿಕೊಟ್ಟಿದ್ದು ಬಿಟ್ಟರೆ ಬೇರೆ ಯಾರೂ ವಿದ್ಯಾರ್ಥಿನಿಯರ ನೆರವಿಗೆ ಬಂದಿಲ್ಲ.

ಈಗಿರುವ ಕಾಲೇಜು ಕಟ್ಟಡದ ಜಾಗ ಯಾರಿಗೆ ಸೇರಿದ್ದು ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲ. ಕಲಬುರ್ಗಿಯ ಉನ್ನತ ಶಿಕ್ಷಣ ಇಲಾಖೆಯ ಕಚೇರಿಯಲ್ಲೂ ಜಮೀನಿಗೆ ಸಂಬಂಧಿಸಿದ ದಾಖಲೆ ಇಲ್ಲ. ಈ ಕಾಲೇಜು ಕಟ್ಟಡದಲ್ಲಿ ಆದರ್ಶ ವಿದ್ಯಾಲಯ ಇತ್ತು. ಅದೇ ಕಟ್ಟಡವನ್ನು ಮೊರಾರ್ಜಿ ವಸತಿ ಶಾಲೆ ಹಾಗೂ ಮಹಿಳಾ ಕಾಲೇಜಿಗೆ ಕೊಡಲಾಗಿದೆ. ದಾಖಲೆ ಇಲ್ಲದ ಜಾಗದಲ್ಲಿ ಯಾವ ಆಧಾರದ ಮೇಲೆ ಲೋಕೋಪಯೋಗಿ ಇಲಾಖೆಯವರು ಕಟ್ಟಡ ಕಟ್ಟಿದರು ಎನ್ನುವುದು ನಿಗೂಢವಾಗಿದೆ.

ಓಲ್ಡ್‌ಸಿಟಿಯಲ್ಲಿ ಪಾಳುಬಿದ್ದ ಕಟ್ಟಡದಲ್ಲಿ ನಡೆಯುತ್ತಿದ್ದ ಮಹಿಳಾ ಕಾಲೇಜಿಗೆ 2018ರಲ್ಲಿ ಕಟ್ಟಡವನ್ನು ಹಸ್ತಾಂತರಿಸಲಾಗಿದೆ. ಹಳೆಯ ಕಟ್ಟಡ ಸ್ವಲ್ಪ ಮಳೆ ಬಂದರೂ ಸೋರುತ್ತಿದೆ. ಕಚೇರಿ ಸಿಬ್ಬಂದಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇಲ್ಲ. ಪ್ರಾಚಾರ್ಯರ ಕೊಠಡಿಯಲ್ಲೇ ಎಲ್ಲರೂ ಟೇಬಲ್‌ಗಳನ್ನು ಇಟ್ಟುಕೊಂಡಿದ್ದಾರೆ. ಕೊಠಡಿಯೊಳಗೆ ಸಾಕಷ್ಟು ಸ್ಥಳಾವಕಾಶವೂ ಇಲ್ಲ.

 ‘ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿ ಇದೆ. ಜಿಲ್ಲಾ ಆಡಳಿತ ಪ್ರಸ್ತಾವ ಸಲ್ಲಿಸಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕುತ್ತಿದೆ’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಹೇಳುತ್ತಾರೆ.

ಪ್ರಸ್ತಾವ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಅನೇಕ ಬಾರಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಆದರೆ ಇಲ್ಲಿಯ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ರಾಜಕಾರಣಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗದಂತೆ ಪರೋಕ್ಷ ನೆರವು ನೀಡುತ್ತಿದ್ದಾರೆ ಎಂದು ಪಾಲಕರು ಆರೋಪಿಸುತ್ತಾರೆ.

ಕಾಲೇಜಿಗೆ ಜುಲೈನಲ್ಲಿ 10 ಕಂಪ್ಯೂಟರ್‌ಗಳು ಬಂದಿವೆ. ಅಕ್ಟೋಬರ್‌ ಬಂದರೂ ಅವುಗಳನ್ನು ಬಾಕ್ಸ್‌ನಿಂದ ಹೊರಗೆ ತೆಗೆದಿಲ್ಲ. ಇನ್‌ಸ್ಟಾಲೇಷನ್‌ಗೆ ಹಣ ಬಂದಿಲ್ಲವೆಂದು ಹಾಗೆಯೇ ಇಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಕಂಪ್ಯೂಟರ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳ ಮನವಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.

ಕಾಲೇಜಿನಲ್ಲಿ ಬಿಎಸ್ಸಿ ಆರಂಭವಾಗಿದೆ. ಮೊದಲ ವರ್ಷ 22, ಎರಡನೇ ವರ್ಷ 15,ಈ ವರ್ಷ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾಲೇಜಿನಲ್ಲಿ ಕಂಪ್ಯೂಟರ್‌ ಇದ್ದರೂ ಪ್ರಾಯೋಗಿಕ ಶಿಕ್ಷಣಕ್ಕಾಗಿ ಕೇಂದ್ರ ಬಸ್‌ ನಿಲ್ದಾಣ ಬಳಿ ಇರುವ ಅಕ್ಕ ಮಹಾದೇವಿ ಮಹಿಳಾ ಕಾಲೇಜಿಗೆ ಹೋಗುತ್ತಿದ್ದಾರೆ.

ಕಾಲೇಜಿನ ಹಿಂಬದಿಗೆ ಹಂದಿಗಳನ್ನು ಸಾಕಲಾಗಿದೆ. ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಪಾಲ್ಗೊಂಡಿದ್ದಾಗ ಇಲ್ಲಿನ ಸಿಬ್ಬಂದಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಅವರ ಗಮನಕ್ಕೂ ತಂದಿದ್ದರು. ಅವರು ನಗರಸಭೆ ಅಧಿಕಾರಿಗೆ ಕರೆ ಮಾಡಿ ಕಾಲೇಜಿನ ಸುತ್ತ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದರು. ಅಧಿಕಾರಿಗಳು ರಾಜಕಾರಣಿಗಳಂತೆ ಭರವಸೆಗಳನ್ನೇ ನೀಡುತ್ತಿದ್ದಾರೆ ಹೊರತು ಸೌಲಭ್ಯ ಕಲ್ಪಿಸುತ್ತಿಲ್ಲ.

‘ಕಾಲೇಜಿಗೆ ಮೂಲಸೌಕರ್ಯ ಒದಗಿಸುವಂತೆ ಈಗಾಗಲೇ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಪ್ರಾಚಾರ್ಯ ಡಿ.ಎನ್‌. ಬಕಚೇಡಿ ಹೇಳುತ್ತಾರೆ.

Post Comments (+)